Monday 25 March 2019

ಸುಭಾಷಿತ - ೬೨


ಅಧಾರ್ಮಿಕೋ ನರೋ ಯೋ ಹಿ ಯಸ್ಯ ಚಾಪ್ಯನೃತಂ ಧನಮ್।
ಹಿಂಸಾರತಶ್ಚ ಯೋ ನಿತ್ಯಂ ನೇಹಾಸೌ ಸುಖಮೇಧತೇ।।
 (ಮನು ಸ್ಮೃತಿ)

ಅನ್ವಯ:

 ಯಃ ನರಃ ಅಧಾರ್ಮಿಕಃ ಯಸ್ಯ ಧನಂ ಅಪಿ ಅನೃತಂ ಯಃ ನಿತ್ಯಂ ಹಿಂಸಾರತಃ ಚ ಅಸೌ ಇಹ ಸುಖಂ ನ ಏಧತೇ।

ಭಾವಾರ್ಥ:

ಯಾವ ಮನುಷ್ಯನು ಅಧಾರ್ಮಿಕನಾಗಿರುವನೋ, ಮೋಸದಿಂದ ಧನಾರ್ಜನೆಯನ್ನು ಮಾಡುತ್ತಾನೋ, ನಿತ್ಯ ಪರಹಿಂಸೆಯಲ್ಲಿ ತೊಡಗಿರುತ್ತಾನೋ ಅವನೆಂದಿಗೂ ಈ ಲೋಕದಲ್ಲಿ ಸುಖವನ್ನು ಹೊಂದುವುದಿಲ್ಲ.

 ಹಣದಿಂದ ಸುಖದ ಸೌಲಭ್ಯಗಳನ್ನು ಕೊಂಡುಕೊಳ್ಳಬಹುದು,ಆದರೆ ಸುಖವನ್ನು ಕೊಳ್ಳಲಾಗದು. ಸುಖಕ್ಕಾಗಿ ಅಧರ್ಮಮಾರ್ಗದಿಂದಲೋ ಸುಳ್ಳು ಹೇಳಿಯೋ ಹಿಂಸೆಯ ಮೂಲಕವೋ ಹಣ ಸಂಪಾದಿಸಿದರೆ ಅದರಿಂದ ಸುಖವೆಂದೂ ಸಿಗುವಂತಿಲ್ಲ. ಇತರರ ಗೋರಿಯ ಮೇಲೆ ಸೌಧ ಕಟ್ಟಿದರೆ ಅದು ಅಲ್ಲಾಡುತ್ತಲೇ ಇರುತ್ತದೆ. ಯಾವಾಗ ಬೀಳುತ್ತೇನೋ ಎಂಬ ಭಯ ಕಾಡುತ್ತಲೇ ಇರುತ್ತದೆ. ತಾನು ಹೇಳಿದ ಸುಳ್ಳು ಮಾಡಿದ ಮೋಸ ಹಿಂಸೆಗಳು ಅಂತರಂಗದಲ್ಲಿ ಚುಚ್ಚದೇ ಇರದು. ಚುಚ್ಚುತ್ತಿರುವ ಅಂತರಂಗದಲ್ಲಿ ಸುಖ ಹೇಗೆ ನೆಲೆಸೀತು? ಅಂತರಂಗಸುಖವನ್ನು ನೀಡುವ ಲಕ್ಷ್ಮಿಯು ಸತ್ಯ ಧರ್ಮ ನ್ಯಾಯವನ್ನು ಅನುಸರಿಸಿ ಬರುವವಳು. ಕೀರ್ತಿಯು ತ್ಯಾಗವನ್ನನುಸರಿಸಿ ಬರುತ್ತದೆ

Friday 22 March 2019

ಸುಭಾಷಿತ - ೬೧

ನಭೋಭೂಷಾ ಪೂಷಾ ಕಮಲವನಭೂಷಾ ಮಧುಕರೋ।ವಚೋಭೂಷಾ ಸತ್ಯಂ ವರವಿಭವಭೂಷಾ ವಿತರಣಮ್।।ಮನೋಭೂಷಾ ಮೈತ್ರೀ ಮಧುಸಮಯಭೂಷಾ ಮನಸಿಜಃ।ಸದೋಭೂಷಾ ಸೂಕ್ತಿಃ ಸಕಲಗುಣಭೂಷಾ ಚ ವಿನಯಃ।।



ಅನ್ವಯ: ನಭಸಃ ಪೂಷಾ ಭೂಷಾ
 ಕಮಲವನಸ್ಯ ಮಧುಕರಃ ಭೂಷಾ
 ವಚಸಃ ಸತ್ಯಂ ಭೂಷಾ
 ವರವಿಭವಸ್ಯ ವಿತರಣಮ್ ಭೂಷಾ
 ಸದಸಃ ಸೂಕ್ತಿಃ ಭೂಷಾ
 ಸಕಲಗುಣಾನಾಂ ಚ ವಿನಯಃ ಭೂಷಾ।


ಭಾವಾರ್ಥ:

 ದಿನವಿಡೀ ಆಕಾಶವು ಮೋಡದಿಂದ ಆವರಿಸಿ ಮಳೆ ಸುರಿಯುತ್ತಿದ್ದರೆ ಮನಸ್ಸಿಗೆ ಮುದವಿಲ್ಲ.
ಪಗಲುಮಿರುಳುಂ ಸುರಿವ ಬಲ್ಸೋನೆಯ ಜಿನುಂಗಿನತ್ತಣಿಂ ಎನ್ನ ಮನಂ ಬೇಸತ್ತುದುಂ. ಏನಾನುಮೊಂದು ನಲ್ಗತೆಯಂ ಪೇಳ ಎನ್ನುತ್ತಾಳೆ ಮುದ್ದಣನ ಮನೋರಮೆ.
ಕತ್ತಲು ಹರಿದು ಆಕಾಶದಲ್ಲಿ ಸೂರ್ಯನು ಬೆಳಗುತ್ತಿದ್ದಂತೆ ಎಲ್ಲೆಡೆ ಲವಲವಿಕೆ ಹರಡಲಾರಂಭಿಸುತ್ತದೆ . ಆಕಾಶಕ್ಕೆ ಸೂರ್ಯನೇ ಭೂಷಣ ರವಿಯಾಕಾಶಕೆ ಭೂಷಣಂ ಅಲ್ಲವೇ!
 ಸರೋವರದಲ್ಲಿ ಅರಳಿದ ತಾವರೆಗಳಿಗೆ ದುಂಬಿಗಳ ನಿನಾದವೇ ಭೂಷಣ. ಬರಿಯು ಅಂದವು ಎಂದಿಗೂ ಶೋಭಿಸದು ನೋಡಿ ಆನಂದಿಸುವ ಮಂದಿ ಇದ್ದಾಗ ಆ ಅಂದವು ಸಾರ್ಥಕವಾಗುತ್ತದೆ. ಮಾತಿಗೆ ಸತ್ಯವೇ ಭೂಷಣ.  ಮಾತಿನಲ್ಲಿ ಸತ್ಯವಿರಬೇಕು ಮನಃಸಾಕ್ಷಿಯನ್ನು ಮೀರದ ನಡತೆಯಿರಬೇಕು. ಅದು ಆತ್ಮೋನ್ನತಿಯ ದಾರಿ.
ಸಂಪತ್ತಿಗೆ ವಿತರಣೆಯೇ ಭೂಷಣ. ಸಿರಿಸಂಪತ್ತು ಎಷ್ಟೇ ಇದ್ದರೂ ಕಟ್ಟಿಟ್ಟಾಗ ಅದಕ್ಕೆ ಬೆಲೆಯಿಲ್ಲ. ಹತ್ತು ಮಂದಿಗಾಗಿ ಅದನ್ನು ವಿನಿಯೋಗಿಸಿದಾಗ ಅವರ ಹರಕೆಯಿಂದ ಸಿಗುವ ಸಂತೋಷ ಜಿಪುಣನಿಗಿಲ್ಲ.
 ಕೈ ಶೋಭಿಸುವುದು ದಾನದಿಂದ, ಚಿನ್ನದ ಕಂಕಣದಿಂದಲ್ಲ. ಚಿನ್ನದ ಕಂಕಣ ತೊಡುವ ಬದಲು ಒಬ್ಬ ಬಡ ವಿದ್ಯಾರ್ಥಿಗೆ ಸಹಾಯ ಮಾಡಿದರೆ ಆತನ ಬದುಕೂ ಸೊಗಸೀತು.
  ಮನಸ್ಸಿಗೆ ಮೈತ್ರಿಯೇ ಭೂಷಣ. ಸಂತೋಷವನ್ನು ಇತರರಿಗೆ ಹಂಚಿದಾಗ ಅದು ದ್ವಿಗುಣವಾಗುತ್ತದೆ. ದುಃಖದಿಂದ ಮನಸ್ಸಿನೊಳಗೇ ಕೊರಗುವ ಬದಲು ಆತ್ಮೀಯರಲ್ಲಿ ಹೇಳಿಕೊಂಡಾಗ ಶಮನವಾಗುತ್ತದೆ.
   ವಸಂತಕಾಲಕ್ಕೆ ಕಾಮನೇ ಭೂಷಣ. ಸಜ್ಜನರ ಸಭೆಗೆ ಸುಸಂಸ್ಕೃತ ಭಾಷಣವೇ ಭೂಷಣ. ಪರರ ದೂಷಣೆ ಮಾಡಲು ಸಭೆ ವೇದಿಕೆಯಲ್ಲ. ಹತ್ತು ಸಮಸ್ತರು ಸೇರಿದಲ್ಲಿ ಮಾತನಾಡುವಾಗ ಎಚ್ಚರವಿರಬೇಕು. ಒಳ್ಳೆಯ ವಿಚಾರಗಳ ಚಿಂತನ ಮಂಥನ ನಡೆದರೆ ಅದು ನಿಜವಾದ ಅರ್ಥದಲ್ಲಿ ಸಭೆ. ಸಂಸ್ಕೃತದಲ್ಲಿ ಸಭಿಕರು ಎಂದರೆ ಜೂಜಾಡುವವರು ಎಂಬ ಅರ್ಥವೂ ಇದೆ. ಪರನಿಂದೆ ಮಾಡುತ್ತಾ ಮೇಜು ಗುದ್ದಿ ಗದ್ದಲ ಕೋಲಾಹಲ ಮಾಡಿದರೆ ಅದು ಆ ಅರ್ಥದಲ್ಲಿ ಸಭೆಯಾದೀತು ಅಷ್ಟೇ. ವಿದ್ಯೆ ಸಂಪತ್ತು ಅಧಿಕಾರ ಏನೇ ಇದ್ದರೂ ಅಹಂಕಾರ ಇದ್ದರೆ ವಿನಯವಿಲ್ಲದಿದ್ದರೆ ಎಲ್ಲಾ ಬಣ್ಣ ಮಸಿ ನುಂಗಿದಂತೆಯೇ. ಎಲ್ಲಾ ಗುಣಗಳಿಗೂ ವಿನಯವೇ ಭೂಷಣ.
ಸುಭಾಷಿತ - ೬೦

ವರಂ ಮೌನಂ ಕಾ ರ್ಯಂ ನ ಚ ವಚನಮುಕ್ತಂ ಯದನೃತಂ।ವರಂ ಕ್ಲೈಬ್ಯಂ ಪುಂಸಾಂ ನ ಚ ಪರಕಲತ್ರಾಭಿಗಮನಂ।
ವರಂ ಪ್ರಾಣತ್ಯಾಗೋ ನ ಚ ಪಿಶುನವಾದೇಷ್ವಭಿರುಚಿಃ।
ವರಂ ಭಿಕ್ಷಾಶಿತ್ವಂ ನ ಚ ಪರಧನಾಸ್ವಾದನಸುಖಮ್।।


ಅನ್ವಯ:

 ಮೌನಂ ಕಾರ್ಯಂ ವರಮ್ ಯತ್ ಅನೃತಂ ವಚನಂ ಉಕ್ತಂ (ತತ್) ನ ವರಮ್। ಪುಂಸಾಂ ಕ್ಲೈಬ್ಯಂ ಚ ವರಂ ಪರಕಲತ್ರಾಭಿಗಮನಂ ನ ವರಮ್। ಪ್ರಾಣತ್ಯಾಗಃ ವರಂ ಪಿಶುನವಾದೇಷು ಅಭಿರುಚಿಃ ನ ವರಮ್। ಭಿಕ್ಷಾಶಿತ್ವಂ ವರಂ ಪರಧನಾಸ್ವಾದನಸುಖಂ ನ ವರಮ್।।

ಭಾವಾರ್ಥ:

ಸುಳ್ಳಾಡುವದಕ್ಕಿಂತ ಮೌನವಾಗಿರುವುದು ಲೇಸು. ಪರಸ್ತ್ರೀಸಂಗಕ್ಕಿಂತ ಷಂಡತನವೇ ಮೇಲು ಚಾಡಿ ಹೇಳುವುದು ಕೇಳುವುದಕ್ಕಿಂತ ಸಾವೇ ಮೇಲು. ಬೇರೆಯವರ ಸೊತ್ತಿನಲ್ಲಿ ಆಸೆ ಪಟ್ಟು ಸುಖಿಸುವದಕ್ಕಿಂತ ಭಿಕ್ಷೆ ಬೇಡಿ ಬದುಕುವುದು ಲೇಸು.

Thursday 21 March 2019

ಸುಭಾಷಿತ - ೫೯

ವರಂ ಸಖೇ ಸತ್ಪುರಷಾಪಮಾನಿತಃ ನ ನೀಚಸಂಸರ್ಗಗುಣೈರಲಂಕೃತಃ।
ವರಾಶ್ವಪಾದೇನ ಹತೋ ವಿರಾಜತೇ ನ ರಾಸಭಸ್ಯೋಪರಿ ಸಂಸ್ಥಿತೋ ನರಃ।


ಅನ್ವಯ:

ಸಖೇ! ಸತ್ಪುರುಷಾಪಮಾನಿತಃ ವರಮ್! ನೀಚಸಂಸರ್ಗಗುಣೈಃ ಅಲಂಕೃತಃ ಅಪಿ ನ ವರಮ್। ವರಾಶ್ವಪಾದೇನ ಹತಃ ಅಪಿ ವಿರಾಜತೇ। ರಾಸಭಸ್ಯ ಉಪರಿ ಸಂಸ್ಥಿತಃ ಅಪಿ ನ ವಿರಾಜತೇ।

ಭಾವಾರ್ಥ:

ನೀಚರಿಂದ ಸಿಗುವ ಸಂಮಾನಕ್ಕಿಂತ ಸತ್ಪುರುಷರಿಂದ ಅವಮಾನಿತನಾಗುವುದು ಲೇಸು. ಶ್ರೇಷ್ಠವಾದ ಕುದುರೆಯ ಕಾಲಿನಡಿ ಸಿಕ್ಕು ಸತ್ತರೂ ಆಗಬಹುದು. ಕತ್ತೆಯ ಮೇಲೇರಿ ಮೆರವಣಿಗೆ ಮಾತ್ರ ಬೇಡ.
 ಪೀನಾರಿ ಎಂಬುದೊಂದು ಮರ. ಅದರ ತಿರುಳಿಗೆ ಮಲದ ವಾಸನೆಯಿದೆ. ಅದರೊಂದಿಗೆ ಆಟವಾಡಿದರೂ ಮೈಯೆಲ್ಲಾ ವಾಸನೆಯೇ. ಶ್ರೀಗಂಧದೊಂದಿಗೆ ಗುದ್ದಾಡಿದರೂ ಪರಿಮಳವೇ ತಾನೇ! ಆದ್ದರಿಂದ ಪೀನಾರಿಯೊಂದಿಗೆ ಆಟವಾಡುವುದಕ್ಕಿಂತ ಶ್ರೀಗಂಧದೊಂದಿಗೆ ಜಗಳಾಡುವುದೇ ಲೇಸು. ಹಾಗೆಯೇ ದುರ್ಜನರ ಸಹವಾಸದ್ವಾರಾ ಕೋಟ್ಯಾನುಕೋಟಿ ಸಂಪಾದಿಸಿ ಮೆರೆದರೂ ಜನರು ಎಂದಿಗೂ ಆತನನ್ನು ಮನಸಾರೆ ಗೌರವಿಸಲಾರರು. ಮೈಬಗ್ಗಿಸಿ ದುಡಿದು ಸಂಪಾದಿಸುವವರು ನೆಮ್ಮದಿಯಿಂದ ಗೌರವದಿಂದ ಬದುಕಬಲ್ಲರು. ಸತ್ಪುರುಷರು ಎಂದಿಗೂ ಯಾರನ್ನೂ ವಿನಾಕಾರಣ ಅವಮಾಸಲಾರರು. ಅವಮಾನಿಸಿದರೂ ಅದರಲ್ಲೊಂದು ಸದುದ್ದೇಶವಿರುತ್ತದೆ. ಅದರ ಪರಿಣಾಮ ಒಳ್ಳೆಯದೇ ಆಗುವುದು. ವಸಿಷ್ಠರಿಂದ ಸೋಲಿಸಲ್ಪಟ್ಟ ಕೌಶಿಕ ಮಹಾರಾಜನು ಬ್ರಹ್ಮರ್ಷಿ ವಿಶ್ವಾಮಿತ್ರನಾದನು. ದುರ್ಯೋಧನನಿಂದ ಸಂಮಾನಿಸಲ್ಪಟ್ಟರೂ ಶಲ್ಯನು ತನ್ನ ಸೇನೆಯೊಂದಿಗೆ ನಾಶವಾದನು. ದುರ್ಜನರೊಡನೆ ಮೈತ್ರಿಗಿಂತ ಸಜ್ಜನರೊಡನೆ ಜಗಳ ಲೇಸು.
ಸುಭಾಷಿತ - ೫೮

ವೃಷ್ಟಿಭಿಃ ಪೂರಿತಾ ಗ್ರಾಮ್ಯಾ ನೂನಂ ಕ್ಷುದ್ರಾಃ ಸರೋವರಾಃ। ತಟಂ ಭಿತ್ವಾ ಪ್ರಯಾಂತೀಹ ಧನಂ ಪ್ರಾಪ್ತಃ ಖಲೋ ಯಥಾ।

ಅನ್ವಯ:

ವೃಷ್ಟಿಭಿಃ (ಮಳೆಯಿಂದ)
 ಪೂರಿತಾಃ(ತುಂಬಿದ)
 ಗ್ರಾಮ್ಯಾಃ ಸರೋವರಾಃ(ಊರಿನ ಸರೋವರಗಳು)
  ನೂನಂ ಕ್ಷುದ್ರಾಃ(ಖಂಡಿತವಾಗಿಯೂ ಅಲ್ಪ ಗುಣದವು)
 (ತೇ) ಧನಂ ಪ್ರಾಪ್ಯ ಖಲಃ ಯಥಾ (ತಥಾ)(ಸ್ವಲ್ಪ ದಿನದಿಂದ ಕೊಬ್ಬಿ ಹಾರಾಡುವ ದುಷ್ಟರಂತೆ)
ತಟಂ ಭಿತ್ವಾ ಪ್ರಯಾಂತಿ(ಕಟ್ಟೆಯೊಡೆದು ಹರಿಯುತ್ತವೆ)


ಭಾವಾರ್ಥ:

 ಐಶ್ವರ್ಯ ಬಂದಾಗ ಹಾರಾಡುವ ದುರ್ಜನರಂತೆ ಮಳೆ ಬಂದಾಗ ಕಟ್ಟೆಯೊಡೆದು ಹರಿವ ಕೆರೆ ಸರೋವರಗಳು ತೀರಾ ಕ್ಷುದ್ರ. ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದಾನು ಎಂಬ ಗಾದೆಯಿದೆ. ಸಂಪತ್ತು ತಾಕತ್ತು ಇಧ್ದರೆ ಸಾಲದು. ಅದರ ವಿನಿಯೋಗದ ಅರಿವಿರಬೇಕು. ಎಲ್ಲೆ ಮೀರಿದ ನಡತೆ ಸಾಧುವಲ್ಲ. ಇದೆಯೆಂದು ಅಂಧಾಧುಂದು ಖರ್ಚು ಮಾಡುವುದು, ದುರಾಸೆಯಿಂದ ಬಡವರನ್ನು ಇನ್ನಷ್ಟು ದೋಚುವುದು, ಶಕ್ತಿ ಇದೆಯೆಂದು ದುರ್ಬಲರ ಮೇಲೆ ಸವಾರಿ ಮಾಡುವುದು ಈ ಆಟಾಟೋಪ ಆರ್ಭಟವೆಲ್ಲ ದುರ್ಜನಿಗೆ ಮಾತ್ರ. ಸಜ್ಜನರು ಐಶ್ವರ್ಯವಿದ್ದಾಗ ಆರಕ್ಕೆ ಏರಲಾರರು. ಬಡತನ ಬಂದಾಗ ಮೂರಕ್ಕೆ ಇಳಿಯಲಾರರು. ಧಾರಾಕಾರ ಮಳೆ ಸುರಿದಾಗ ಕೆರೆತೊರೆಸರೋವರಗಳು ದಡವನ್ನು ಹಾಯ್ದು ಹಾವಳಿ ಮಾಡುತ್ತವೆ. ಎಷ್ಟೇ ಮಳೆ ಬರಲಿ ಎಷ್ಟೇ ನದಿಗಳು ನೀರನ್ನು ಸುರಿಯಲಿ ಸಮುದ್ರವು ಉಕ್ಕಿ ಹರಿಯಲಾರದು. ಸದ್ಗುಣಶೀಲನಾದ ಜ್ಞಾನಿ ಎಂದೂ ಗರ್ವಪಡುವುದಿಲ್ಲ. ಅರ್ಧವೂ ತಿಳಿಯದ ಅಜ್ಞಾನಿ ಪಂಡಿತರಿಗಿಂತ ಹೆಚ್ಚು ಅಬ್ಬರಿಸುತ್ತಾನೆ.

Tuesday 19 March 2019

ಸುಭಾಷಿತ - ೫೭

ಅಭಿಯುಕ್ತಂ ಬಲವತಾ ದುರ್ಬಲಂ ಹೀನಸಾಧನಮ್।
ಹೃತಸ್ವಂ ಕಾಮಿನಂ ಚೋರಮಾವಿಶಂತಿ ಪ್ರಜಾಗರಾಃ।
                                                   (ವಿದುರ ನೀತಿ)


ಅನ್ವಯಾರ್ಥ:

 ಬಲವತಾ ಅಭಿಯುಕ್ತಂ (ಬಲಶಾಲಿಗಳಾದ ಇತರರಿಂದ ವಿರೋಧಿಸಲ್ಪಟ್ಟವನನ್ನು)
 ದುರ್ಬಲಂ (ಬಲಹೀನನನ್ನು)
 ಹೀನಸಾಧನಂ (ಸಾಧನ/ಸಾಧನೆ ಕಳಕೊಂಡವನನ್ನು)
 ಹೃತಸ್ವಂ (ತನ್ನದನ್ನು/ತನ್ನತನವನ್ನು ಕಳಕೊಂಡವನನ್ನು)
ಕಾಮಿನಂ (ಕಾಮಾತುರನನ್ನು)
 ಚೋರಂ (ಕಳ್ಳನನ್ನು)
ಪ್ರಜಾಗರಾಃ (ನಿದ್ರಾಹೀನತೆಯ ರೋಗಗಳು)
 ಆವಿಶಂತಿ (ಪ್ರವೇಶಿಸುತ್ತವೆ)


ಭಾವಾರ್ಥ:

ಜೀವಿಗಳಿಗೆ ಆಹಾರವು ಎಷ್ಟು ಅವಶ್ಯವೋ ನಿದ್ರೆಯೂ ಅಷ್ಟೇ ಅವಶ್ಯಕ. ಮನಸ್ಸನ್ನು ಭಯವೋ ಹತಾಶೆಯೋ ಬಯಕೆಯೋ ಯಾವುದೇ ಆದರೂ ಬಲವಾಗಿ ಆವರಿಸಿದರೆ ನಿದ್ರೆ ದೂರವಾಗುತ್ತದೆ. ಆರ್ಥಿಕವಾಗಿಯೋ ಶಾರೀರಿಕವಾಗಿಯೋ ಅಧಿಕಾರದಿಂದಲೋ ಬಲಶಾಲಿಗಳಾಗಿರುವವರ ವಿರೋಧವನ್ನು ಕಟ್ಟಿಕೊಂಡವನು ಯಾವಾಗ ಅವರಿಂದ ಆಘಾತಕ್ಕೊಳಗಾದೇನೋ ಎಂಬ ಭಯದಿಂದಲೇ ಬದುಕಬೇಕಾಗುತ್ತದೆ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ದುರ್ಬಲನಾದರಂತೂ ಸದಾ ಭಯವೇ. ನಿದ್ರೆ ಅವರ ಬಳಿ ಸುಳಿಯದು. ಏನಾದರೂ ಸಾಧಿಸಲೇಬೇಕೆಂದ ಹೊರಟವನಿಗೆ ಸಾಧನೆ ಪೂರ್ತಿಯಾಗುವವರೆಗೂ ನಿದ್ದೆಯಿಲ್ಲ. ಪ್ರಿಯವಾದ ಅಥವಾ ಅವಶ್ಯವಾದ ಸಾಧನಗಳನ್ನು ಕಳಕೊಂಡವನಿಗೂ ಸದಾ ಜಾಗರಣೆಯೇ. ದೈವವಶಾತ್ ಅಥವಾ ಸ್ವಪ್ರಮಾದದಿಂದ ತನ್ನ ಆಸ್ತಿಪಾಸ್ತಿ, ಧನ, ಸಂಬಂಧಿಕರುಗಳನ್ನು ಕಳೆದುಕೊಂಡ ವ್ಯಕ್ತಿಯು ತನಗೆ ಒದಗಿ ಬಂದ ದಾರಿದ್ರ್ಯವನ್ನು ನೆನೆಸಿಕೊಳ್ಳುತ್ತ ನಿದ್ದೆಯನ್ನು ಕಳೆದುಕೊಳ್ಳುತ್ತಾನೆ. ಕಾಮಾತುರನಿಗೆ ನಿದ್ದೆಯಿಲ್ಲ. ನಿದ್ದೆಯ ಗೊಡವೆಯೂ ಇಲ್ಲ ಕಳ್ಳರ ವೃತ್ತಿ ಆರಂಭವಾಗುವುದೇ ಎಲ್ಲರೂ ನಿದ್ರಿಸಿರುವಾಗ. ರಾತ್ರಿಯಿಡಿ ಎಚ್ಚರವಾಗಿದ್ದು ಕಳ್ಳತನ ಮಾಡುವುದು. ಒಟ್ಟಿನಲ್ಲಿ ಕಾಮ ಕ್ರೋಧ ಮೋಹ ಇತರರಲ್ಲಿ ವೈರ ದ್ವೇಷ ಧನದಾಹವೇ ಮೊದಲಾವುಗಳೇ ನಿದ್ರಾನಾಶಕ್ಕೆ ಕಾರಣ. ಅವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಶಕ್ತಿ ಇದ್ದವನಿಗೆ ಸುಖನಿದ್ರೆ ಆ ಮೂಲಕ ಆರೋಗ್ಯ ಭಾಗ್ಯ.
ಸುಭಾಷಿತ - ೫೬

ಘಟೋ ಜನ್ಮಸ್ಥಾನಂ ಮೃಗಪರಿಜನೋ ಭೂರ್ಜವಸನಮ್।ವನೇ ವಾಸಃ ಕಂದೈರಶನಮಪಿ ದುಃಸ್ಥಂ ವಪುರಿದಮ್।। ಅಗಸ್ತ್ಯಃ ಪಾಥೋಧಿಂ ಯದಕೃತ ಕರಾಂಭೋಜಕುಹರೇ।
ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ।।


ಅನ್ವಯಾರ್ಥ:

 ಜನ್ಮಸ್ಥಾನಂ (ಹುಟ್ಟಿದ ಸ್ಥಳ)
 ಘಟಃ (ಮಡಕೆ)
 ಮೃಗಪರಿಜನಃ (ಸುತ್ತಲೂ ಇದ್ದ ಪರಿವಾರ ಜಿಂಕೆಯೇ ಮೊದಲಾದ ಪ್ರಾಣಿಗಳು)
 ಭೂರ್ಜವಸನಮ್(ಭೂರ್ಜಪತ್ರಗಳೇ ಬಟ್ಟೆ)
 ವನೇ (ಕಾಡಿನಲ್ಲಿ)
 ವಾಸಃ(ವಾಸ)
 ಕಂದೈಃ ಅಶನಮ್(ಕಂದಮೂಲಗಳಿಂದ ಆಹಾರ)
ಇದಂ ವಪುಃ ದುಃಸ್ಥಂ(ಈ ಶರೀರವೂ ಸ್ಥಿರವಾದ್ದಲ್ಲ)
(ತಥಾಪಿ)(ಹಾಗಾದರೂ)
 ಯದ್(ಹೇಗೆ)
 ಅಗಸ್ತ್ಯಃ (ಅಗಸ್ತ್ಯನು)
ಪಾಥೋಧಿಂ (ಸಮುದ್ರವನ್ನು)
 ಕರಾಂಭೋಜಕುಹರೇ ಅಕೃತ( ಬೊಗಸೆಯಲ್ಲಿ) ಹಿಡಿದನೋ ಹಾಗೆಯೇ )
 ಮಹತಾಂ(ಶ್ರೇಷ್ಠರ)
 ಕ್ರಿಯಾಸಿದ್ಧಿಃ (ಕಾರ್ಯಸಾಧನೆಯು)
ಸತ್ವೇ ಭವತಿ (ಅಂತಃಸತ್ವದ ಸಾಮರ್ಥ್ಯದಿಂದಲೇ ಆಗುತ್ತದೆ.)
 ನ ಉಪಕರಣೇ(ಸಾಧನ ಸಲಕರಣೆಗಳಿಂದಲ್ಲ)

ಭಾವಾರ್ಥ:

ಕ್ರಿಯಾಸಿದ್ಧಿಗೋಸ್ಕರ ಮಹಾತ್ಮರು ಉಪಕರಣಕ್ಕಾಗಿ ಕಾಯುವುದಿಲ್ಲ. ಅಂತಃಸತ್ವವೇ ಅವರಿಗೆ ಸಾಧನ. . ಅಗಸ್ತ್ಯಮಹರ್ಷಿ ಹುಟ್ಟಿದ್ದು ಕಾಡಿನಲ್ಲಿ ಒಂದು ಕೊಡದಲ್ಲಿ. ಸಹವಾಸ ಅಲ್ಲಿನ ಮೃಗಪಕ್ಷಿಗಳೊಂದಿಗೆ. ಬಟ್ಟೆಯ ನಾರುಮಡಿ ವಾಸಕ್ಕೆ ಕಾಡಿನ ಎಲೆಮನೆ. ಆಹಾರ ಗಡ್ಡೆಗೆಣಸು. ಶರೀರವೋ ಆ ಸಾಗರದ ಮುಂದೆ ಏನೂ ಅಲ್ಲ. ಹಾಗಿದ್ದರೂ ಆ ಮಹಾಸಾಗರವನ್ನೇ ಬೊಗಸೆಯಲ್ಲಿ ಹಿಡಿದು ಆಪೋಶನಗೈದ!! ಸಾಧಿಸಿದರೆ ಸಬಳವನ್ನೂ ನುಂಗಬಹುದು ಎಂಬ ಗಾದೆಯಿದೆ. ಸಾಧಿಸಬೇಕೆಂಬ ಛಲವಿದ್ದರೆ ಸಲಕರಣೆಯಿಲ್ಲ ಎಂಬ ನೆವನ ಬೇಡ. ಸಾರಥಿಯಿದ್ದಿದ್ದರೆ ಕೌರವಸೈನ್ಯವನ್ನೆಲ್ಲಾ ಧ್ವಂಸಮಾಡಿ ಬಿಡುತ್ತಿದ್ದೆ ಎಂದ ಉತ್ತರಕುಮಾರನಂತೆ ಪೌರುಷ ಕೊಚ್ಚುವುದರಿಂದ ಕಾರ್ಯ ಸಾಗದು. ಅದಕ್ಕೆ ಸಾಮರ್ಥ್ಯ ಬೇಕು ಉಪಕರಣ ಎಂದಿಗೂ ಮುಖ್ಯವಲ್ಲ. ಮಾಡಿಯೇ ಮಾಡುತ್ತೇನೆಂಬ ಮಹತ್ತಾದ ಇಚ್ಛೆ, ಮಾಡುವ ಸಾಮರ್ಥ್ಯ, ದೃಢನಿಶ್ಚಯ, ಸತತ ಪ್ರಯತ್ನ ಇರಬೇಕು. ಮಾಡುತ್ತಾ ಹೋದಂತೆ ಅನುಭವ, ಜ್ಞಾನ ತಾನಾಗಿಯೇ ಬರುತ್ತದೆ, ಸಾಮರ್ಥ್ಯ ಹೆಚ್ಚುತ್ತದೆ. ಇಚ್ಛೆಯಿಂದ ಕ್ರಿಯೆ ಅದರಿಂದ ಜ್ಞಾನ ಆ ಮೂಲಕ ಸಾಮರ್ಥ್ಯ ಮತ್ತು ಸಾಧನೆ. ಅದರಿಂದ ಇಚ್ಛಾಶಕ್ತಿಕ್ರಿಯಾಶಕ್ತಿಜ್ಞಾನಶಕ್ತಿಸ್ವರೂಪಿಣಿಯಾದ ಮಹಾಮಾತೆಯ ಅನುಗ್ರಹ!! ಅಲ್ಪಸ್ವಲ್ಪವೇ ಆಗಲಿ ಮಾಡುತ್ತಾ ಹೋದಂತೆ ನಿಧಾನವಾಗಿಯಾದರೂ ಕಾರ್ಯಸಾಧನೆ ನಿಶ್ಚಿತ. ಸಿದ್ಧಿಯ ಸತ್ವ ಅಂತರಂಗದಲ್ಲಿ ಉದಿಸಬೇಕು ಅಷ್ಟೇ.
 ಹಾರಿ ಹೋಗಲು ಬಲವಾದ ರೆಕ್ಕೆಪುಕ್ಕಗಳಿಲ್ಲದಿದ್ದರೂ ಸದಾ ಸಾಗುತ್ತಿರುವ ಇರುವೆ ನೂರಾರು ಮೈಲಿ ದೂರ ತಲುಪಬಲ್ಲುದು. ಆ ಶಕ್ತಿ ಸತ್ತ್ವ ಅದಕ್ಕೂ ಇದೆ. ಸುಮ್ಮನಿದ್ದರೆ ವಾಯುವೇಗದ ಸಾಮರ್ಥವಿರುವ ಗರುಡನೂ ಕೂಡಾ ಗೇಣುದೂರದ ಗುರಿಯನ್ನೂ ಸೇರಲಾರ. ಮಾನಸಿಕ ಶಾರೀರಿಕ ಸತ್ವ ಸಾಮರ್ಥ್ಯವುಳ್ಳವನಿಗೆ ಸಲಕರಣೆ ಕೇವಲ ಸಹಾಯಕ್ಕಾಗಿ ಮಾತ್ರ. ಸಲಕರಣೆ ಇಲ್ಲದಿರುವುದು ಕಾರ್ಯಸಾಧನೆಗೆ ಅಡ್ಡಿಯಾಗದು.
ಸುಭಾಷಿತ - ೫೫

ವಿಷಸ್ಯ ವಿಷಯಾಣಾಂ ಚ ದೃಶ್ಯತೇ ಮಹದಂತರಮ್।ಉಪಭುಕ್ತಂ ವಿಷಂ ಹಂತಿ ವಿಷಯಾಃ ಸ್ಮರಣಾದಪಿ।।

ಅನ್ವಯಾರ್ಥ:

ವಿಷಸ್ಯ(ವಿಷಕ್ಕೂ)
 ವಿಷಯಾಣಾಂ ಚ (ಇಂದ್ರಿಯಸುಖಗಳಿಗೂ) ಮಹದಂತರಂ(ಬಹಳ ವ್ಯತ್ಯಾಸವು)
ದೃಶ್ಯತೇ(ಕಾಣಿಸುತ್ತದೆ)
 ವಿಷಂ (ವಿಷವು)
 ಉಪಭುಕ್ತಂ(ತಿನ್ನಲ್ಪಟ್ಟಾಗ)
 ಹಂತಿ(ಕೊಲ್ಲುತ್ತದೆ)
ವಿಷಯಾಃ(ಇಂದ್ರಿಯಸುಖಗಳು)
 ಸ್ಮರಣಾತ್ ಅಪಿ(ಕೇವಲ ನೆನೆಯುವುದರಿಂದಲೇ)
 (ಘ್ನಂತಿ)(ಕೊಲ್ಲುತ್ತವೆ)


ಭಾವಾರ್ಥ:

 ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವು ಐದು ಇಂದ್ರಿಯವಿಷಯಗಳು. ಐಹಿಕ ಸುಖಾನುಭ ಈ ಮೂಲಕವೇ. ಇವು ಎಷ್ಟು ಅಗತ್ಯವೋ ಅಷ್ಟೇ ಹಾನಿಕರ. ಆನೆಯ ಸಹವಾಸ ಇದ್ದಂತೆ ಇವುಗಳ ಸಹವಾಸ. ನಮ್ಮ ಹಿಡಿತದಲ್ಲಿ ಆನೆಯಿದ್ದರೆ ಎಷ್ಟು ದೊಡ್ಡ ದೊಡ್ಡ ಕಾರ್ಯವನ್ನೂ ಸುಲಭವಾಗಿ ಮಾಡಬಹುದು. ಆನೆಯ ಹಿಡಿತಕ್ಕೆ ನಾವು ಸಿಕ್ಕಿದರೆ? ಅಲ್ಲಿಗೆ ಮುಗಿಯಿತು. ಹಾಗೆಯೇ ಇಂದ್ರಿಯ ಸುಖಕ್ಕೆ ಅಡಿಯಾಳಾದರೆ ಸರ್ವನಾಶ. ವಿಷಕ್ಕೂ ವಿಷಯಕ್ಕೂ ಹೆಸರಿನಲ್ಲಿ ಅಕ್ಷರಮಾತ್ರವೇ ವ್ಯತ್ಯಾಸ ಇರಬಹುದು, ಆದರೆ ಕಾರ್ಯದಲ್ಲಿ ಅಗಾಧ ಅಂತರವಿದೆ. ವಿಷವನ್ನು ಸೇವಿಸಿದರೆ ಮಾತ್ರ ಪ್ರಾಣನಾಶ. ವಿಷಯವನ್ನು ನೆನೆದರೂ ಸಾಕು ಅಧಃಪತನ.
  ವಿಷಯಗಳನ್ನು ನೆನೆದೊಡನೇ ಮನಸ್ಸು ಅಲ್ಲಿ ಅಂಟಿಕೊಂಡು ಅದರ ಬಯಕೆಯುಂಟಾಗುತ್ತದೆ. ಬಯಕೆ ಈಡೇರದಿದ್ದಾಗ ಕ್ರೋಧವುಂಟಾಯಿತು. ಕೋಪ ಬಂದಾಗ ಹಿಂದುಮುಂದು ಯೋಚನೆಯಿಲ್ಲದೆ ಅವಿವೇಕದ ವರ್ತನೆ, ಸ್ಮೃತಿಭ್ರಂಶ. ಅದರಿಂದ ಬುದ್ಧಿ ನಾಶ, ಪರಿಣಾಮವಾಗಿ ಸರ್ವನಾಶ. ಶೂರ್ಪಣಖಿಯ ಮಾತಿನಿಂದ ರಾವಣನ ಮನಸ್ಸಿನಲ್ಲಿ ಸೀತೆಯ ಕಲ್ಪನೆ ಬಂದುದರ ಪರಿಣಾಮವಾಗಿ ಸರ್ವನಾಶವಾಯಿತು. ಆದುದರಿಂದ ವಿಷಯಗಳೆಂಬ ಆನೆಯ ಮೇಲೆ ನಾವಿರಬೇಕೇ ಹೊರತು ಅದೇ ಆನೆ ನಮ್ಮ ಮೇಲೆ ಬಿದ್ದರೆ ಉಳಿಗಾಲವಿಲ್ಲ. 
ಸುಭಾಷಿತ - ೫೪:

ದೂರತಃ ಶೋಭತೇ ಮೂರ್ಖೋ ಲಂಬಶಾಟಪಟಾವೃತಃ।ತಾವಚ್ಚ ಶೋಭತೇ ಚಾಸೌ ಯಾವತ್ಕಿಂಚಿನ್ನ ಭಾಷತೇ।।


ಅನ್ವಯಾರ್ಥ:

ಲಂಬಶಾಟಪಟಾವೃತಃ (ಆಡಂಬರದ ಉಡುಗೆತೊಡುಯುಟ್ಟ)
ಮೂರ್ಖಃ (ಬುದ್ಧಿಹೀನನು)
ದೂರತಃ (ಏವ)(ದೂರದಿಂದ ಮಾತ್ರವೇ)
ಶೋಭತೇ(ಶೋಭಿಸುತ್ತಾನೆ). (ತದಪಿ ಚ ಅದೂ ಸಹ )
 ಅಸೌ (ಇವನು)
 ಯಾವತ್ ಕಿಂಚಿತ್ ನ ಭಾಷತೇ (ಸ್ವಲ್ಪವೂ ಮಾತಾಡದೇ ಇರುತ್ತಾನೋ)
 ತಾವತ್(ಏವ) (ಅಲ್ಲಿವರೆಗೆ ಮಾತ್ರ)
 ಶೋಭತೇ (ಶೋಭಿಸುತ್ತಾನೆ)


ಭಾವಾರ್ಥ:

ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು ಎಂಬಂತೆ ಮಹಾಪಂಡಿತನ ಹಾಗೆ ವೇಷಭೂಷಣ ತೊಟ್ಟು ಆಡಂಬರ ತೋರಿದರೆ ದೂರದಿಂದ ನೋಡಿದವರು ನಂಬಬಹುದು. ಮೌನವಾಗಿದ್ದಷ್ಟು ಸಮಯ ಹೇಗೂ ನಡೆದಿತ್ತು, ಆದರೆ ಬಾಯಿ ಬಿಟ್ಟರೆ ಮೂರ್ಖತನವೆಲ್ಲ ಹೊರ ಬರುತ್ತದೆ. ತಿಳಿದಿರುವುದನ್ನು ಇತರರಿಗೆ ಹೇಳುವುದು ಸೌಜನ್ಯ ಆದರೆ ತಿಳಿಯದಿರುವುದನ್ನು ಹೇಳ ಹೊರಡುವುದು, ತಾನು ತಿಳಿದವನು ಎಂದುಕೊಳ್ಳುವುದು ಮೂರ್ಖತನ. ಎಲ್ಲರೂ ಎಲ್ಲವನ್ನೂ ತಿಳಿದಿರಲು ಸಾಧ್ಯವೇ ಇಲ್ಲ. ಒಂದರಲ್ಲಿ ಪರಿಣತಿ ಹೊಂದಿದವನು ಇನ್ನೊಂದು ವಿಷಯದಲ್ಲಿ ಮೂಢನೇ ಆಗಿರುತ್ತಾನೆ. ಎಲ್ಲವನ್ನೂ ತಿಳಿದವನು ಭಗವಂತ ಮಾತ್ರ. ಗುಡ್ಡಕ್ಕೊಂದು ಗುಡ್ಡ ಅಡ್ಡವಿದ್ದೇ ಇದೆ. ಎಲ್ಲರೆದುರು ಗರ್ವತೋರುವುದು ಸಲ್ಲ. ತಾನಾರು ತಾನೆಷ್ಟು ಎಂಬುದರ ಅರಿವು ಸದಾ ಇರಲೇಬೇಕು. ತಿಳಿದಂತೆ ನಟಿಸಿ ಆಡಂಬರ ತೋರಿದರೆ ಒಂದಲ್ಲಾ ಒಂದು ದಿನ ಬಣ್ಣ ಬಯಲಾಗದೆ ಇರದು. ಆದುದರಿಂದ ತಿಳಿಯದಿರುವಲ್ಲಿ ಮೌನವಾಗಿರುವುದೇ ಜಾಣತನ. ಎಲ್ಲರೂ ಮೆಚ್ಚಬೇಕೆಂದು ಇಲ್ಲದ ಪಾಂಡಿತ್ಯವನ್ನು ಹರಿಯಬಿಟ್ಟರೆ ಮಾನ ಹೋಗುವುದು ನಿಶ್ಚಯ. ಭರ್ತೃಹರಿಯು ನೀತಿ ಶತಕದಲ್ಲಿ ಹೇಳಿದಂತೆ ಪಾಂಡಿತ್ಯ ಇಲ್ಲದಾಗ ಮೌನವೇ ಭೂಷಣ.

Tuesday 12 March 2019

ಸುಭಾಷಿತ - ೫೩

ಪಲಾಯನೈರ್ನಾಪಯಾತಿ ನಿಶ್ಚಲಾ ಭವಿತವ್ಯತಾ।
ದೇಹಿನಃ ಪುಚ್ಛಸಂಲಗ್ನಾ ವಹ್ನಿಜ್ವಾಲೇವ ಪಕ್ಷಿಣಾಮ್।।

ಅನ್ವಯಾರ್ಥ:

 ದೇಹಿನಃ(ಮನುಜರ)
 ನಿಶ್ಚಲಾ(ನಿಶ್ಚಲವಾದ)
 ಭವಿತವ್ಯತಾ(ಭಾಗ್ಯವು/ಕರ್ಮಫಲವು) ಪಲಾಯನೈಃ(ಪಲಾಯನದಿಂದ)
 ನ ಅಪಯಾತಿ(ನಿವಾರಣೆಯಾಗದು)
 ಪಕ್ಷಿಣಾಂ (ಪಕ್ಷಿಗಳ)
 ಪುಚ್ಛಸಂಲಗ್ನಾ (ಬಾಲಕ್ಕೆ ತಗಲಿದ)
 ವಹ್ನಿಜ್ವಾಲಾ ಇವ(ಬೆಂಕಿಯ ಉರಿಯಂತೆ)
 ಸಂಲಗ್ನಾ ಭವತಿ (ಅಂಟಿಕೊಂಡೇ ಇರುತ್ತದೆ)


ಭಾವಾರ್ಥ:

 ಹಕ್ಕಿಯ ಬಾಲಕ್ಕೆ ಹತ್ತಿಕೊಂಡ ಉರಿ ಹಾರಿಹೋದರೆ ಆರಿಹೋದೀತೇ? ಹಕ್ಕಿಯೊಂದಿಗೆ ಬಾಲ, ಬಾಲದೊಂದಿಗೆ ಉರಿ ಬಂದೇ ಬರುತ್ತದೆ. ಮಾಡಿದ ಕರ್ಮದ ಫಲವನ್ನೂ ಅಷ್ಟೇ ತಪ್ಪಿಸಿಕೊಳ್ಳಲಾಗದು.
 ಒಳ್ಳೆಯದೋ ಕೆಟ್ಟದ್ದೋ ಏನೇ ಇದ್ದರೂ ಮಾಡಿದ ಕರ್ಮದ ಫಲವನ್ನು ಅನಭವಿಸಲೇ ಬೇಕು. ಅದೂ ಸಹ ಎರಡನ್ನೂ ಪ್ರತ್ಯೇಕವಾಗಿಯೇ! ಅಷ್ಟು ದೊಡ್ಡ ಧಾರ್ಮಿಕ, ಸಾಕ್ಷಾತ್ ಯಮನ ಪುತ್ರ ಧರ್ಮರಾಯನೇ ಅರ್ಧಸತ್ಯ ನುಡಿದುಕ್ಕಾಗಿ ನರಕದರ್ಶನವಾಯಿತು. ಆ ಸಮಯದಲ್ಲಿ ಇಂದ್ರನು ಯುಧಿಷ್ಠಿರನಿಗೆ ಹೇಳಿದಂತೆ ಪ್ರತಿಯೊಬ್ಬನೂ ನರಕದರ್ಶನ ಮಾಡಲೇಬೇಕು. ಶುಭಕರ್ಮ ಅಶುಭಕರ್ಮಗಳ ರಾಶಿಗಳು ಬೇರೆ ಬೇರೆಯಾಗಿಯೇ ಇರುವವು. ಒಂದನ್ನೊಂದು ನಿವಾರಿಸಲಾರವು. ಮೊದಲು ಪುಣ್ಯದ ಫಲ ಅನುಭವಿಸಿದವನು ಮತ್ತೆ ಪಾಪದ ಫಲ ಅನುಭವಿಸಬೇಕು. ಮೊದಲು ಪಾಪದ ಫಲ ಅನುಭವಿಸಿದವನು ಮತ್ತೆ ಪುಣ್ಯದ ಫಲ ಅನುಭವಿಸಬೇಕು. ಬಾಲಕ್ಕೆ ಹತ್ತಿದ ಬೆಂಕಿಯಂತೆ ಅದು ಹಿಂಬಾಲಿಸಿಯೇ ಸಿದ್ಧ. ಪಲಾಯನಕ್ಕೆ ಅವಕಾಶವೇ ಇಲ್ಲ. ಸ್ವಲ್ಪವೇ ಪಾಪ ಮಾಡಿದವನು ಮೊದಲು ನರಕ ಅನುಭವಿಸಿ ಆಮೇಲೆ ಸ್ವರ್ಗ ಸೇರುತ್ತಾನೆ.  ದ್ರೋಣನ ಕಾರಣವಾಗಿ ಸುಳ್ಳಾಡಿದೆಯಲ್ಲಾ ಅದಕ್ಕಾಗಿ ನಿನಗೆ ನರಕದರ್ಶನವಾಗಿದೆ ಎನ್ನುತ್ತಾನೆ ಇಂದ್ರ. ಪಾಪ ಮಾಡಿದವರು ಮಾಡುತ್ತಲೇ ಇರುವವರು ಸುಖವಾಗಿರುವುದು ಕಣ್ಣಾರೆ ಕಾಣುತ್ತೇವಲ್ಲ ಎಂದರೆ ಅದಕ್ಕೂ ಇಂದ್ರನು ಉತ್ತರವಿದೆ:
ಹೇರಳವಾಗಿ ಪಾಪ ಮಾಡಿದವರು ಮೊದಲು ಸ್ವರ್ಗ ಅನುಭವಿಸಿ ನಂತರ ನರಕ ಸೇರುತ್ತಾರೆ. ಅವರೂ ತಪ್ಪಸಿಕೊಳ್ಳುವಂತಿಲ್ಲ. ಈಗ ಸುಖ ಅನುಭವಿಸಿದವರೂ ನಂತರ ಕಷ್ಟ ಇದ್ದೇ ಇದೆ. ಮನುಷ್ಯನೆಂದ ಮೇಲೆ ತಪ್ಪು ಮಾಡುವುದು ಸಹಜ. ಆದರೆ ಪಲಾಯನಗೈಯುವ ಪ್ರಯತ್ನ ಮಾಡದೆ ತಪ್ಪು ಒಪ್ಪನ್ನು ವಿವೇಚಿಸಿ ಭಗವಂತನ ತಕ್ಕಡಿಯಲ್ಲಿ ಪುಣ್ಯದ ತೂಕವನ್ನು ಹೆಚ್ಚಿಸಿಕೊಳ್ಳುವವನೇ ವಿವೇಕಿ. 
ಸುಭಾಷಿತ - ೫೨

ಉತ್ಸಾಹಸಂಪನ್ನಮದೀರ್ಘಸೂತ್ರಿಣಂ
ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್।
ಶೂರಂ ಕೃತಜ್ಞಂ ದೃಢಸೌಹೃದಂ ಚ
ಲಕ್ಷ್ಮೀ ಸ್ವಯಂ ಯಾತಿ ನಿವಾಸಹೇತೋಃ।।

ಅನ್ವಯಾರ್ಥ:

ಉತ್ಸಾಹಸಂಪನ್ನಂ(ಉತ್ಸಾಹದಿಂದ ಕೂಡಿದವನನ್ನು) ಅದೀರ್ಘಸೂತ್ರಿಣಂ(ಕಾಲಕಳೆಯದವನನ್ನು) ಕ್ರಿಯಾವಿಧಿಜ್ಞಂ(ಕಾರ್ಯವಿಧಾನವನ್ನು ಅರಿತವನನ್ನು) ವ್ಯಸನೇಷು ಅಸಕ್ತಂ(ದುಶ್ಚಟಗಳಲ್ಲಿ ಆಸಕ್ತಿ ಇಲ್ಲದವನನ್ನು) ಶೂರಂ(ಶೂರನನ್ನು)
 ಕೃತಜ್ಞಂ (ಕೃತಜ್ಞನನ್ನು)
 ದೃಢಸೌಹೃದಂ ಚ(ಮತ್ತು
 ದೃಢವಾದ ಸ್ನೇಹಪ್ರವೃತ್ತಿ ಉಳ್ಳವನನ್ನು) ನಿವಾಸಹೇತೋಃ(ವಸತಿಯ ಕಾರಣಕ್ಕೆ)
 ಲಕ್ಷ್ಮೀ (ಲಕ್ಷ್ಮಿಯು)
 ಸ್ವಯಂ (ತಾನಾಗಿಯೇ)
 ಯಾತಿ (ಪ್ರವೇಶಿಸುತ್ತಾಳೆ)


ಭಾವಾರ್ಥ:

 ವಿಘ್ನಗಳು ಬರುವುದು ಸಹಜ. ಹಾಗೆಂದು ಅದಕ್ಕೆ ಹೆದರಿ ಪ್ರಯತ್ನ ಮಾಡದೇ ಇರುವುದು, ಆರಂಭಿಸಿ ಅರ್ಧದಲ್ಲೇ ನಿಲ್ಲಿಸುವುದು ಸಲ್ಲದು. ಉತ್ತಮರು ಎಷ್ಟೇ ವಿಘ್ನಗಳು ಬಂದರೂ ಉತ್ಸಾಹ ಕಳೆದುಕೊಳ್ಳದೆ ಹಿಡಿದ ಕಾರ್ಯವನ್ನು ಪೂರೈಸುವರು. ಆ ಛಲವಿದ್ದರೆ ದೈವಸಹಾಯ ತಾನಾಗಿಯೇ ಬರುತ್ತದೆ.

ದೀರ್ಘಸೂತ್ರೀ ಎಂದರೆ ಸೋಮಾರಿತನದಿಂದ ನಾಳೆ ಮಾಡಿದರಾಯಿತು ಎಂದು ಕಾಲಕಳೆಯುವವನು. ಅವಕಾಶಗಳು ಬಂದಾಗ ಉಪಯೋಗಿಸಿಕೊಳ್ಳುವುದು ಜಾಣತನ. ಕಳಕೊಂಡರೆ ಇನ್ನೊಮ್ಮೆ ಸಿಗುವುದು ಕಷ್ಟ. ಕಳೆದುಹೋದ ಕಾಲ ಎಂದಿಗೂ ಹಿಂದಿರುಗದು.

 ಮಾಡುವ ಕೆಲಸದ ಸಾಧಕ ಬಾಧಕಗಳನ್ನು ಚಿಂತಿಸಿ ಸರಿಯಾದ ನ್ಯಾಯಯುತವಾದ ರೀತಿಯಲ್ಲಿ ಕಾರ್ಯಪ್ರವೃತ್ತನಾದರೆ ಸೋಲೆಂಬುದಿಲ್ಲ. ಕಾರ್ಯವಿಧಾನವನ್ನು ಅರಿತಿರಬೇಕು ಅಷ್ಟೇ.

ದುಶ್ಚಟಗಳಲ್ಲಿ ಒಮ್ಮೆ ಆಸಕ್ತನಾದರೆ ಕಾರ್ಯಸಾಧನೆಗೆ ಅದಕ್ಕಿಂತ ಅಡ್ಡಿ ಬೇರೊಂದಿಲ್ಲ. ಸಾಧಿಸುವುದು ಬಿಡಿ, ಈಗಾಗಲೇ ಸಾಧಿಸಿದ್ದನ್ನೂ ಅವು ಇಲ್ಲವಾಗಿಸುತ್ತವೆ.

ಅಳುಕು ಅಂಜಿಕೆ ಎಂದಿದ್ದರೂ ಬಾಧಕವೇ. ಸಾಧಿಸಬೇಕಾದ ಗುರಿ ಸಾಧುವಾಗಿದ್ದರೆ ಅಂಜಿಕೆ ಯಾಕೆ? ಅಳುಕು ಯಾಕೆ?  ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಗೆಲುವು ನಿಶ್ಚಿತ.

ಎಷ್ಟೇ ಪರಿಣತಿಯಿರಲಿ ಸಾಮರ್ಥ್ಯವಿರಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಇನ್ನೊಬ್ಬರ ಸಹಾಯ ಸಹಕಾರ ಬೇಕೇ ಬೇಕು. ಅದನ್ನು ಎಂದಿಗೂ ಮರೆಯುವಂತಿಲ್ಲ. ಕೃತಜ್ಞತೆ ಉಳ್ಳವನಿಗೆ ಸಮಾಜದ ಸಹಕಾರ ಸದಾ ಇರುತ್ತದೆ.
 ದೈವಸಹಾಯವೂ ಇದೆ.
   ಕೃತಘ್ನತೆಗೆ ಪ್ರಾಯಶ್ಚಿತ್ತ ಇಲ್ಲವೇ ಇಲ್ಲ. ಕಷ್ಟಕಾಲದಲ್ಲಿ ನೆರವಾಗುವವನೇ ಬಂಧು ಮಿತ್ರ. ಆದ್ದರಿಂದ ಮಿತ್ರರಿದ್ದಲ್ಲಿ ಕಷ್ಟದ ಭಾರ ಕಡಿಮೆ. ದೃಢವಾದ ಮೈತ್ರೀಭಾವವು ಗೆಲುವಿನ ಸೋಪಾನ. ಉತ್ಸಾಹ, ಚುರುಕುತನ, ಕಾರ್ಯಕ್ಷಮತೆ,ದುಶ್ಚಟಗಳಿಂದ ದೂರವಿರುವುದು,ಧೈರ್ಯ, ಕೃತಜ್ಞತೆ, ಮೈತ್ರೀಭಾವ ಈ ಎಲ್ಲಾ ಗುಣಗಳನ್ನು ರೂಢಿಸಿಕೊಂಡವನನ್ನು ಲಕ್ಷ್ಮಿಯು ತಾನಾಗಿಯೇ ಹುಡುಕಿಕೊಂಡು ಬಂದು ಅಲ್ಲೇ ನೆಲೆಸುತ್ತಾಳೆ. 

Thursday 7 March 2019

ಸುಭಾಷಿತ - ೫೧

ಘಟ್ಟನಪ್ರತಿಭಾಃ ಕೇಚಿತ್ಕೇಚಿದ್ಘಟ್ಟನನಿಸ್ಪೃಹಾಃ।
ಘಟದೀಪಪ್ರಭಾಃ ಕೇಚಿತ್ಕೇಚಿದಾಕಾಶಸನ್ನಿಭಾಃ॥

ಅನ್ವಯಾರ್ಥ:

 ಕೇಚಿತ್ (ಕೆಲವು ಜನರು)
 ಘಟ್ಟನಪ್ರತಿಭಾಃ (ಪ್ರಚೋದನೆಯಿಂದ ಬೆಳಗುವವರು)   ಕೇಚಿತ್(ಕೆಲವರು)
 ಘಟ್ಟನನಿಸ್ಪೃಹಾಃ (ಪ್ರಚೋದನೆಯಿಂದ ಬದಲಾಗದವರು)   ಕೇಚಿತ್ (ಕೆಲವರು )
 ಘಟದೀಪಪ್ರಭಾಃ (ಮಡಕೆಯೊಳಗಿನ ದೀಪದಂಥವರು)   ಕೇಚಿದಾಕಾಶಸನ್ನಿಭಾಃ(ಆಕಾಶದಂತೆ ಬೆಳಗುವವರು)

ಭಾವಾರ್ಥ:

ಪ್ರತಿಭೆ ಎಲ್ಲರಲ್ಲೂ ಇದೆ. ಕೆಲವರಲ್ಲಿ ಹೆಚ್ಚು ಕೆಲವರಲ್ಲಿ ಸ್ವಲ್ಪ ಕಡಿಮೆ. ಒಬ್ಬೊಬ್ಬರು ಒಂದೊಂದರಲ್ಲಿ ನಿಸ್ಸೀಮರು. ಕೆಲವರಿಗೆ ಅವರ ಪ್ರತಿಭೆಯ ಅರಿವೇ ಇರುವುದಿಲ್ಲ.ಅದು ಕೀಳರಿಮೆಯಿಂದಲೋ ಉದಾಸಭಾವದಿಂದಲೋ ಕಮರಿ ಹೋಗುವುದು. ಅವರನ್ನು ಒಮ್ಮೆ ಪ್ರೋತ್ಸಾಹಿಸಿ ಹೊರತಂದರೆ ಬೆಳಗುತ್ತಾರೆ. ಕೆಲವರದು ಸದಾ ಪ್ರೋತ್ಸಾಹವನ್ನೇ ಬಯಸುವ ಪ್ರತಿಭೆ. ಅವರೂ ಘಟ್ಟನಪ್ರತಿಭರೇ. ಅವರು ತಾವಾಗಿಯೇ ಬೆಳಗಬಲ್ಲರು. ಆದರೂ ಪ್ರೋತ್ಸಾಹ ಬಯಸುವ ಮನೋಗುಣ ಅವರದು. ಅದು ಪರಾವಲಂಬಿತ ಪ್ರತಿಭೆ. ಕೆಲವರಲ್ಲಿ ನಿವಾರಿಸಲಾಗದಂತಹ ಜಡತ್ವವು ಪ್ರತಿಭೆಯನ್ನು ಆವರಿಸಿರಬಹುದು. ಎಷ್ಟೇ ಪ್ರಚೋದಿಸಿದರೂ ಅಂಥವರು ಮುಂಬರುವವರಲ್ಲ. ಪ್ರೋತ್ಸಾಹದ ಪ್ರಯತ್ನ ಅಲ್ಲಿ ವ್ಯರ್ಥ. ಇನ್ನು ಕೆಲವರು ಘಟದೀಪಪ್ರಭರು. ಅವರಲ್ಲಿ ಸ್ವಯಂಪ್ರಭೆ ಇದೆ. ಆದರೆ ಹೊರಬರುವುದನ್ನು ಅವರೇ ಬಯಸುವುದಿಲ್ಲ. ಮಡಕೆಯೊಳಗಿನ ದೀಪದಂತೆ, ಒಳಗೆ ಸಾಕಷ್ಟು ಬೆಳಕಿದೆ. ಆದರೆ ಲೋಕಕ್ಕೆ ಕಾಣಿಸುವಂತಿಲ್ಲ. ಯಾವುದೇ ಪ್ರಚೋದನೆ ಪ್ರಚಾರ ಬಯಸದ ಅವರಿಂದ ಲೋಕಕ್ಕೇನೂ ಲಾಭವೂ ಇಲ್ಲ ಹಾನಿಯೂ ಇಲ್ಲ. ನಾಲ್ಕನೆಯ ವರ್ಗ ಲೋಕಹಿತಕಾರಕ. ಸೂರ್ಯಚಂದ್ರರಿಂದ ಬೆಳಗುವ ಆಕಾಶದಂತೆ ತಮ್ಮ ಸ್ವಯಂಪ್ರಭೆಯಿಂದ ತಾವೂ ಬೆಳಗಿ ಲೋಕವನ್ನೂ ಬೆಳಗುವವರು. ಯಾವ ಪ್ರೋತ್ಸಾಹವೋ ಪ್ರಚೋದನೆಯೋ ಪ್ರಚಾರವೋ ಅವರಿಗೆ ಬೇಡವೇ ಬೇಡ. ಆಚಾರ್ಯ ಶಂಕರರು ಸ್ವಾಮಿ ವಿವೇಕಾನಂದರೇ ಮೊದಲಾದ ಮಹಾತ್ಮರು ಇತರರಿಗೆ ಆಧಾರವಾಗಿ ಲೋಕಕಲ್ಯಾಣಕಾರಕರಾಗಿರುತ್ತಾರೆ.            
ಸುಭಾಷಿತ - ೫೦

ನ ಸೀದನ್ನಪಿ ಚ ಧರ್ಮೇಣ ಮನೋಽಧರ್ಮೇ ನಿವೇಶಯೇತ್।ಅಧಾರ್ಮಿಕಾಣಾಂ ಪಾಪಾನಾಮಾಶು ಪಶ್ಯನ್ವಿಪರ್ಯಯಮ್॥
             (ಮನು ಸ್ಮೃತಿ)

ಅನ್ವಯಾರ್ಥ:


ಅಧಾರ್ಮಿಕಣಾಮ್(ಅಧರ್ಮಿಗಳಿಗೆ)
 ಪಾಪಾನಾಂ(ಪಾಪಿಗಳಿಗೆ )
 ಆಶು ವಿಪರ್ಯಯಂ(ಕೂಡಲೇ ಒದಗುವ ದುರ್ಗತಿಯನ್ನು)   ಪಶ್ಯನ್(ನೋಡಿ)
 ಧರ್ಮೇಣ (ಧರ್ಮದ ಕಾರಣದಿಂದ)
 ಸೀದನ್ ಅಪಿ (ಕಷ್ಟಕ್ಕೊಳಗಾಗಿದ್ದರೂ)   ಅಧರ್ಮೇ(ಅಧರ್ಮದಲ್ಲಿ)
 ಮನಃ(ಮನಸ್ಸನ್ನು)
 ನ ನಿವೇಶಯೇತ್(ತೊಡಗಿಸಿಕೊಳ್ಳಬಾರದು)


ಭಾವಾರ್ಥ:

 ಧರ್ಮದ ದಾರಿ ಯಾವಾಗಲೂ ಅಧರ್ಮದ ದಾರಿಯಷ್ಟು ಸುಗಮವೂ ಅಲ್ಲ ಆಕರ್ಷಕವೂ ಅಲ್ಲ. ಆದರೆ ಪರಿಣಾಮ ನೋಡಿದರೆ ಧರ್ಮವೇ ಆಕರ್ಷಕ. ಅಧರ್ಮದ ಪರಿಣಾಮ ಭೀಕರ. ಅಂಗಡಿಯಲ್ಲಿ ದೊರೆಯುವ ತಿಂಡಿ ರುಚಿಕರವೇನೋ ಹೌದು ಆದರೆ ಮುಂದೆ ಬರುವ ಅನಾರೋಗ್ಯದ ವೇದನೆ ನೆನೆದರೆ ಮನೆಯಲ್ಲಿ ಅಮ್ಮ ಮಾಡಿದ ತಿಂಡಿಯೇ ಆಗಬಹುದು ಎನಿಸುವುದಿಲ್ಲವೇ? ಸೃಷ್ಟಿಯಲ್ಲಿ ಪ್ರತಿಯೊಬ್ಬನಿಗೂ ಕಷ್ಟವಿದೆ. ಕಷ್ಟ ಬಂದಾಗ ವಿಚಲಿತರಾಗುವುದೂ ಸಹಜವೇ. ಆದರೆ ಕ್ಷಣಕಾಲ ವಿವೇಕಕ್ಕೆ ಮನಸ್ಸು ಕೊಟ್ಟರೆ ಅದುವೇ ದಾರಿ ತೋರಿಸುತ್ತದೆ. ಸುತ್ತುಮುತ್ತಲಿನ ಅಧಾರ್ಮಿಕರನ್ನು ಕಂಡಾಗ ಅವರ ಧನದೌಲತ್ತು ನಮಗೂ ಇರಬೇಕಿತ್ತು ಎನಿಸಿದರೂ ಅವರ ಬಗ್ಗೆ ಮನಸ್ಸಿನಲ್ಲಿ ಗೌರವ ಮೂಡುತ್ತದೆಯೇ? ಆ ದೌಲತ್ತು ತೀರಾ ಕ್ಷಣಿಕ. ಕಾನೂನಿನ ಕೈಗೆ ಸಿಕ್ಕಿ ಶಿಕ್ಷೆಗೊಳಗಾಗಿ ಮಾನ ಹರಾಜಾಗುವುದನ್ನು ನೋಡುವಾಗ ಆ ಸಂಪತ್ತೂ ಬೇಡ ಅದರ ಸುಖವೂ ಬೇಡ ಅನ್ನಿಸುವುದಿಲ್ಲವೇ? ಯಾವಾಗಲೂ ಹಾಗೆಯೇ ಕೆಟ್ಟದ್ದಕ್ಕಿರುವ ಆಕರ್ಷಣೆ ಒಳ್ಳೆಯದಕ್ಕಿಲ್ಲ. ಹೊಟ್ಟೆ ಬಿರಿಯುವಂತೆ ತಿಂದು ಕಾಲು ಚಾಚಿ ಮಲಗಿ ನಿದ್ರಿಸುವ ಸುಖ ಮಿತವಾಗಿ ತಿಂದು ಚೆನ್ನಾಗಿ ದುಡಿಯುವವನಿಗಿಲ್ಲ ನಿಜ. ಆದರೆ ಮುಂದೆ ಬೊಜ್ಜು ಬಂದು ಮನೆಯೊಳಗೆ ನಡೆಯುವಾಗಲೂ ಏದುಸಿರು ಬಿಡುವವನ ಕಷ್ಟ ದುಡಿಯುವವನಿಗೆ ಇಲ್ಲ. ಧರ್ಮದಿಂದ ಕಷ್ಟ ಅಧರ್ಮದಿಂದ ಸುಖ ಎಂದು ಮೇಲ್ನೋಟಕ್ಕೆ ಅನಿಸಿದರೂ ಧಾರ್ಮಿಕರಿಗಿರುವ ನೆಮ್ಮದಿ ಸಮಾಜದಲ್ಲಿ ಸಿಗುವ ಗೌರವಗಳನ್ನು ಗಮನಿಸಿ ಎಷ್ಟೇ ಕಷ್ಟ ಬಂದರೂ ಅಧರ್ಮದ ದಾರಿಯನ್ನು ತುಳಿಯದಿರುವ ಮಸಃಸ್ಥೈರ್ಯವನ್ನು ಕೊಡು ಎಂದು ಭಗವಂತನನ್ನು ಪ್ರಾರ್ಥಿಸೋಣ.

Tuesday 5 March 2019

ಸುಭಾಷಿತ - ೪೯

ಸಂತುಷ್ಟೋ ಭಾರ್ಯಯಾ ಭರ್ತಾ ಭರ್ತ್ರಾ ಭಾರ್ಯಾ ತಥೈವ ಚ।
ಯಸ್ಮಿನ್ನೇವ ಕುಲೇ ನಿತ್ಯಂ ಕಲ್ಯಾಣಂ ತತ್ರ ವೈ ಧ್ರುವಮ್॥



ಅನ್ವಯಾರ್ಥ:

 ಯಸ್ಮಿನ್ ಕುಲೇ(ಯಾವ ಸಂಸಾರದಲ್ಲಿ) ಭಾರ್ಯಯಾ(ಹೆಂಡತಿಯಿಂದ)
 ಭರ್ತಾ(ಗಂಡನು)
 ಸಂತುಷ್ಟಃ(ಸಂತೋಷ ಹೊಂದುತ್ತಾನೋ)
 ತಥಾ ಏವ ಚ(ಹಾಗೆಯೇ)
 ಭರ್ತ್ರಾ(ಗಂಡನಿಂದ)
 ಭಾರ್ಯಾ ( ಹೆಂಡತಿಯು)
 (ಸಂತುಷ್ಟಾ ಭವತಿ ಸಂತೋಷ ಪಡುತ್ತಾಳೋ)
 ತತ್ರ (ಅಲ್ಲಿ)
 ಕಲ್ಯಾಣಂ (ಶ್ರೇಯಸ್ಸು)
 ಧ್ರುವಮ್ (ನಿಶ್ಚಿತವು).


ಭಾವಾರ್ಥ:

  ಹಿತವಾದ ಜೀವನಕ್ಕೆ ಕಾರಣವಾದದ್ದು ಕಲ್ಯಾಣ. ಪ್ರಿಯವಾದದ್ದು ಪ್ರೇಯಸ್ಸು ಹಿತವಾದದ್ದು ಶ್ರೇಯಸ್ಸು ಪ್ರಿಯವಾದುದೆಲ್ಲವೂ ಹಿತವಾಗರದು. ಹಿತವಾದುದರಲ್ಲಿ ಪ್ರೀತಿ ಬೆಳೆಸಿಕೊಂಡಾಗ ಪ್ರೇಯಸ್ಸು ಶ್ರೇಯಸ್ಸಿಗೆ ಕಾರಣವಾಗುತ್ತದೆ. ವಿವಾಹದಿಂದ ಗೃಹಸ್ಥಾಶ್ರಮವನ್ನು ಸೇರಿ ಧರ್ಮಪ್ರಜಾಸಂಪತ್ತುಗಳನ್ನು ಸಿದ್ಧಿಸಿಕೊಂಡು ಸಾರ್ಥಕ ಬದುಕು ಬಾಳಬೇಕು. ಧರ್ಮ ಅರ್ಥ ಕಾಮಗಳನ್ನು ಹೊಂದಿ ಮೋಕ್ಷ ಸಾಧಿಸುವುದೇ ಶ್ರೇಯಸ್ಸು. ಆ ಕಾರಣದಿಂದಲೇ ವಿವಾಹವು ಕಲ್ಯಾಣವೆಂದು ಕರೆಯಲ್ಪಡುತ್ತದೆ. ಪತ್ನಿಯಿಂದ ಪತಿಯು ಸಂತುಷ್ಟನಾಗಬೇಕು. ಹಾಗೆಯೇ ಪತಿಯಿಂದ ಪತ್ನಿಯೂ ಸಂತೃಪ್ತಳಾಗಬೇಕು. ಪುರುಷಪ್ರಾಧಾನ್ಯತೆ ಸ್ತ್ರೀಸ್ವಾತಂತ್ರ್ಯ ಎಲ್ಲವೂ ಅರ್ಥಹೀನ ವಾದಗಳು. ಎರಡೂ ಚಕ್ರಗಳೂ ಸಮಾನವಾಗಿ ಚಲಿಸಿದಾಗ ಮಾತ್ರ ರಥವು ಸರಾಗವಾಗಿ ಚಲಿಸೀತು. ಸರಿಯಾದ ರೀತಿಯಲ್ಲಿ ಸಾಗಿದರೆ ಅದು ಸಂಸಾರ. ಸರಾಗವಾಗಿ ಸಾಗಬೇಕಾದರೆ ಆ ಸಂಸಾರವು ಸ+ರಾಗ (ಪ್ರೀತಿಯಿಂದ ಕೂಡಿದ್ದು) ಆಗಿರಬೇಕು. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಅನುನಯಿಸಿಕೊಂಡು ಪರಸ್ಪರ ಸಂತೃಪ್ತಿ ಹೊಂದುವ ದಂಪತಿಗಳ ಕುಟುಂಬದಲ್ಲಿ ಕಲ್ಯಾಣ(ಶ್ರೇಯಸ್ಸು) ಶಾಶ್ವತವಾಗಿರುತ್ತದೆ.
ಸುಭಾಷಿತ - ೪೮

ಮ್ರಿಯಮಾಣಂ ಮೃತಂ ಬಂಧುಂ ಶೋಚಂತೇ ಪರಿದೇವಿನಃ।ಆತ್ಮಾನಂ ನಾನುಶೋಚಂತಿ ಕಾಲೇನ ಕವಲೀಕೃತಮ್।।



ಅನ್ವಯಾರ್ಥ:

 ಮ್ರಿಯಮಾಣಂ (ಸಾಯುತ್ತಿರುವ)
 ಮೃತಂ(ಸತ್ತಿರುವ)
 ಬಂಧುಂ (ಪ್ರತಿ)
 (ಬಂಧುವನ್ನು ಕುರಿತು)
 ಪರಿದೇವಿನಃ (ಪ್ರೀತಿಪಾತ್ರರು)
 ಶೋಚಂತೇ(ದುಃಖಿಸುತ್ತಾರೆ.)
 ಕಾಲೇನ (ಕಾಲನಿಂದ/ವಿಧಿಯಿಂದ)   ಕವಲೀಕೃತಂ(ತಿನ್ನಲ್ಪಪಡುತ್ತಿರುವ)
 ಆತ್ಮಾನಂ(ತನ್ನನ್ನು)(ಕುರಿತು)
 ನ ಅನುಶೋಚಂತಿ (ಚಿಂತಿಸುವುದಿಲ್ಲ)



 ಭಾವಾರ್ಥ:

ಬಂಧುವೋ ಸ್ನೇಹಿತನೋ ಇನ್ನೊಬ್ಬ ಪರಕೀಯನೋ ಸಾಯುತ್ತಿರುವುದನ್ನೋ ಸತ್ತಿರುವುದನ್ನೋ ನೋಡಿ ನೊಂದುಕೊಂಡು ಪ್ರಲಾಪಿಸುತ್ತಾರೆ. ಪಾಪ ಸಾಯಬಾರದಿತ್ತು, ಹಿಂದೆ ಕಷ್ಟ ಪಟ್ಟವನು, ಈಗ ಆರಾಮವಾಗಿ ಬದುಕಬೇಕಾದ ಸಮಯದಲ್ಲಿ ತೀರಿಹೋದ, ಮಡದಿ ಮಕ್ಕಳ ಗತಿಯೇನು? ಎಂದೆಲ್ಲಾ ಸಂತಾಪಪಡುವವರೇ ಎಲ್ಲರೂ. ಆದರೆ ತಾನೂ ಸರದಿಯಲ್ಲಿದ್ದೇನೆ. ಕಾಲನು ಬಾಯ್ದೆರೆದು ನಿಂತಿದ್ದಾನೆ. ಯಾವಾಗ ಅವನ ದವಡೆಯೊಳಗೆ ಸೇರುತ್ತೇನೋ ಎಂದು ಯೋಚಿಸುವವರು ಯಾರೂ ಇಲ್ಲ ಆ ಯೋಚನೆ ಬಂದೊಡನೇ ಮನಸ್ಸು ಧಾರ್ಮಿಕತೆಯೆಡೆಗೆ ಹರಿಯುತ್ತದೆ, ಹರಿಯಬೇಕು. ಮೃತ್ಯುವು ಜುಟ್ಟು ಹಿಡಿದಿದ್ದಾನೆ. ಇನ್ನೇನು ಪಾಶ ಹಾಕುವವನೇ ಎನಿಸಿದಾಗ ಭಗವಂತನ ನಾಮಸ್ಮರಣೆ ಆಗದಿದ್ದೀತೇ! ಅದೇ ಭಾವ ಸದಾ ಇರಬೇಕು, ಧರ್ಮಾಚರಣೆಯಲ್ಲಿ ತೊಡಗಬೇಕು. ಈಗಿನ್ನೂ ಯುವಕ ಜಪತಪ ದಾನಧರ್ಮದ ಯೋಚನೆ ಈಗೇಕೆ? ಆಮೇಲೆ ನೋಡಿಕೊಳ್ಳೋಣ ಎಂದರೆ ಕಾಲನ ಗತಿಯನ್ನು ಕಂಡವರಾರು? ಯಾವನು ಸಂತಸದಿಂದ ಇರುತ್ತಾನೆ? ಪ್ರಪಂಚದಲ್ಲಿ ಪರಮಾಶ್ಚರ್ಯ ಯಾವುದು? ಎಂಬ ಯಕ್ಷಪ್ರಶ್ನೆಗೆ ಧರ್ಮಜ ಉತ್ತರಿಸುತ್ತಾನೆ: ಸತ್ಯವಂತನು ಸಂತೋಷದಿಂದಿರುತ್ತಾನೆ. ಕಣ್ಣೆದುರೇ ಇತರರು ಸಾಯುವುದನ್ನು ದಿನವೂ ನೋಡುತ್ತಿದ್ದರೂ ತಾನು ಮಾತ್ರ ಸಾಯುವವನಲ್ಲ ಎಂದುಕೊಳ್ಳುತ್ತಾನಲ್ಲ ಮಾನವ!! ಇದಕ್ಕಿಂತ ಆಶ್ಚರ್ಯ ಇನ್ನೇನಿದೆ? ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಾ ಹೋಗುವಾಗ ಎಷ್ಟೋ ಸಲ ಅಪಘಾತಗಳನ್ನು ಕಣ್ಣಾರೆ ಕಾಣುತ್ತೇವಲ್ಲ. ಕ್ಷಣಕಾಲ ನಿಲ್ಲಿಸಿ ನೋಡಿ ಅಯ್ಯೋ ಪಾಪ ಎನ್ನುತ್ತೇವೆ, ಓಹೋ ತಡವಾಯ್ತು ಎಂದು ಮೊದಲಿನಿಂದಲೂ ವೇಗವಾಗಿ ಮುಂದುವರಿಯುತ್ತೇವೆ, ನಮಗೆ ಅಪಘಾತ ಆಗುವುದೇ ಇಲ್ಲ, ನಾವು ಸಾಯುವವರೇ ಅಲ್ಲ ಎಂಬ ಹಾಗೆ. ಇದಕ್ಕಿಂತ ಆಶ್ಚರ್ಯ ಇನ್ನೇನಿದೆ?!!!