Tuesday 20 November 2018



ಸುಭಾಷಿತ - ೧


ಯದಶಕ್ಯಂ ನ ತಚ್ಛಕ್ಯಂ
ಯಚ್ಛಕ್ಯಂ ಶಕ್ಯಮೇವ ತತ್।
ನೋದಕೇ ಶಕಟೋ ಯಾತಿ
ನ ನೌಕಾ ಗಚ್ಚತಿ ಸ್ಥಲೇ।।

ಅನ್ವಯ ಅರ್ಥ:

ಯತ್ ಅಶಕ್ಯಂ(ಯಾವುದು ಅಸಾಧ್ಯವೋ)
ತತ್ ನ ಶಕ್ಯಮ್(ಅದು ಸಾಧ್ಯವಲ್ಲ)
ಯತ್ ಶಕ್ಯಂ(ಯಾವುದು ಸಾಧ್ಯವೋ)
ತತ್ ಶಕ್ಯಮ್ ಏವ(ಅದು ಖಂಡಿತವಾಗಿಯೂ ಸಾಧ್ಯ)
ಉದಕೇ(ನೀರಿನಲ್ಲಿ )
ಶಕಟಃ(ಎತ್ತಿನಗಾಡಿಯು)
ನ ಯಾತಿ(ಹೋಗಲಾರದು)
ನೌಕಾ(ನೌಕೆಯು)
ಸ್ಥಲೇ (ನೆಲದಲ್ಲಿ)
ನ ಗಚ್ಛತಿ(ಹೋಗಲಾರದು).

ಭಾವಾರ್ಥ:

ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಇದೆ. ಅದನ್ನು ಗುರುತಿಸಿ ಬೆಳೆಸಿಕೊಂಡಾಗ ಆ ವಿಷಯದಲ್ಲಿ ಪರಿಣತಿ ಹೊಂದಬಹುದು.
ಸಾಮರ್ಥ್ಯ ಎಂಬುದು ತೀರಾ ವೈಯಕ್ತಿಕ. ಎಲ್ಲರೂ ಎಲ್ಲದರಲ್ಲೂ ಸಮರ್ಥರಾಗಿರಲು ಸಾಧ್ಯವಿಲ್ಲ.
ಒಂದರಲ್ಲಿ ಪರಿಣತನಾದವನು ಇನ್ನೊಂದು ವಿಷಯದಲ್ಲಿ ಖಂಡಿತವಾಗಿಯೂ ತೀರಾ ಅಜ್ಞಾನಿಗಿರುತ್ತಾನೆ.

ನೆಲದ ಮೇಲೆ ಓಡಬಲ್ಲ ಬಂಡಿ ನೀರಿನಲ್ಲಿ ಸಾಗಲಾರದು. ಆಕಾಶದಲ್ಲಿ ಹಾರಾಡಲಾರದು. ನೀರಿನಲ್ಲಿ ವೇಗವಾಗಿ ಓಡಬಲ್ಲ ನೌಕೆ ನೆಲದಲ್ಲಿ ಹರಿದಾಡಲಾರದು.

ಶಾಸ್ತ್ರವಿಶಾರದನಾಗಿದ್ದರೂ ಈಜಲು ಬಾರದಿದ್ದರೆ ಅದನ್ನು ಕೊರತೆ ಎನ್ನುವುದು ಸರಿಯೇ?
ನುರಿತ ಶಿಲ್ಪಿ ಸಂಗೀತ ಅರಿತಿಲ್ಲದಿದ್ದರೆ ಅದು ತಪ್ಪೇ?

ಮಗುವು ಓದುವುದರಲ್ಲಿ ಹಿಂದಿದೆ ಎಂದು ಜರೆದು ಹೀಯಾಳಿಸಿದರೆ ಅದು ಸ್ವಹೀನತಾ ಭಾವದಿಂದ ಮುರುಟುತ್ತದೆ.
 ಅದರೊಳಗೆ ಇರಬಹುದಾದ ಕಲೆಯನ್ನೋ ಅಥವಾ ಇನ್ನಾವುದೇ ಸಾಮರ್ಥ್ಯವನ್ನು ಗುರುತಿಸಿ ಹುರಿದುಂಬಿಸಿದಾಗ ಆ ಮಗುವಿನ ಆತ್ಮಸ್ಥೈರ್ಯ ಹೆಚ್ಚುತ್ತದೆ.

ಲೋಕಕ್ಕೆ ಎಲ್ಲವೂ ಬೇಕು. ಯಾರಿಗೆ ಯಾವುದು ಸಾಧ್ಯವೋ ಅದನ್ನು ಇನ್ನೊಬ್ಬರೊಡನೆ ಹೋಲಿಸದೆ ಪ್ರಾಮಾಣಿಕವಾಗಿ ಪ್ರಯತ್ನಪೂರ್ವಕ ಮಾಡಿದರೆ  ಎಲ್ಲರಿಗೂ ಒಳಿತು.