Monday 25 March 2019

ಸುಭಾಷಿತ - ೬೨


ಅಧಾರ್ಮಿಕೋ ನರೋ ಯೋ ಹಿ ಯಸ್ಯ ಚಾಪ್ಯನೃತಂ ಧನಮ್।
ಹಿಂಸಾರತಶ್ಚ ಯೋ ನಿತ್ಯಂ ನೇಹಾಸೌ ಸುಖಮೇಧತೇ।।
 (ಮನು ಸ್ಮೃತಿ)

ಅನ್ವಯ:

 ಯಃ ನರಃ ಅಧಾರ್ಮಿಕಃ ಯಸ್ಯ ಧನಂ ಅಪಿ ಅನೃತಂ ಯಃ ನಿತ್ಯಂ ಹಿಂಸಾರತಃ ಚ ಅಸೌ ಇಹ ಸುಖಂ ನ ಏಧತೇ।

ಭಾವಾರ್ಥ:

ಯಾವ ಮನುಷ್ಯನು ಅಧಾರ್ಮಿಕನಾಗಿರುವನೋ, ಮೋಸದಿಂದ ಧನಾರ್ಜನೆಯನ್ನು ಮಾಡುತ್ತಾನೋ, ನಿತ್ಯ ಪರಹಿಂಸೆಯಲ್ಲಿ ತೊಡಗಿರುತ್ತಾನೋ ಅವನೆಂದಿಗೂ ಈ ಲೋಕದಲ್ಲಿ ಸುಖವನ್ನು ಹೊಂದುವುದಿಲ್ಲ.

 ಹಣದಿಂದ ಸುಖದ ಸೌಲಭ್ಯಗಳನ್ನು ಕೊಂಡುಕೊಳ್ಳಬಹುದು,ಆದರೆ ಸುಖವನ್ನು ಕೊಳ್ಳಲಾಗದು. ಸುಖಕ್ಕಾಗಿ ಅಧರ್ಮಮಾರ್ಗದಿಂದಲೋ ಸುಳ್ಳು ಹೇಳಿಯೋ ಹಿಂಸೆಯ ಮೂಲಕವೋ ಹಣ ಸಂಪಾದಿಸಿದರೆ ಅದರಿಂದ ಸುಖವೆಂದೂ ಸಿಗುವಂತಿಲ್ಲ. ಇತರರ ಗೋರಿಯ ಮೇಲೆ ಸೌಧ ಕಟ್ಟಿದರೆ ಅದು ಅಲ್ಲಾಡುತ್ತಲೇ ಇರುತ್ತದೆ. ಯಾವಾಗ ಬೀಳುತ್ತೇನೋ ಎಂಬ ಭಯ ಕಾಡುತ್ತಲೇ ಇರುತ್ತದೆ. ತಾನು ಹೇಳಿದ ಸುಳ್ಳು ಮಾಡಿದ ಮೋಸ ಹಿಂಸೆಗಳು ಅಂತರಂಗದಲ್ಲಿ ಚುಚ್ಚದೇ ಇರದು. ಚುಚ್ಚುತ್ತಿರುವ ಅಂತರಂಗದಲ್ಲಿ ಸುಖ ಹೇಗೆ ನೆಲೆಸೀತು? ಅಂತರಂಗಸುಖವನ್ನು ನೀಡುವ ಲಕ್ಷ್ಮಿಯು ಸತ್ಯ ಧರ್ಮ ನ್ಯಾಯವನ್ನು ಅನುಸರಿಸಿ ಬರುವವಳು. ಕೀರ್ತಿಯು ತ್ಯಾಗವನ್ನನುಸರಿಸಿ ಬರುತ್ತದೆ

Friday 22 March 2019

ಸುಭಾಷಿತ - ೬೧

ನಭೋಭೂಷಾ ಪೂಷಾ ಕಮಲವನಭೂಷಾ ಮಧುಕರೋ।ವಚೋಭೂಷಾ ಸತ್ಯಂ ವರವಿಭವಭೂಷಾ ವಿತರಣಮ್।।ಮನೋಭೂಷಾ ಮೈತ್ರೀ ಮಧುಸಮಯಭೂಷಾ ಮನಸಿಜಃ।ಸದೋಭೂಷಾ ಸೂಕ್ತಿಃ ಸಕಲಗುಣಭೂಷಾ ಚ ವಿನಯಃ।।



ಅನ್ವಯ: ನಭಸಃ ಪೂಷಾ ಭೂಷಾ
 ಕಮಲವನಸ್ಯ ಮಧುಕರಃ ಭೂಷಾ
 ವಚಸಃ ಸತ್ಯಂ ಭೂಷಾ
 ವರವಿಭವಸ್ಯ ವಿತರಣಮ್ ಭೂಷಾ
 ಸದಸಃ ಸೂಕ್ತಿಃ ಭೂಷಾ
 ಸಕಲಗುಣಾನಾಂ ಚ ವಿನಯಃ ಭೂಷಾ।


ಭಾವಾರ್ಥ:

 ದಿನವಿಡೀ ಆಕಾಶವು ಮೋಡದಿಂದ ಆವರಿಸಿ ಮಳೆ ಸುರಿಯುತ್ತಿದ್ದರೆ ಮನಸ್ಸಿಗೆ ಮುದವಿಲ್ಲ.
ಪಗಲುಮಿರುಳುಂ ಸುರಿವ ಬಲ್ಸೋನೆಯ ಜಿನುಂಗಿನತ್ತಣಿಂ ಎನ್ನ ಮನಂ ಬೇಸತ್ತುದುಂ. ಏನಾನುಮೊಂದು ನಲ್ಗತೆಯಂ ಪೇಳ ಎನ್ನುತ್ತಾಳೆ ಮುದ್ದಣನ ಮನೋರಮೆ.
ಕತ್ತಲು ಹರಿದು ಆಕಾಶದಲ್ಲಿ ಸೂರ್ಯನು ಬೆಳಗುತ್ತಿದ್ದಂತೆ ಎಲ್ಲೆಡೆ ಲವಲವಿಕೆ ಹರಡಲಾರಂಭಿಸುತ್ತದೆ . ಆಕಾಶಕ್ಕೆ ಸೂರ್ಯನೇ ಭೂಷಣ ರವಿಯಾಕಾಶಕೆ ಭೂಷಣಂ ಅಲ್ಲವೇ!
 ಸರೋವರದಲ್ಲಿ ಅರಳಿದ ತಾವರೆಗಳಿಗೆ ದುಂಬಿಗಳ ನಿನಾದವೇ ಭೂಷಣ. ಬರಿಯು ಅಂದವು ಎಂದಿಗೂ ಶೋಭಿಸದು ನೋಡಿ ಆನಂದಿಸುವ ಮಂದಿ ಇದ್ದಾಗ ಆ ಅಂದವು ಸಾರ್ಥಕವಾಗುತ್ತದೆ. ಮಾತಿಗೆ ಸತ್ಯವೇ ಭೂಷಣ.  ಮಾತಿನಲ್ಲಿ ಸತ್ಯವಿರಬೇಕು ಮನಃಸಾಕ್ಷಿಯನ್ನು ಮೀರದ ನಡತೆಯಿರಬೇಕು. ಅದು ಆತ್ಮೋನ್ನತಿಯ ದಾರಿ.
ಸಂಪತ್ತಿಗೆ ವಿತರಣೆಯೇ ಭೂಷಣ. ಸಿರಿಸಂಪತ್ತು ಎಷ್ಟೇ ಇದ್ದರೂ ಕಟ್ಟಿಟ್ಟಾಗ ಅದಕ್ಕೆ ಬೆಲೆಯಿಲ್ಲ. ಹತ್ತು ಮಂದಿಗಾಗಿ ಅದನ್ನು ವಿನಿಯೋಗಿಸಿದಾಗ ಅವರ ಹರಕೆಯಿಂದ ಸಿಗುವ ಸಂತೋಷ ಜಿಪುಣನಿಗಿಲ್ಲ.
 ಕೈ ಶೋಭಿಸುವುದು ದಾನದಿಂದ, ಚಿನ್ನದ ಕಂಕಣದಿಂದಲ್ಲ. ಚಿನ್ನದ ಕಂಕಣ ತೊಡುವ ಬದಲು ಒಬ್ಬ ಬಡ ವಿದ್ಯಾರ್ಥಿಗೆ ಸಹಾಯ ಮಾಡಿದರೆ ಆತನ ಬದುಕೂ ಸೊಗಸೀತು.
  ಮನಸ್ಸಿಗೆ ಮೈತ್ರಿಯೇ ಭೂಷಣ. ಸಂತೋಷವನ್ನು ಇತರರಿಗೆ ಹಂಚಿದಾಗ ಅದು ದ್ವಿಗುಣವಾಗುತ್ತದೆ. ದುಃಖದಿಂದ ಮನಸ್ಸಿನೊಳಗೇ ಕೊರಗುವ ಬದಲು ಆತ್ಮೀಯರಲ್ಲಿ ಹೇಳಿಕೊಂಡಾಗ ಶಮನವಾಗುತ್ತದೆ.
   ವಸಂತಕಾಲಕ್ಕೆ ಕಾಮನೇ ಭೂಷಣ. ಸಜ್ಜನರ ಸಭೆಗೆ ಸುಸಂಸ್ಕೃತ ಭಾಷಣವೇ ಭೂಷಣ. ಪರರ ದೂಷಣೆ ಮಾಡಲು ಸಭೆ ವೇದಿಕೆಯಲ್ಲ. ಹತ್ತು ಸಮಸ್ತರು ಸೇರಿದಲ್ಲಿ ಮಾತನಾಡುವಾಗ ಎಚ್ಚರವಿರಬೇಕು. ಒಳ್ಳೆಯ ವಿಚಾರಗಳ ಚಿಂತನ ಮಂಥನ ನಡೆದರೆ ಅದು ನಿಜವಾದ ಅರ್ಥದಲ್ಲಿ ಸಭೆ. ಸಂಸ್ಕೃತದಲ್ಲಿ ಸಭಿಕರು ಎಂದರೆ ಜೂಜಾಡುವವರು ಎಂಬ ಅರ್ಥವೂ ಇದೆ. ಪರನಿಂದೆ ಮಾಡುತ್ತಾ ಮೇಜು ಗುದ್ದಿ ಗದ್ದಲ ಕೋಲಾಹಲ ಮಾಡಿದರೆ ಅದು ಆ ಅರ್ಥದಲ್ಲಿ ಸಭೆಯಾದೀತು ಅಷ್ಟೇ. ವಿದ್ಯೆ ಸಂಪತ್ತು ಅಧಿಕಾರ ಏನೇ ಇದ್ದರೂ ಅಹಂಕಾರ ಇದ್ದರೆ ವಿನಯವಿಲ್ಲದಿದ್ದರೆ ಎಲ್ಲಾ ಬಣ್ಣ ಮಸಿ ನುಂಗಿದಂತೆಯೇ. ಎಲ್ಲಾ ಗುಣಗಳಿಗೂ ವಿನಯವೇ ಭೂಷಣ.
ಸುಭಾಷಿತ - ೬೦

ವರಂ ಮೌನಂ ಕಾ ರ್ಯಂ ನ ಚ ವಚನಮುಕ್ತಂ ಯದನೃತಂ।ವರಂ ಕ್ಲೈಬ್ಯಂ ಪುಂಸಾಂ ನ ಚ ಪರಕಲತ್ರಾಭಿಗಮನಂ।
ವರಂ ಪ್ರಾಣತ್ಯಾಗೋ ನ ಚ ಪಿಶುನವಾದೇಷ್ವಭಿರುಚಿಃ।
ವರಂ ಭಿಕ್ಷಾಶಿತ್ವಂ ನ ಚ ಪರಧನಾಸ್ವಾದನಸುಖಮ್।।


ಅನ್ವಯ:

 ಮೌನಂ ಕಾರ್ಯಂ ವರಮ್ ಯತ್ ಅನೃತಂ ವಚನಂ ಉಕ್ತಂ (ತತ್) ನ ವರಮ್। ಪುಂಸಾಂ ಕ್ಲೈಬ್ಯಂ ಚ ವರಂ ಪರಕಲತ್ರಾಭಿಗಮನಂ ನ ವರಮ್। ಪ್ರಾಣತ್ಯಾಗಃ ವರಂ ಪಿಶುನವಾದೇಷು ಅಭಿರುಚಿಃ ನ ವರಮ್। ಭಿಕ್ಷಾಶಿತ್ವಂ ವರಂ ಪರಧನಾಸ್ವಾದನಸುಖಂ ನ ವರಮ್।।

ಭಾವಾರ್ಥ:

ಸುಳ್ಳಾಡುವದಕ್ಕಿಂತ ಮೌನವಾಗಿರುವುದು ಲೇಸು. ಪರಸ್ತ್ರೀಸಂಗಕ್ಕಿಂತ ಷಂಡತನವೇ ಮೇಲು ಚಾಡಿ ಹೇಳುವುದು ಕೇಳುವುದಕ್ಕಿಂತ ಸಾವೇ ಮೇಲು. ಬೇರೆಯವರ ಸೊತ್ತಿನಲ್ಲಿ ಆಸೆ ಪಟ್ಟು ಸುಖಿಸುವದಕ್ಕಿಂತ ಭಿಕ್ಷೆ ಬೇಡಿ ಬದುಕುವುದು ಲೇಸು.

Thursday 21 March 2019

ಸುಭಾಷಿತ - ೫೯

ವರಂ ಸಖೇ ಸತ್ಪುರಷಾಪಮಾನಿತಃ ನ ನೀಚಸಂಸರ್ಗಗುಣೈರಲಂಕೃತಃ।
ವರಾಶ್ವಪಾದೇನ ಹತೋ ವಿರಾಜತೇ ನ ರಾಸಭಸ್ಯೋಪರಿ ಸಂಸ್ಥಿತೋ ನರಃ।


ಅನ್ವಯ:

ಸಖೇ! ಸತ್ಪುರುಷಾಪಮಾನಿತಃ ವರಮ್! ನೀಚಸಂಸರ್ಗಗುಣೈಃ ಅಲಂಕೃತಃ ಅಪಿ ನ ವರಮ್। ವರಾಶ್ವಪಾದೇನ ಹತಃ ಅಪಿ ವಿರಾಜತೇ। ರಾಸಭಸ್ಯ ಉಪರಿ ಸಂಸ್ಥಿತಃ ಅಪಿ ನ ವಿರಾಜತೇ।

ಭಾವಾರ್ಥ:

ನೀಚರಿಂದ ಸಿಗುವ ಸಂಮಾನಕ್ಕಿಂತ ಸತ್ಪುರುಷರಿಂದ ಅವಮಾನಿತನಾಗುವುದು ಲೇಸು. ಶ್ರೇಷ್ಠವಾದ ಕುದುರೆಯ ಕಾಲಿನಡಿ ಸಿಕ್ಕು ಸತ್ತರೂ ಆಗಬಹುದು. ಕತ್ತೆಯ ಮೇಲೇರಿ ಮೆರವಣಿಗೆ ಮಾತ್ರ ಬೇಡ.
 ಪೀನಾರಿ ಎಂಬುದೊಂದು ಮರ. ಅದರ ತಿರುಳಿಗೆ ಮಲದ ವಾಸನೆಯಿದೆ. ಅದರೊಂದಿಗೆ ಆಟವಾಡಿದರೂ ಮೈಯೆಲ್ಲಾ ವಾಸನೆಯೇ. ಶ್ರೀಗಂಧದೊಂದಿಗೆ ಗುದ್ದಾಡಿದರೂ ಪರಿಮಳವೇ ತಾನೇ! ಆದ್ದರಿಂದ ಪೀನಾರಿಯೊಂದಿಗೆ ಆಟವಾಡುವುದಕ್ಕಿಂತ ಶ್ರೀಗಂಧದೊಂದಿಗೆ ಜಗಳಾಡುವುದೇ ಲೇಸು. ಹಾಗೆಯೇ ದುರ್ಜನರ ಸಹವಾಸದ್ವಾರಾ ಕೋಟ್ಯಾನುಕೋಟಿ ಸಂಪಾದಿಸಿ ಮೆರೆದರೂ ಜನರು ಎಂದಿಗೂ ಆತನನ್ನು ಮನಸಾರೆ ಗೌರವಿಸಲಾರರು. ಮೈಬಗ್ಗಿಸಿ ದುಡಿದು ಸಂಪಾದಿಸುವವರು ನೆಮ್ಮದಿಯಿಂದ ಗೌರವದಿಂದ ಬದುಕಬಲ್ಲರು. ಸತ್ಪುರುಷರು ಎಂದಿಗೂ ಯಾರನ್ನೂ ವಿನಾಕಾರಣ ಅವಮಾಸಲಾರರು. ಅವಮಾನಿಸಿದರೂ ಅದರಲ್ಲೊಂದು ಸದುದ್ದೇಶವಿರುತ್ತದೆ. ಅದರ ಪರಿಣಾಮ ಒಳ್ಳೆಯದೇ ಆಗುವುದು. ವಸಿಷ್ಠರಿಂದ ಸೋಲಿಸಲ್ಪಟ್ಟ ಕೌಶಿಕ ಮಹಾರಾಜನು ಬ್ರಹ್ಮರ್ಷಿ ವಿಶ್ವಾಮಿತ್ರನಾದನು. ದುರ್ಯೋಧನನಿಂದ ಸಂಮಾನಿಸಲ್ಪಟ್ಟರೂ ಶಲ್ಯನು ತನ್ನ ಸೇನೆಯೊಂದಿಗೆ ನಾಶವಾದನು. ದುರ್ಜನರೊಡನೆ ಮೈತ್ರಿಗಿಂತ ಸಜ್ಜನರೊಡನೆ ಜಗಳ ಲೇಸು.
ಸುಭಾಷಿತ - ೫೮

ವೃಷ್ಟಿಭಿಃ ಪೂರಿತಾ ಗ್ರಾಮ್ಯಾ ನೂನಂ ಕ್ಷುದ್ರಾಃ ಸರೋವರಾಃ। ತಟಂ ಭಿತ್ವಾ ಪ್ರಯಾಂತೀಹ ಧನಂ ಪ್ರಾಪ್ತಃ ಖಲೋ ಯಥಾ।

ಅನ್ವಯ:

ವೃಷ್ಟಿಭಿಃ (ಮಳೆಯಿಂದ)
 ಪೂರಿತಾಃ(ತುಂಬಿದ)
 ಗ್ರಾಮ್ಯಾಃ ಸರೋವರಾಃ(ಊರಿನ ಸರೋವರಗಳು)
  ನೂನಂ ಕ್ಷುದ್ರಾಃ(ಖಂಡಿತವಾಗಿಯೂ ಅಲ್ಪ ಗುಣದವು)
 (ತೇ) ಧನಂ ಪ್ರಾಪ್ಯ ಖಲಃ ಯಥಾ (ತಥಾ)(ಸ್ವಲ್ಪ ದಿನದಿಂದ ಕೊಬ್ಬಿ ಹಾರಾಡುವ ದುಷ್ಟರಂತೆ)
ತಟಂ ಭಿತ್ವಾ ಪ್ರಯಾಂತಿ(ಕಟ್ಟೆಯೊಡೆದು ಹರಿಯುತ್ತವೆ)


ಭಾವಾರ್ಥ:

 ಐಶ್ವರ್ಯ ಬಂದಾಗ ಹಾರಾಡುವ ದುರ್ಜನರಂತೆ ಮಳೆ ಬಂದಾಗ ಕಟ್ಟೆಯೊಡೆದು ಹರಿವ ಕೆರೆ ಸರೋವರಗಳು ತೀರಾ ಕ್ಷುದ್ರ. ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದಾನು ಎಂಬ ಗಾದೆಯಿದೆ. ಸಂಪತ್ತು ತಾಕತ್ತು ಇಧ್ದರೆ ಸಾಲದು. ಅದರ ವಿನಿಯೋಗದ ಅರಿವಿರಬೇಕು. ಎಲ್ಲೆ ಮೀರಿದ ನಡತೆ ಸಾಧುವಲ್ಲ. ಇದೆಯೆಂದು ಅಂಧಾಧುಂದು ಖರ್ಚು ಮಾಡುವುದು, ದುರಾಸೆಯಿಂದ ಬಡವರನ್ನು ಇನ್ನಷ್ಟು ದೋಚುವುದು, ಶಕ್ತಿ ಇದೆಯೆಂದು ದುರ್ಬಲರ ಮೇಲೆ ಸವಾರಿ ಮಾಡುವುದು ಈ ಆಟಾಟೋಪ ಆರ್ಭಟವೆಲ್ಲ ದುರ್ಜನಿಗೆ ಮಾತ್ರ. ಸಜ್ಜನರು ಐಶ್ವರ್ಯವಿದ್ದಾಗ ಆರಕ್ಕೆ ಏರಲಾರರು. ಬಡತನ ಬಂದಾಗ ಮೂರಕ್ಕೆ ಇಳಿಯಲಾರರು. ಧಾರಾಕಾರ ಮಳೆ ಸುರಿದಾಗ ಕೆರೆತೊರೆಸರೋವರಗಳು ದಡವನ್ನು ಹಾಯ್ದು ಹಾವಳಿ ಮಾಡುತ್ತವೆ. ಎಷ್ಟೇ ಮಳೆ ಬರಲಿ ಎಷ್ಟೇ ನದಿಗಳು ನೀರನ್ನು ಸುರಿಯಲಿ ಸಮುದ್ರವು ಉಕ್ಕಿ ಹರಿಯಲಾರದು. ಸದ್ಗುಣಶೀಲನಾದ ಜ್ಞಾನಿ ಎಂದೂ ಗರ್ವಪಡುವುದಿಲ್ಲ. ಅರ್ಧವೂ ತಿಳಿಯದ ಅಜ್ಞಾನಿ ಪಂಡಿತರಿಗಿಂತ ಹೆಚ್ಚು ಅಬ್ಬರಿಸುತ್ತಾನೆ.

Tuesday 19 March 2019

ಸುಭಾಷಿತ - ೫೭

ಅಭಿಯುಕ್ತಂ ಬಲವತಾ ದುರ್ಬಲಂ ಹೀನಸಾಧನಮ್।
ಹೃತಸ್ವಂ ಕಾಮಿನಂ ಚೋರಮಾವಿಶಂತಿ ಪ್ರಜಾಗರಾಃ।
                                                   (ವಿದುರ ನೀತಿ)


ಅನ್ವಯಾರ್ಥ:

 ಬಲವತಾ ಅಭಿಯುಕ್ತಂ (ಬಲಶಾಲಿಗಳಾದ ಇತರರಿಂದ ವಿರೋಧಿಸಲ್ಪಟ್ಟವನನ್ನು)
 ದುರ್ಬಲಂ (ಬಲಹೀನನನ್ನು)
 ಹೀನಸಾಧನಂ (ಸಾಧನ/ಸಾಧನೆ ಕಳಕೊಂಡವನನ್ನು)
 ಹೃತಸ್ವಂ (ತನ್ನದನ್ನು/ತನ್ನತನವನ್ನು ಕಳಕೊಂಡವನನ್ನು)
ಕಾಮಿನಂ (ಕಾಮಾತುರನನ್ನು)
 ಚೋರಂ (ಕಳ್ಳನನ್ನು)
ಪ್ರಜಾಗರಾಃ (ನಿದ್ರಾಹೀನತೆಯ ರೋಗಗಳು)
 ಆವಿಶಂತಿ (ಪ್ರವೇಶಿಸುತ್ತವೆ)


ಭಾವಾರ್ಥ:

ಜೀವಿಗಳಿಗೆ ಆಹಾರವು ಎಷ್ಟು ಅವಶ್ಯವೋ ನಿದ್ರೆಯೂ ಅಷ್ಟೇ ಅವಶ್ಯಕ. ಮನಸ್ಸನ್ನು ಭಯವೋ ಹತಾಶೆಯೋ ಬಯಕೆಯೋ ಯಾವುದೇ ಆದರೂ ಬಲವಾಗಿ ಆವರಿಸಿದರೆ ನಿದ್ರೆ ದೂರವಾಗುತ್ತದೆ. ಆರ್ಥಿಕವಾಗಿಯೋ ಶಾರೀರಿಕವಾಗಿಯೋ ಅಧಿಕಾರದಿಂದಲೋ ಬಲಶಾಲಿಗಳಾಗಿರುವವರ ವಿರೋಧವನ್ನು ಕಟ್ಟಿಕೊಂಡವನು ಯಾವಾಗ ಅವರಿಂದ ಆಘಾತಕ್ಕೊಳಗಾದೇನೋ ಎಂಬ ಭಯದಿಂದಲೇ ಬದುಕಬೇಕಾಗುತ್ತದೆ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ದುರ್ಬಲನಾದರಂತೂ ಸದಾ ಭಯವೇ. ನಿದ್ರೆ ಅವರ ಬಳಿ ಸುಳಿಯದು. ಏನಾದರೂ ಸಾಧಿಸಲೇಬೇಕೆಂದ ಹೊರಟವನಿಗೆ ಸಾಧನೆ ಪೂರ್ತಿಯಾಗುವವರೆಗೂ ನಿದ್ದೆಯಿಲ್ಲ. ಪ್ರಿಯವಾದ ಅಥವಾ ಅವಶ್ಯವಾದ ಸಾಧನಗಳನ್ನು ಕಳಕೊಂಡವನಿಗೂ ಸದಾ ಜಾಗರಣೆಯೇ. ದೈವವಶಾತ್ ಅಥವಾ ಸ್ವಪ್ರಮಾದದಿಂದ ತನ್ನ ಆಸ್ತಿಪಾಸ್ತಿ, ಧನ, ಸಂಬಂಧಿಕರುಗಳನ್ನು ಕಳೆದುಕೊಂಡ ವ್ಯಕ್ತಿಯು ತನಗೆ ಒದಗಿ ಬಂದ ದಾರಿದ್ರ್ಯವನ್ನು ನೆನೆಸಿಕೊಳ್ಳುತ್ತ ನಿದ್ದೆಯನ್ನು ಕಳೆದುಕೊಳ್ಳುತ್ತಾನೆ. ಕಾಮಾತುರನಿಗೆ ನಿದ್ದೆಯಿಲ್ಲ. ನಿದ್ದೆಯ ಗೊಡವೆಯೂ ಇಲ್ಲ ಕಳ್ಳರ ವೃತ್ತಿ ಆರಂಭವಾಗುವುದೇ ಎಲ್ಲರೂ ನಿದ್ರಿಸಿರುವಾಗ. ರಾತ್ರಿಯಿಡಿ ಎಚ್ಚರವಾಗಿದ್ದು ಕಳ್ಳತನ ಮಾಡುವುದು. ಒಟ್ಟಿನಲ್ಲಿ ಕಾಮ ಕ್ರೋಧ ಮೋಹ ಇತರರಲ್ಲಿ ವೈರ ದ್ವೇಷ ಧನದಾಹವೇ ಮೊದಲಾವುಗಳೇ ನಿದ್ರಾನಾಶಕ್ಕೆ ಕಾರಣ. ಅವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಶಕ್ತಿ ಇದ್ದವನಿಗೆ ಸುಖನಿದ್ರೆ ಆ ಮೂಲಕ ಆರೋಗ್ಯ ಭಾಗ್ಯ.
ಸುಭಾಷಿತ - ೫೬

ಘಟೋ ಜನ್ಮಸ್ಥಾನಂ ಮೃಗಪರಿಜನೋ ಭೂರ್ಜವಸನಮ್।ವನೇ ವಾಸಃ ಕಂದೈರಶನಮಪಿ ದುಃಸ್ಥಂ ವಪುರಿದಮ್।। ಅಗಸ್ತ್ಯಃ ಪಾಥೋಧಿಂ ಯದಕೃತ ಕರಾಂಭೋಜಕುಹರೇ।
ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ।।


ಅನ್ವಯಾರ್ಥ:

 ಜನ್ಮಸ್ಥಾನಂ (ಹುಟ್ಟಿದ ಸ್ಥಳ)
 ಘಟಃ (ಮಡಕೆ)
 ಮೃಗಪರಿಜನಃ (ಸುತ್ತಲೂ ಇದ್ದ ಪರಿವಾರ ಜಿಂಕೆಯೇ ಮೊದಲಾದ ಪ್ರಾಣಿಗಳು)
 ಭೂರ್ಜವಸನಮ್(ಭೂರ್ಜಪತ್ರಗಳೇ ಬಟ್ಟೆ)
 ವನೇ (ಕಾಡಿನಲ್ಲಿ)
 ವಾಸಃ(ವಾಸ)
 ಕಂದೈಃ ಅಶನಮ್(ಕಂದಮೂಲಗಳಿಂದ ಆಹಾರ)
ಇದಂ ವಪುಃ ದುಃಸ್ಥಂ(ಈ ಶರೀರವೂ ಸ್ಥಿರವಾದ್ದಲ್ಲ)
(ತಥಾಪಿ)(ಹಾಗಾದರೂ)
 ಯದ್(ಹೇಗೆ)
 ಅಗಸ್ತ್ಯಃ (ಅಗಸ್ತ್ಯನು)
ಪಾಥೋಧಿಂ (ಸಮುದ್ರವನ್ನು)
 ಕರಾಂಭೋಜಕುಹರೇ ಅಕೃತ( ಬೊಗಸೆಯಲ್ಲಿ) ಹಿಡಿದನೋ ಹಾಗೆಯೇ )
 ಮಹತಾಂ(ಶ್ರೇಷ್ಠರ)
 ಕ್ರಿಯಾಸಿದ್ಧಿಃ (ಕಾರ್ಯಸಾಧನೆಯು)
ಸತ್ವೇ ಭವತಿ (ಅಂತಃಸತ್ವದ ಸಾಮರ್ಥ್ಯದಿಂದಲೇ ಆಗುತ್ತದೆ.)
 ನ ಉಪಕರಣೇ(ಸಾಧನ ಸಲಕರಣೆಗಳಿಂದಲ್ಲ)

ಭಾವಾರ್ಥ:

ಕ್ರಿಯಾಸಿದ್ಧಿಗೋಸ್ಕರ ಮಹಾತ್ಮರು ಉಪಕರಣಕ್ಕಾಗಿ ಕಾಯುವುದಿಲ್ಲ. ಅಂತಃಸತ್ವವೇ ಅವರಿಗೆ ಸಾಧನ. . ಅಗಸ್ತ್ಯಮಹರ್ಷಿ ಹುಟ್ಟಿದ್ದು ಕಾಡಿನಲ್ಲಿ ಒಂದು ಕೊಡದಲ್ಲಿ. ಸಹವಾಸ ಅಲ್ಲಿನ ಮೃಗಪಕ್ಷಿಗಳೊಂದಿಗೆ. ಬಟ್ಟೆಯ ನಾರುಮಡಿ ವಾಸಕ್ಕೆ ಕಾಡಿನ ಎಲೆಮನೆ. ಆಹಾರ ಗಡ್ಡೆಗೆಣಸು. ಶರೀರವೋ ಆ ಸಾಗರದ ಮುಂದೆ ಏನೂ ಅಲ್ಲ. ಹಾಗಿದ್ದರೂ ಆ ಮಹಾಸಾಗರವನ್ನೇ ಬೊಗಸೆಯಲ್ಲಿ ಹಿಡಿದು ಆಪೋಶನಗೈದ!! ಸಾಧಿಸಿದರೆ ಸಬಳವನ್ನೂ ನುಂಗಬಹುದು ಎಂಬ ಗಾದೆಯಿದೆ. ಸಾಧಿಸಬೇಕೆಂಬ ಛಲವಿದ್ದರೆ ಸಲಕರಣೆಯಿಲ್ಲ ಎಂಬ ನೆವನ ಬೇಡ. ಸಾರಥಿಯಿದ್ದಿದ್ದರೆ ಕೌರವಸೈನ್ಯವನ್ನೆಲ್ಲಾ ಧ್ವಂಸಮಾಡಿ ಬಿಡುತ್ತಿದ್ದೆ ಎಂದ ಉತ್ತರಕುಮಾರನಂತೆ ಪೌರುಷ ಕೊಚ್ಚುವುದರಿಂದ ಕಾರ್ಯ ಸಾಗದು. ಅದಕ್ಕೆ ಸಾಮರ್ಥ್ಯ ಬೇಕು ಉಪಕರಣ ಎಂದಿಗೂ ಮುಖ್ಯವಲ್ಲ. ಮಾಡಿಯೇ ಮಾಡುತ್ತೇನೆಂಬ ಮಹತ್ತಾದ ಇಚ್ಛೆ, ಮಾಡುವ ಸಾಮರ್ಥ್ಯ, ದೃಢನಿಶ್ಚಯ, ಸತತ ಪ್ರಯತ್ನ ಇರಬೇಕು. ಮಾಡುತ್ತಾ ಹೋದಂತೆ ಅನುಭವ, ಜ್ಞಾನ ತಾನಾಗಿಯೇ ಬರುತ್ತದೆ, ಸಾಮರ್ಥ್ಯ ಹೆಚ್ಚುತ್ತದೆ. ಇಚ್ಛೆಯಿಂದ ಕ್ರಿಯೆ ಅದರಿಂದ ಜ್ಞಾನ ಆ ಮೂಲಕ ಸಾಮರ್ಥ್ಯ ಮತ್ತು ಸಾಧನೆ. ಅದರಿಂದ ಇಚ್ಛಾಶಕ್ತಿಕ್ರಿಯಾಶಕ್ತಿಜ್ಞಾನಶಕ್ತಿಸ್ವರೂಪಿಣಿಯಾದ ಮಹಾಮಾತೆಯ ಅನುಗ್ರಹ!! ಅಲ್ಪಸ್ವಲ್ಪವೇ ಆಗಲಿ ಮಾಡುತ್ತಾ ಹೋದಂತೆ ನಿಧಾನವಾಗಿಯಾದರೂ ಕಾರ್ಯಸಾಧನೆ ನಿಶ್ಚಿತ. ಸಿದ್ಧಿಯ ಸತ್ವ ಅಂತರಂಗದಲ್ಲಿ ಉದಿಸಬೇಕು ಅಷ್ಟೇ.
 ಹಾರಿ ಹೋಗಲು ಬಲವಾದ ರೆಕ್ಕೆಪುಕ್ಕಗಳಿಲ್ಲದಿದ್ದರೂ ಸದಾ ಸಾಗುತ್ತಿರುವ ಇರುವೆ ನೂರಾರು ಮೈಲಿ ದೂರ ತಲುಪಬಲ್ಲುದು. ಆ ಶಕ್ತಿ ಸತ್ತ್ವ ಅದಕ್ಕೂ ಇದೆ. ಸುಮ್ಮನಿದ್ದರೆ ವಾಯುವೇಗದ ಸಾಮರ್ಥವಿರುವ ಗರುಡನೂ ಕೂಡಾ ಗೇಣುದೂರದ ಗುರಿಯನ್ನೂ ಸೇರಲಾರ. ಮಾನಸಿಕ ಶಾರೀರಿಕ ಸತ್ವ ಸಾಮರ್ಥ್ಯವುಳ್ಳವನಿಗೆ ಸಲಕರಣೆ ಕೇವಲ ಸಹಾಯಕ್ಕಾಗಿ ಮಾತ್ರ. ಸಲಕರಣೆ ಇಲ್ಲದಿರುವುದು ಕಾರ್ಯಸಾಧನೆಗೆ ಅಡ್ಡಿಯಾಗದು.
ಸುಭಾಷಿತ - ೫೫

ವಿಷಸ್ಯ ವಿಷಯಾಣಾಂ ಚ ದೃಶ್ಯತೇ ಮಹದಂತರಮ್।ಉಪಭುಕ್ತಂ ವಿಷಂ ಹಂತಿ ವಿಷಯಾಃ ಸ್ಮರಣಾದಪಿ।।

ಅನ್ವಯಾರ್ಥ:

ವಿಷಸ್ಯ(ವಿಷಕ್ಕೂ)
 ವಿಷಯಾಣಾಂ ಚ (ಇಂದ್ರಿಯಸುಖಗಳಿಗೂ) ಮಹದಂತರಂ(ಬಹಳ ವ್ಯತ್ಯಾಸವು)
ದೃಶ್ಯತೇ(ಕಾಣಿಸುತ್ತದೆ)
 ವಿಷಂ (ವಿಷವು)
 ಉಪಭುಕ್ತಂ(ತಿನ್ನಲ್ಪಟ್ಟಾಗ)
 ಹಂತಿ(ಕೊಲ್ಲುತ್ತದೆ)
ವಿಷಯಾಃ(ಇಂದ್ರಿಯಸುಖಗಳು)
 ಸ್ಮರಣಾತ್ ಅಪಿ(ಕೇವಲ ನೆನೆಯುವುದರಿಂದಲೇ)
 (ಘ್ನಂತಿ)(ಕೊಲ್ಲುತ್ತವೆ)


ಭಾವಾರ್ಥ:

 ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವು ಐದು ಇಂದ್ರಿಯವಿಷಯಗಳು. ಐಹಿಕ ಸುಖಾನುಭ ಈ ಮೂಲಕವೇ. ಇವು ಎಷ್ಟು ಅಗತ್ಯವೋ ಅಷ್ಟೇ ಹಾನಿಕರ. ಆನೆಯ ಸಹವಾಸ ಇದ್ದಂತೆ ಇವುಗಳ ಸಹವಾಸ. ನಮ್ಮ ಹಿಡಿತದಲ್ಲಿ ಆನೆಯಿದ್ದರೆ ಎಷ್ಟು ದೊಡ್ಡ ದೊಡ್ಡ ಕಾರ್ಯವನ್ನೂ ಸುಲಭವಾಗಿ ಮಾಡಬಹುದು. ಆನೆಯ ಹಿಡಿತಕ್ಕೆ ನಾವು ಸಿಕ್ಕಿದರೆ? ಅಲ್ಲಿಗೆ ಮುಗಿಯಿತು. ಹಾಗೆಯೇ ಇಂದ್ರಿಯ ಸುಖಕ್ಕೆ ಅಡಿಯಾಳಾದರೆ ಸರ್ವನಾಶ. ವಿಷಕ್ಕೂ ವಿಷಯಕ್ಕೂ ಹೆಸರಿನಲ್ಲಿ ಅಕ್ಷರಮಾತ್ರವೇ ವ್ಯತ್ಯಾಸ ಇರಬಹುದು, ಆದರೆ ಕಾರ್ಯದಲ್ಲಿ ಅಗಾಧ ಅಂತರವಿದೆ. ವಿಷವನ್ನು ಸೇವಿಸಿದರೆ ಮಾತ್ರ ಪ್ರಾಣನಾಶ. ವಿಷಯವನ್ನು ನೆನೆದರೂ ಸಾಕು ಅಧಃಪತನ.
  ವಿಷಯಗಳನ್ನು ನೆನೆದೊಡನೇ ಮನಸ್ಸು ಅಲ್ಲಿ ಅಂಟಿಕೊಂಡು ಅದರ ಬಯಕೆಯುಂಟಾಗುತ್ತದೆ. ಬಯಕೆ ಈಡೇರದಿದ್ದಾಗ ಕ್ರೋಧವುಂಟಾಯಿತು. ಕೋಪ ಬಂದಾಗ ಹಿಂದುಮುಂದು ಯೋಚನೆಯಿಲ್ಲದೆ ಅವಿವೇಕದ ವರ್ತನೆ, ಸ್ಮೃತಿಭ್ರಂಶ. ಅದರಿಂದ ಬುದ್ಧಿ ನಾಶ, ಪರಿಣಾಮವಾಗಿ ಸರ್ವನಾಶ. ಶೂರ್ಪಣಖಿಯ ಮಾತಿನಿಂದ ರಾವಣನ ಮನಸ್ಸಿನಲ್ಲಿ ಸೀತೆಯ ಕಲ್ಪನೆ ಬಂದುದರ ಪರಿಣಾಮವಾಗಿ ಸರ್ವನಾಶವಾಯಿತು. ಆದುದರಿಂದ ವಿಷಯಗಳೆಂಬ ಆನೆಯ ಮೇಲೆ ನಾವಿರಬೇಕೇ ಹೊರತು ಅದೇ ಆನೆ ನಮ್ಮ ಮೇಲೆ ಬಿದ್ದರೆ ಉಳಿಗಾಲವಿಲ್ಲ. 
ಸುಭಾಷಿತ - ೫೪:

ದೂರತಃ ಶೋಭತೇ ಮೂರ್ಖೋ ಲಂಬಶಾಟಪಟಾವೃತಃ।ತಾವಚ್ಚ ಶೋಭತೇ ಚಾಸೌ ಯಾವತ್ಕಿಂಚಿನ್ನ ಭಾಷತೇ।।


ಅನ್ವಯಾರ್ಥ:

ಲಂಬಶಾಟಪಟಾವೃತಃ (ಆಡಂಬರದ ಉಡುಗೆತೊಡುಯುಟ್ಟ)
ಮೂರ್ಖಃ (ಬುದ್ಧಿಹೀನನು)
ದೂರತಃ (ಏವ)(ದೂರದಿಂದ ಮಾತ್ರವೇ)
ಶೋಭತೇ(ಶೋಭಿಸುತ್ತಾನೆ). (ತದಪಿ ಚ ಅದೂ ಸಹ )
 ಅಸೌ (ಇವನು)
 ಯಾವತ್ ಕಿಂಚಿತ್ ನ ಭಾಷತೇ (ಸ್ವಲ್ಪವೂ ಮಾತಾಡದೇ ಇರುತ್ತಾನೋ)
 ತಾವತ್(ಏವ) (ಅಲ್ಲಿವರೆಗೆ ಮಾತ್ರ)
 ಶೋಭತೇ (ಶೋಭಿಸುತ್ತಾನೆ)


ಭಾವಾರ್ಥ:

ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು ಎಂಬಂತೆ ಮಹಾಪಂಡಿತನ ಹಾಗೆ ವೇಷಭೂಷಣ ತೊಟ್ಟು ಆಡಂಬರ ತೋರಿದರೆ ದೂರದಿಂದ ನೋಡಿದವರು ನಂಬಬಹುದು. ಮೌನವಾಗಿದ್ದಷ್ಟು ಸಮಯ ಹೇಗೂ ನಡೆದಿತ್ತು, ಆದರೆ ಬಾಯಿ ಬಿಟ್ಟರೆ ಮೂರ್ಖತನವೆಲ್ಲ ಹೊರ ಬರುತ್ತದೆ. ತಿಳಿದಿರುವುದನ್ನು ಇತರರಿಗೆ ಹೇಳುವುದು ಸೌಜನ್ಯ ಆದರೆ ತಿಳಿಯದಿರುವುದನ್ನು ಹೇಳ ಹೊರಡುವುದು, ತಾನು ತಿಳಿದವನು ಎಂದುಕೊಳ್ಳುವುದು ಮೂರ್ಖತನ. ಎಲ್ಲರೂ ಎಲ್ಲವನ್ನೂ ತಿಳಿದಿರಲು ಸಾಧ್ಯವೇ ಇಲ್ಲ. ಒಂದರಲ್ಲಿ ಪರಿಣತಿ ಹೊಂದಿದವನು ಇನ್ನೊಂದು ವಿಷಯದಲ್ಲಿ ಮೂಢನೇ ಆಗಿರುತ್ತಾನೆ. ಎಲ್ಲವನ್ನೂ ತಿಳಿದವನು ಭಗವಂತ ಮಾತ್ರ. ಗುಡ್ಡಕ್ಕೊಂದು ಗುಡ್ಡ ಅಡ್ಡವಿದ್ದೇ ಇದೆ. ಎಲ್ಲರೆದುರು ಗರ್ವತೋರುವುದು ಸಲ್ಲ. ತಾನಾರು ತಾನೆಷ್ಟು ಎಂಬುದರ ಅರಿವು ಸದಾ ಇರಲೇಬೇಕು. ತಿಳಿದಂತೆ ನಟಿಸಿ ಆಡಂಬರ ತೋರಿದರೆ ಒಂದಲ್ಲಾ ಒಂದು ದಿನ ಬಣ್ಣ ಬಯಲಾಗದೆ ಇರದು. ಆದುದರಿಂದ ತಿಳಿಯದಿರುವಲ್ಲಿ ಮೌನವಾಗಿರುವುದೇ ಜಾಣತನ. ಎಲ್ಲರೂ ಮೆಚ್ಚಬೇಕೆಂದು ಇಲ್ಲದ ಪಾಂಡಿತ್ಯವನ್ನು ಹರಿಯಬಿಟ್ಟರೆ ಮಾನ ಹೋಗುವುದು ನಿಶ್ಚಯ. ಭರ್ತೃಹರಿಯು ನೀತಿ ಶತಕದಲ್ಲಿ ಹೇಳಿದಂತೆ ಪಾಂಡಿತ್ಯ ಇಲ್ಲದಾಗ ಮೌನವೇ ಭೂಷಣ.

Tuesday 12 March 2019

ಸುಭಾಷಿತ - ೫೩

ಪಲಾಯನೈರ್ನಾಪಯಾತಿ ನಿಶ್ಚಲಾ ಭವಿತವ್ಯತಾ।
ದೇಹಿನಃ ಪುಚ್ಛಸಂಲಗ್ನಾ ವಹ್ನಿಜ್ವಾಲೇವ ಪಕ್ಷಿಣಾಮ್।।

ಅನ್ವಯಾರ್ಥ:

 ದೇಹಿನಃ(ಮನುಜರ)
 ನಿಶ್ಚಲಾ(ನಿಶ್ಚಲವಾದ)
 ಭವಿತವ್ಯತಾ(ಭಾಗ್ಯವು/ಕರ್ಮಫಲವು) ಪಲಾಯನೈಃ(ಪಲಾಯನದಿಂದ)
 ನ ಅಪಯಾತಿ(ನಿವಾರಣೆಯಾಗದು)
 ಪಕ್ಷಿಣಾಂ (ಪಕ್ಷಿಗಳ)
 ಪುಚ್ಛಸಂಲಗ್ನಾ (ಬಾಲಕ್ಕೆ ತಗಲಿದ)
 ವಹ್ನಿಜ್ವಾಲಾ ಇವ(ಬೆಂಕಿಯ ಉರಿಯಂತೆ)
 ಸಂಲಗ್ನಾ ಭವತಿ (ಅಂಟಿಕೊಂಡೇ ಇರುತ್ತದೆ)


ಭಾವಾರ್ಥ:

 ಹಕ್ಕಿಯ ಬಾಲಕ್ಕೆ ಹತ್ತಿಕೊಂಡ ಉರಿ ಹಾರಿಹೋದರೆ ಆರಿಹೋದೀತೇ? ಹಕ್ಕಿಯೊಂದಿಗೆ ಬಾಲ, ಬಾಲದೊಂದಿಗೆ ಉರಿ ಬಂದೇ ಬರುತ್ತದೆ. ಮಾಡಿದ ಕರ್ಮದ ಫಲವನ್ನೂ ಅಷ್ಟೇ ತಪ್ಪಿಸಿಕೊಳ್ಳಲಾಗದು.
 ಒಳ್ಳೆಯದೋ ಕೆಟ್ಟದ್ದೋ ಏನೇ ಇದ್ದರೂ ಮಾಡಿದ ಕರ್ಮದ ಫಲವನ್ನು ಅನಭವಿಸಲೇ ಬೇಕು. ಅದೂ ಸಹ ಎರಡನ್ನೂ ಪ್ರತ್ಯೇಕವಾಗಿಯೇ! ಅಷ್ಟು ದೊಡ್ಡ ಧಾರ್ಮಿಕ, ಸಾಕ್ಷಾತ್ ಯಮನ ಪುತ್ರ ಧರ್ಮರಾಯನೇ ಅರ್ಧಸತ್ಯ ನುಡಿದುಕ್ಕಾಗಿ ನರಕದರ್ಶನವಾಯಿತು. ಆ ಸಮಯದಲ್ಲಿ ಇಂದ್ರನು ಯುಧಿಷ್ಠಿರನಿಗೆ ಹೇಳಿದಂತೆ ಪ್ರತಿಯೊಬ್ಬನೂ ನರಕದರ್ಶನ ಮಾಡಲೇಬೇಕು. ಶುಭಕರ್ಮ ಅಶುಭಕರ್ಮಗಳ ರಾಶಿಗಳು ಬೇರೆ ಬೇರೆಯಾಗಿಯೇ ಇರುವವು. ಒಂದನ್ನೊಂದು ನಿವಾರಿಸಲಾರವು. ಮೊದಲು ಪುಣ್ಯದ ಫಲ ಅನುಭವಿಸಿದವನು ಮತ್ತೆ ಪಾಪದ ಫಲ ಅನುಭವಿಸಬೇಕು. ಮೊದಲು ಪಾಪದ ಫಲ ಅನುಭವಿಸಿದವನು ಮತ್ತೆ ಪುಣ್ಯದ ಫಲ ಅನುಭವಿಸಬೇಕು. ಬಾಲಕ್ಕೆ ಹತ್ತಿದ ಬೆಂಕಿಯಂತೆ ಅದು ಹಿಂಬಾಲಿಸಿಯೇ ಸಿದ್ಧ. ಪಲಾಯನಕ್ಕೆ ಅವಕಾಶವೇ ಇಲ್ಲ. ಸ್ವಲ್ಪವೇ ಪಾಪ ಮಾಡಿದವನು ಮೊದಲು ನರಕ ಅನುಭವಿಸಿ ಆಮೇಲೆ ಸ್ವರ್ಗ ಸೇರುತ್ತಾನೆ.  ದ್ರೋಣನ ಕಾರಣವಾಗಿ ಸುಳ್ಳಾಡಿದೆಯಲ್ಲಾ ಅದಕ್ಕಾಗಿ ನಿನಗೆ ನರಕದರ್ಶನವಾಗಿದೆ ಎನ್ನುತ್ತಾನೆ ಇಂದ್ರ. ಪಾಪ ಮಾಡಿದವರು ಮಾಡುತ್ತಲೇ ಇರುವವರು ಸುಖವಾಗಿರುವುದು ಕಣ್ಣಾರೆ ಕಾಣುತ್ತೇವಲ್ಲ ಎಂದರೆ ಅದಕ್ಕೂ ಇಂದ್ರನು ಉತ್ತರವಿದೆ:
ಹೇರಳವಾಗಿ ಪಾಪ ಮಾಡಿದವರು ಮೊದಲು ಸ್ವರ್ಗ ಅನುಭವಿಸಿ ನಂತರ ನರಕ ಸೇರುತ್ತಾರೆ. ಅವರೂ ತಪ್ಪಸಿಕೊಳ್ಳುವಂತಿಲ್ಲ. ಈಗ ಸುಖ ಅನುಭವಿಸಿದವರೂ ನಂತರ ಕಷ್ಟ ಇದ್ದೇ ಇದೆ. ಮನುಷ್ಯನೆಂದ ಮೇಲೆ ತಪ್ಪು ಮಾಡುವುದು ಸಹಜ. ಆದರೆ ಪಲಾಯನಗೈಯುವ ಪ್ರಯತ್ನ ಮಾಡದೆ ತಪ್ಪು ಒಪ್ಪನ್ನು ವಿವೇಚಿಸಿ ಭಗವಂತನ ತಕ್ಕಡಿಯಲ್ಲಿ ಪುಣ್ಯದ ತೂಕವನ್ನು ಹೆಚ್ಚಿಸಿಕೊಳ್ಳುವವನೇ ವಿವೇಕಿ. 
ಸುಭಾಷಿತ - ೫೨

ಉತ್ಸಾಹಸಂಪನ್ನಮದೀರ್ಘಸೂತ್ರಿಣಂ
ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್।
ಶೂರಂ ಕೃತಜ್ಞಂ ದೃಢಸೌಹೃದಂ ಚ
ಲಕ್ಷ್ಮೀ ಸ್ವಯಂ ಯಾತಿ ನಿವಾಸಹೇತೋಃ।।

ಅನ್ವಯಾರ್ಥ:

ಉತ್ಸಾಹಸಂಪನ್ನಂ(ಉತ್ಸಾಹದಿಂದ ಕೂಡಿದವನನ್ನು) ಅದೀರ್ಘಸೂತ್ರಿಣಂ(ಕಾಲಕಳೆಯದವನನ್ನು) ಕ್ರಿಯಾವಿಧಿಜ್ಞಂ(ಕಾರ್ಯವಿಧಾನವನ್ನು ಅರಿತವನನ್ನು) ವ್ಯಸನೇಷು ಅಸಕ್ತಂ(ದುಶ್ಚಟಗಳಲ್ಲಿ ಆಸಕ್ತಿ ಇಲ್ಲದವನನ್ನು) ಶೂರಂ(ಶೂರನನ್ನು)
 ಕೃತಜ್ಞಂ (ಕೃತಜ್ಞನನ್ನು)
 ದೃಢಸೌಹೃದಂ ಚ(ಮತ್ತು
 ದೃಢವಾದ ಸ್ನೇಹಪ್ರವೃತ್ತಿ ಉಳ್ಳವನನ್ನು) ನಿವಾಸಹೇತೋಃ(ವಸತಿಯ ಕಾರಣಕ್ಕೆ)
 ಲಕ್ಷ್ಮೀ (ಲಕ್ಷ್ಮಿಯು)
 ಸ್ವಯಂ (ತಾನಾಗಿಯೇ)
 ಯಾತಿ (ಪ್ರವೇಶಿಸುತ್ತಾಳೆ)


ಭಾವಾರ್ಥ:

 ವಿಘ್ನಗಳು ಬರುವುದು ಸಹಜ. ಹಾಗೆಂದು ಅದಕ್ಕೆ ಹೆದರಿ ಪ್ರಯತ್ನ ಮಾಡದೇ ಇರುವುದು, ಆರಂಭಿಸಿ ಅರ್ಧದಲ್ಲೇ ನಿಲ್ಲಿಸುವುದು ಸಲ್ಲದು. ಉತ್ತಮರು ಎಷ್ಟೇ ವಿಘ್ನಗಳು ಬಂದರೂ ಉತ್ಸಾಹ ಕಳೆದುಕೊಳ್ಳದೆ ಹಿಡಿದ ಕಾರ್ಯವನ್ನು ಪೂರೈಸುವರು. ಆ ಛಲವಿದ್ದರೆ ದೈವಸಹಾಯ ತಾನಾಗಿಯೇ ಬರುತ್ತದೆ.

ದೀರ್ಘಸೂತ್ರೀ ಎಂದರೆ ಸೋಮಾರಿತನದಿಂದ ನಾಳೆ ಮಾಡಿದರಾಯಿತು ಎಂದು ಕಾಲಕಳೆಯುವವನು. ಅವಕಾಶಗಳು ಬಂದಾಗ ಉಪಯೋಗಿಸಿಕೊಳ್ಳುವುದು ಜಾಣತನ. ಕಳಕೊಂಡರೆ ಇನ್ನೊಮ್ಮೆ ಸಿಗುವುದು ಕಷ್ಟ. ಕಳೆದುಹೋದ ಕಾಲ ಎಂದಿಗೂ ಹಿಂದಿರುಗದು.

 ಮಾಡುವ ಕೆಲಸದ ಸಾಧಕ ಬಾಧಕಗಳನ್ನು ಚಿಂತಿಸಿ ಸರಿಯಾದ ನ್ಯಾಯಯುತವಾದ ರೀತಿಯಲ್ಲಿ ಕಾರ್ಯಪ್ರವೃತ್ತನಾದರೆ ಸೋಲೆಂಬುದಿಲ್ಲ. ಕಾರ್ಯವಿಧಾನವನ್ನು ಅರಿತಿರಬೇಕು ಅಷ್ಟೇ.

ದುಶ್ಚಟಗಳಲ್ಲಿ ಒಮ್ಮೆ ಆಸಕ್ತನಾದರೆ ಕಾರ್ಯಸಾಧನೆಗೆ ಅದಕ್ಕಿಂತ ಅಡ್ಡಿ ಬೇರೊಂದಿಲ್ಲ. ಸಾಧಿಸುವುದು ಬಿಡಿ, ಈಗಾಗಲೇ ಸಾಧಿಸಿದ್ದನ್ನೂ ಅವು ಇಲ್ಲವಾಗಿಸುತ್ತವೆ.

ಅಳುಕು ಅಂಜಿಕೆ ಎಂದಿದ್ದರೂ ಬಾಧಕವೇ. ಸಾಧಿಸಬೇಕಾದ ಗುರಿ ಸಾಧುವಾಗಿದ್ದರೆ ಅಂಜಿಕೆ ಯಾಕೆ? ಅಳುಕು ಯಾಕೆ?  ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಗೆಲುವು ನಿಶ್ಚಿತ.

ಎಷ್ಟೇ ಪರಿಣತಿಯಿರಲಿ ಸಾಮರ್ಥ್ಯವಿರಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಇನ್ನೊಬ್ಬರ ಸಹಾಯ ಸಹಕಾರ ಬೇಕೇ ಬೇಕು. ಅದನ್ನು ಎಂದಿಗೂ ಮರೆಯುವಂತಿಲ್ಲ. ಕೃತಜ್ಞತೆ ಉಳ್ಳವನಿಗೆ ಸಮಾಜದ ಸಹಕಾರ ಸದಾ ಇರುತ್ತದೆ.
 ದೈವಸಹಾಯವೂ ಇದೆ.
   ಕೃತಘ್ನತೆಗೆ ಪ್ರಾಯಶ್ಚಿತ್ತ ಇಲ್ಲವೇ ಇಲ್ಲ. ಕಷ್ಟಕಾಲದಲ್ಲಿ ನೆರವಾಗುವವನೇ ಬಂಧು ಮಿತ್ರ. ಆದ್ದರಿಂದ ಮಿತ್ರರಿದ್ದಲ್ಲಿ ಕಷ್ಟದ ಭಾರ ಕಡಿಮೆ. ದೃಢವಾದ ಮೈತ್ರೀಭಾವವು ಗೆಲುವಿನ ಸೋಪಾನ. ಉತ್ಸಾಹ, ಚುರುಕುತನ, ಕಾರ್ಯಕ್ಷಮತೆ,ದುಶ್ಚಟಗಳಿಂದ ದೂರವಿರುವುದು,ಧೈರ್ಯ, ಕೃತಜ್ಞತೆ, ಮೈತ್ರೀಭಾವ ಈ ಎಲ್ಲಾ ಗುಣಗಳನ್ನು ರೂಢಿಸಿಕೊಂಡವನನ್ನು ಲಕ್ಷ್ಮಿಯು ತಾನಾಗಿಯೇ ಹುಡುಕಿಕೊಂಡು ಬಂದು ಅಲ್ಲೇ ನೆಲೆಸುತ್ತಾಳೆ. 

Thursday 7 March 2019

ಸುಭಾಷಿತ - ೫೧

ಘಟ್ಟನಪ್ರತಿಭಾಃ ಕೇಚಿತ್ಕೇಚಿದ್ಘಟ್ಟನನಿಸ್ಪೃಹಾಃ।
ಘಟದೀಪಪ್ರಭಾಃ ಕೇಚಿತ್ಕೇಚಿದಾಕಾಶಸನ್ನಿಭಾಃ॥

ಅನ್ವಯಾರ್ಥ:

 ಕೇಚಿತ್ (ಕೆಲವು ಜನರು)
 ಘಟ್ಟನಪ್ರತಿಭಾಃ (ಪ್ರಚೋದನೆಯಿಂದ ಬೆಳಗುವವರು)   ಕೇಚಿತ್(ಕೆಲವರು)
 ಘಟ್ಟನನಿಸ್ಪೃಹಾಃ (ಪ್ರಚೋದನೆಯಿಂದ ಬದಲಾಗದವರು)   ಕೇಚಿತ್ (ಕೆಲವರು )
 ಘಟದೀಪಪ್ರಭಾಃ (ಮಡಕೆಯೊಳಗಿನ ದೀಪದಂಥವರು)   ಕೇಚಿದಾಕಾಶಸನ್ನಿಭಾಃ(ಆಕಾಶದಂತೆ ಬೆಳಗುವವರು)

ಭಾವಾರ್ಥ:

ಪ್ರತಿಭೆ ಎಲ್ಲರಲ್ಲೂ ಇದೆ. ಕೆಲವರಲ್ಲಿ ಹೆಚ್ಚು ಕೆಲವರಲ್ಲಿ ಸ್ವಲ್ಪ ಕಡಿಮೆ. ಒಬ್ಬೊಬ್ಬರು ಒಂದೊಂದರಲ್ಲಿ ನಿಸ್ಸೀಮರು. ಕೆಲವರಿಗೆ ಅವರ ಪ್ರತಿಭೆಯ ಅರಿವೇ ಇರುವುದಿಲ್ಲ.ಅದು ಕೀಳರಿಮೆಯಿಂದಲೋ ಉದಾಸಭಾವದಿಂದಲೋ ಕಮರಿ ಹೋಗುವುದು. ಅವರನ್ನು ಒಮ್ಮೆ ಪ್ರೋತ್ಸಾಹಿಸಿ ಹೊರತಂದರೆ ಬೆಳಗುತ್ತಾರೆ. ಕೆಲವರದು ಸದಾ ಪ್ರೋತ್ಸಾಹವನ್ನೇ ಬಯಸುವ ಪ್ರತಿಭೆ. ಅವರೂ ಘಟ್ಟನಪ್ರತಿಭರೇ. ಅವರು ತಾವಾಗಿಯೇ ಬೆಳಗಬಲ್ಲರು. ಆದರೂ ಪ್ರೋತ್ಸಾಹ ಬಯಸುವ ಮನೋಗುಣ ಅವರದು. ಅದು ಪರಾವಲಂಬಿತ ಪ್ರತಿಭೆ. ಕೆಲವರಲ್ಲಿ ನಿವಾರಿಸಲಾಗದಂತಹ ಜಡತ್ವವು ಪ್ರತಿಭೆಯನ್ನು ಆವರಿಸಿರಬಹುದು. ಎಷ್ಟೇ ಪ್ರಚೋದಿಸಿದರೂ ಅಂಥವರು ಮುಂಬರುವವರಲ್ಲ. ಪ್ರೋತ್ಸಾಹದ ಪ್ರಯತ್ನ ಅಲ್ಲಿ ವ್ಯರ್ಥ. ಇನ್ನು ಕೆಲವರು ಘಟದೀಪಪ್ರಭರು. ಅವರಲ್ಲಿ ಸ್ವಯಂಪ್ರಭೆ ಇದೆ. ಆದರೆ ಹೊರಬರುವುದನ್ನು ಅವರೇ ಬಯಸುವುದಿಲ್ಲ. ಮಡಕೆಯೊಳಗಿನ ದೀಪದಂತೆ, ಒಳಗೆ ಸಾಕಷ್ಟು ಬೆಳಕಿದೆ. ಆದರೆ ಲೋಕಕ್ಕೆ ಕಾಣಿಸುವಂತಿಲ್ಲ. ಯಾವುದೇ ಪ್ರಚೋದನೆ ಪ್ರಚಾರ ಬಯಸದ ಅವರಿಂದ ಲೋಕಕ್ಕೇನೂ ಲಾಭವೂ ಇಲ್ಲ ಹಾನಿಯೂ ಇಲ್ಲ. ನಾಲ್ಕನೆಯ ವರ್ಗ ಲೋಕಹಿತಕಾರಕ. ಸೂರ್ಯಚಂದ್ರರಿಂದ ಬೆಳಗುವ ಆಕಾಶದಂತೆ ತಮ್ಮ ಸ್ವಯಂಪ್ರಭೆಯಿಂದ ತಾವೂ ಬೆಳಗಿ ಲೋಕವನ್ನೂ ಬೆಳಗುವವರು. ಯಾವ ಪ್ರೋತ್ಸಾಹವೋ ಪ್ರಚೋದನೆಯೋ ಪ್ರಚಾರವೋ ಅವರಿಗೆ ಬೇಡವೇ ಬೇಡ. ಆಚಾರ್ಯ ಶಂಕರರು ಸ್ವಾಮಿ ವಿವೇಕಾನಂದರೇ ಮೊದಲಾದ ಮಹಾತ್ಮರು ಇತರರಿಗೆ ಆಧಾರವಾಗಿ ಲೋಕಕಲ್ಯಾಣಕಾರಕರಾಗಿರುತ್ತಾರೆ.            
ಸುಭಾಷಿತ - ೫೦

ನ ಸೀದನ್ನಪಿ ಚ ಧರ್ಮೇಣ ಮನೋಽಧರ್ಮೇ ನಿವೇಶಯೇತ್।ಅಧಾರ್ಮಿಕಾಣಾಂ ಪಾಪಾನಾಮಾಶು ಪಶ್ಯನ್ವಿಪರ್ಯಯಮ್॥
             (ಮನು ಸ್ಮೃತಿ)

ಅನ್ವಯಾರ್ಥ:


ಅಧಾರ್ಮಿಕಣಾಮ್(ಅಧರ್ಮಿಗಳಿಗೆ)
 ಪಾಪಾನಾಂ(ಪಾಪಿಗಳಿಗೆ )
 ಆಶು ವಿಪರ್ಯಯಂ(ಕೂಡಲೇ ಒದಗುವ ದುರ್ಗತಿಯನ್ನು)   ಪಶ್ಯನ್(ನೋಡಿ)
 ಧರ್ಮೇಣ (ಧರ್ಮದ ಕಾರಣದಿಂದ)
 ಸೀದನ್ ಅಪಿ (ಕಷ್ಟಕ್ಕೊಳಗಾಗಿದ್ದರೂ)   ಅಧರ್ಮೇ(ಅಧರ್ಮದಲ್ಲಿ)
 ಮನಃ(ಮನಸ್ಸನ್ನು)
 ನ ನಿವೇಶಯೇತ್(ತೊಡಗಿಸಿಕೊಳ್ಳಬಾರದು)


ಭಾವಾರ್ಥ:

 ಧರ್ಮದ ದಾರಿ ಯಾವಾಗಲೂ ಅಧರ್ಮದ ದಾರಿಯಷ್ಟು ಸುಗಮವೂ ಅಲ್ಲ ಆಕರ್ಷಕವೂ ಅಲ್ಲ. ಆದರೆ ಪರಿಣಾಮ ನೋಡಿದರೆ ಧರ್ಮವೇ ಆಕರ್ಷಕ. ಅಧರ್ಮದ ಪರಿಣಾಮ ಭೀಕರ. ಅಂಗಡಿಯಲ್ಲಿ ದೊರೆಯುವ ತಿಂಡಿ ರುಚಿಕರವೇನೋ ಹೌದು ಆದರೆ ಮುಂದೆ ಬರುವ ಅನಾರೋಗ್ಯದ ವೇದನೆ ನೆನೆದರೆ ಮನೆಯಲ್ಲಿ ಅಮ್ಮ ಮಾಡಿದ ತಿಂಡಿಯೇ ಆಗಬಹುದು ಎನಿಸುವುದಿಲ್ಲವೇ? ಸೃಷ್ಟಿಯಲ್ಲಿ ಪ್ರತಿಯೊಬ್ಬನಿಗೂ ಕಷ್ಟವಿದೆ. ಕಷ್ಟ ಬಂದಾಗ ವಿಚಲಿತರಾಗುವುದೂ ಸಹಜವೇ. ಆದರೆ ಕ್ಷಣಕಾಲ ವಿವೇಕಕ್ಕೆ ಮನಸ್ಸು ಕೊಟ್ಟರೆ ಅದುವೇ ದಾರಿ ತೋರಿಸುತ್ತದೆ. ಸುತ್ತುಮುತ್ತಲಿನ ಅಧಾರ್ಮಿಕರನ್ನು ಕಂಡಾಗ ಅವರ ಧನದೌಲತ್ತು ನಮಗೂ ಇರಬೇಕಿತ್ತು ಎನಿಸಿದರೂ ಅವರ ಬಗ್ಗೆ ಮನಸ್ಸಿನಲ್ಲಿ ಗೌರವ ಮೂಡುತ್ತದೆಯೇ? ಆ ದೌಲತ್ತು ತೀರಾ ಕ್ಷಣಿಕ. ಕಾನೂನಿನ ಕೈಗೆ ಸಿಕ್ಕಿ ಶಿಕ್ಷೆಗೊಳಗಾಗಿ ಮಾನ ಹರಾಜಾಗುವುದನ್ನು ನೋಡುವಾಗ ಆ ಸಂಪತ್ತೂ ಬೇಡ ಅದರ ಸುಖವೂ ಬೇಡ ಅನ್ನಿಸುವುದಿಲ್ಲವೇ? ಯಾವಾಗಲೂ ಹಾಗೆಯೇ ಕೆಟ್ಟದ್ದಕ್ಕಿರುವ ಆಕರ್ಷಣೆ ಒಳ್ಳೆಯದಕ್ಕಿಲ್ಲ. ಹೊಟ್ಟೆ ಬಿರಿಯುವಂತೆ ತಿಂದು ಕಾಲು ಚಾಚಿ ಮಲಗಿ ನಿದ್ರಿಸುವ ಸುಖ ಮಿತವಾಗಿ ತಿಂದು ಚೆನ್ನಾಗಿ ದುಡಿಯುವವನಿಗಿಲ್ಲ ನಿಜ. ಆದರೆ ಮುಂದೆ ಬೊಜ್ಜು ಬಂದು ಮನೆಯೊಳಗೆ ನಡೆಯುವಾಗಲೂ ಏದುಸಿರು ಬಿಡುವವನ ಕಷ್ಟ ದುಡಿಯುವವನಿಗೆ ಇಲ್ಲ. ಧರ್ಮದಿಂದ ಕಷ್ಟ ಅಧರ್ಮದಿಂದ ಸುಖ ಎಂದು ಮೇಲ್ನೋಟಕ್ಕೆ ಅನಿಸಿದರೂ ಧಾರ್ಮಿಕರಿಗಿರುವ ನೆಮ್ಮದಿ ಸಮಾಜದಲ್ಲಿ ಸಿಗುವ ಗೌರವಗಳನ್ನು ಗಮನಿಸಿ ಎಷ್ಟೇ ಕಷ್ಟ ಬಂದರೂ ಅಧರ್ಮದ ದಾರಿಯನ್ನು ತುಳಿಯದಿರುವ ಮಸಃಸ್ಥೈರ್ಯವನ್ನು ಕೊಡು ಎಂದು ಭಗವಂತನನ್ನು ಪ್ರಾರ್ಥಿಸೋಣ.

Tuesday 5 March 2019

ಸುಭಾಷಿತ - ೪೯

ಸಂತುಷ್ಟೋ ಭಾರ್ಯಯಾ ಭರ್ತಾ ಭರ್ತ್ರಾ ಭಾರ್ಯಾ ತಥೈವ ಚ।
ಯಸ್ಮಿನ್ನೇವ ಕುಲೇ ನಿತ್ಯಂ ಕಲ್ಯಾಣಂ ತತ್ರ ವೈ ಧ್ರುವಮ್॥



ಅನ್ವಯಾರ್ಥ:

 ಯಸ್ಮಿನ್ ಕುಲೇ(ಯಾವ ಸಂಸಾರದಲ್ಲಿ) ಭಾರ್ಯಯಾ(ಹೆಂಡತಿಯಿಂದ)
 ಭರ್ತಾ(ಗಂಡನು)
 ಸಂತುಷ್ಟಃ(ಸಂತೋಷ ಹೊಂದುತ್ತಾನೋ)
 ತಥಾ ಏವ ಚ(ಹಾಗೆಯೇ)
 ಭರ್ತ್ರಾ(ಗಂಡನಿಂದ)
 ಭಾರ್ಯಾ ( ಹೆಂಡತಿಯು)
 (ಸಂತುಷ್ಟಾ ಭವತಿ ಸಂತೋಷ ಪಡುತ್ತಾಳೋ)
 ತತ್ರ (ಅಲ್ಲಿ)
 ಕಲ್ಯಾಣಂ (ಶ್ರೇಯಸ್ಸು)
 ಧ್ರುವಮ್ (ನಿಶ್ಚಿತವು).


ಭಾವಾರ್ಥ:

  ಹಿತವಾದ ಜೀವನಕ್ಕೆ ಕಾರಣವಾದದ್ದು ಕಲ್ಯಾಣ. ಪ್ರಿಯವಾದದ್ದು ಪ್ರೇಯಸ್ಸು ಹಿತವಾದದ್ದು ಶ್ರೇಯಸ್ಸು ಪ್ರಿಯವಾದುದೆಲ್ಲವೂ ಹಿತವಾಗರದು. ಹಿತವಾದುದರಲ್ಲಿ ಪ್ರೀತಿ ಬೆಳೆಸಿಕೊಂಡಾಗ ಪ್ರೇಯಸ್ಸು ಶ್ರೇಯಸ್ಸಿಗೆ ಕಾರಣವಾಗುತ್ತದೆ. ವಿವಾಹದಿಂದ ಗೃಹಸ್ಥಾಶ್ರಮವನ್ನು ಸೇರಿ ಧರ್ಮಪ್ರಜಾಸಂಪತ್ತುಗಳನ್ನು ಸಿದ್ಧಿಸಿಕೊಂಡು ಸಾರ್ಥಕ ಬದುಕು ಬಾಳಬೇಕು. ಧರ್ಮ ಅರ್ಥ ಕಾಮಗಳನ್ನು ಹೊಂದಿ ಮೋಕ್ಷ ಸಾಧಿಸುವುದೇ ಶ್ರೇಯಸ್ಸು. ಆ ಕಾರಣದಿಂದಲೇ ವಿವಾಹವು ಕಲ್ಯಾಣವೆಂದು ಕರೆಯಲ್ಪಡುತ್ತದೆ. ಪತ್ನಿಯಿಂದ ಪತಿಯು ಸಂತುಷ್ಟನಾಗಬೇಕು. ಹಾಗೆಯೇ ಪತಿಯಿಂದ ಪತ್ನಿಯೂ ಸಂತೃಪ್ತಳಾಗಬೇಕು. ಪುರುಷಪ್ರಾಧಾನ್ಯತೆ ಸ್ತ್ರೀಸ್ವಾತಂತ್ರ್ಯ ಎಲ್ಲವೂ ಅರ್ಥಹೀನ ವಾದಗಳು. ಎರಡೂ ಚಕ್ರಗಳೂ ಸಮಾನವಾಗಿ ಚಲಿಸಿದಾಗ ಮಾತ್ರ ರಥವು ಸರಾಗವಾಗಿ ಚಲಿಸೀತು. ಸರಿಯಾದ ರೀತಿಯಲ್ಲಿ ಸಾಗಿದರೆ ಅದು ಸಂಸಾರ. ಸರಾಗವಾಗಿ ಸಾಗಬೇಕಾದರೆ ಆ ಸಂಸಾರವು ಸ+ರಾಗ (ಪ್ರೀತಿಯಿಂದ ಕೂಡಿದ್ದು) ಆಗಿರಬೇಕು. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಅನುನಯಿಸಿಕೊಂಡು ಪರಸ್ಪರ ಸಂತೃಪ್ತಿ ಹೊಂದುವ ದಂಪತಿಗಳ ಕುಟುಂಬದಲ್ಲಿ ಕಲ್ಯಾಣ(ಶ್ರೇಯಸ್ಸು) ಶಾಶ್ವತವಾಗಿರುತ್ತದೆ.
ಸುಭಾಷಿತ - ೪೮

ಮ್ರಿಯಮಾಣಂ ಮೃತಂ ಬಂಧುಂ ಶೋಚಂತೇ ಪರಿದೇವಿನಃ।ಆತ್ಮಾನಂ ನಾನುಶೋಚಂತಿ ಕಾಲೇನ ಕವಲೀಕೃತಮ್।।



ಅನ್ವಯಾರ್ಥ:

 ಮ್ರಿಯಮಾಣಂ (ಸಾಯುತ್ತಿರುವ)
 ಮೃತಂ(ಸತ್ತಿರುವ)
 ಬಂಧುಂ (ಪ್ರತಿ)
 (ಬಂಧುವನ್ನು ಕುರಿತು)
 ಪರಿದೇವಿನಃ (ಪ್ರೀತಿಪಾತ್ರರು)
 ಶೋಚಂತೇ(ದುಃಖಿಸುತ್ತಾರೆ.)
 ಕಾಲೇನ (ಕಾಲನಿಂದ/ವಿಧಿಯಿಂದ)   ಕವಲೀಕೃತಂ(ತಿನ್ನಲ್ಪಪಡುತ್ತಿರುವ)
 ಆತ್ಮಾನಂ(ತನ್ನನ್ನು)(ಕುರಿತು)
 ನ ಅನುಶೋಚಂತಿ (ಚಿಂತಿಸುವುದಿಲ್ಲ)



 ಭಾವಾರ್ಥ:

ಬಂಧುವೋ ಸ್ನೇಹಿತನೋ ಇನ್ನೊಬ್ಬ ಪರಕೀಯನೋ ಸಾಯುತ್ತಿರುವುದನ್ನೋ ಸತ್ತಿರುವುದನ್ನೋ ನೋಡಿ ನೊಂದುಕೊಂಡು ಪ್ರಲಾಪಿಸುತ್ತಾರೆ. ಪಾಪ ಸಾಯಬಾರದಿತ್ತು, ಹಿಂದೆ ಕಷ್ಟ ಪಟ್ಟವನು, ಈಗ ಆರಾಮವಾಗಿ ಬದುಕಬೇಕಾದ ಸಮಯದಲ್ಲಿ ತೀರಿಹೋದ, ಮಡದಿ ಮಕ್ಕಳ ಗತಿಯೇನು? ಎಂದೆಲ್ಲಾ ಸಂತಾಪಪಡುವವರೇ ಎಲ್ಲರೂ. ಆದರೆ ತಾನೂ ಸರದಿಯಲ್ಲಿದ್ದೇನೆ. ಕಾಲನು ಬಾಯ್ದೆರೆದು ನಿಂತಿದ್ದಾನೆ. ಯಾವಾಗ ಅವನ ದವಡೆಯೊಳಗೆ ಸೇರುತ್ತೇನೋ ಎಂದು ಯೋಚಿಸುವವರು ಯಾರೂ ಇಲ್ಲ ಆ ಯೋಚನೆ ಬಂದೊಡನೇ ಮನಸ್ಸು ಧಾರ್ಮಿಕತೆಯೆಡೆಗೆ ಹರಿಯುತ್ತದೆ, ಹರಿಯಬೇಕು. ಮೃತ್ಯುವು ಜುಟ್ಟು ಹಿಡಿದಿದ್ದಾನೆ. ಇನ್ನೇನು ಪಾಶ ಹಾಕುವವನೇ ಎನಿಸಿದಾಗ ಭಗವಂತನ ನಾಮಸ್ಮರಣೆ ಆಗದಿದ್ದೀತೇ! ಅದೇ ಭಾವ ಸದಾ ಇರಬೇಕು, ಧರ್ಮಾಚರಣೆಯಲ್ಲಿ ತೊಡಗಬೇಕು. ಈಗಿನ್ನೂ ಯುವಕ ಜಪತಪ ದಾನಧರ್ಮದ ಯೋಚನೆ ಈಗೇಕೆ? ಆಮೇಲೆ ನೋಡಿಕೊಳ್ಳೋಣ ಎಂದರೆ ಕಾಲನ ಗತಿಯನ್ನು ಕಂಡವರಾರು? ಯಾವನು ಸಂತಸದಿಂದ ಇರುತ್ತಾನೆ? ಪ್ರಪಂಚದಲ್ಲಿ ಪರಮಾಶ್ಚರ್ಯ ಯಾವುದು? ಎಂಬ ಯಕ್ಷಪ್ರಶ್ನೆಗೆ ಧರ್ಮಜ ಉತ್ತರಿಸುತ್ತಾನೆ: ಸತ್ಯವಂತನು ಸಂತೋಷದಿಂದಿರುತ್ತಾನೆ. ಕಣ್ಣೆದುರೇ ಇತರರು ಸಾಯುವುದನ್ನು ದಿನವೂ ನೋಡುತ್ತಿದ್ದರೂ ತಾನು ಮಾತ್ರ ಸಾಯುವವನಲ್ಲ ಎಂದುಕೊಳ್ಳುತ್ತಾನಲ್ಲ ಮಾನವ!! ಇದಕ್ಕಿಂತ ಆಶ್ಚರ್ಯ ಇನ್ನೇನಿದೆ? ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಾ ಹೋಗುವಾಗ ಎಷ್ಟೋ ಸಲ ಅಪಘಾತಗಳನ್ನು ಕಣ್ಣಾರೆ ಕಾಣುತ್ತೇವಲ್ಲ. ಕ್ಷಣಕಾಲ ನಿಲ್ಲಿಸಿ ನೋಡಿ ಅಯ್ಯೋ ಪಾಪ ಎನ್ನುತ್ತೇವೆ, ಓಹೋ ತಡವಾಯ್ತು ಎಂದು ಮೊದಲಿನಿಂದಲೂ ವೇಗವಾಗಿ ಮುಂದುವರಿಯುತ್ತೇವೆ, ನಮಗೆ ಅಪಘಾತ ಆಗುವುದೇ ಇಲ್ಲ, ನಾವು ಸಾಯುವವರೇ ಅಲ್ಲ ಎಂಬ ಹಾಗೆ. ಇದಕ್ಕಿಂತ ಆಶ್ಚರ್ಯ ಇನ್ನೇನಿದೆ?!!!

Tuesday 26 February 2019

ಸುಭಾಷಿತ  ೪೭


ಏಕೋಽಹಮಸಹಾಯೋಽಹಂ ಕೃಶೋಽಹಮಪರಿಚ್ಛದಃ।
ಸ್ವಪ್ನೇಽಪ್ಯೇವಂವಿಧಾ ಚಿಂತಾ ಮೃಗೇಂದ್ರಸ್ಯ ನ ಜಾಯತೇ।।


ಅನ್ವಯಾರ್ಥ:

 ಅಹಂ ಏಕಃ (ನಾನು ಏಕಾಕಿ)
 ಅಹಂ ಅಸಹಾಯಃ (ನಾನು ನಿಸ್ಸಹಾಯಕ)
 ಅಹಂ ಕೃಶಃ (ನಾನು ದರ್ಬಲ)
 ಅಹಂ ಅಪರಿಚ್ಛದಃ (ನಾನು ಅನಾಥ)
 ಏವಂವಿಧಾ (ಈ ರೀತಿಯ)
 ಚಿಂತಾ (ಯೋಚನೆಯು)
 ಮೃಗೇಂದ್ರಸ್ಯ (ಸಿಂಹಕ್ಕೆ)
 ಸ್ವಪ್ನೇ ಅಪಿ (ಕನಸಿನಲ್ಲೂ ಕೂಡಾ)
 ನ ಜಾಯತೇ (ಉಂಟಾಗುವುದಿಲ್ಲ)

ಭಾವಾರ್ಥ:

 ಸಮರ್ಥನು ಎನ್ನಿಸಿಕೊಳ್ಳಲು ಬಲ ಬುದ್ಧಿಮತ್ತೆ ಎಷ್ಟು ಮುಖ್ಯವೋ ಆತ್ಮವಿಶ್ವಾಸ ಅದಕ್ಕಿಂತಲೂ ಹೆಚ್ಚು ಮುಖ್ಯ. ನಾನು ಒಂಟಿ, ದುರ್ಬಲ , ಅನಾಥ, ಯಾರ ಸಹಾಯವೂ ಇಲ್ಲದೆ ಏನು ತಾನೇ ಮಾಡಬಲ್ಲೆ! ಎಂದು ಸಿಂಹವು ಎಂದೂ ಕೀಳರಿಮೆ ಹೊಂದುವುದಿಲ್ಲ. ಆನೆಗಳ ಶಾರೀರಿಕ ಬಲ ಸಿಂಹಕ್ಕಿಲ್ಲ. ಸಂಖ್ಯೆಯೂ ಆನೆಗಳಿಗಿಂತ ಎಷ್ಟೋ ಕಡಿಮೆ. ಆದರೇನು ಹಿಂಡು ಹಿಂಡೇ ಬಂದರೂ ಹೆದರದೆ ಮದಿಸಿದ ಆನೆಯ ಕುಂಭಸ್ಥಲವನ್ನೇ ಬಗೆಯುವ ಸಾಮರ್ಥ್ಯಕ್ಕೆ ಕಾರಣ ಅದರ ಆತ್ಮವಿಶ್ವಾಸ. ದ್ರೋಣ, ಕರ್ಣ, ಬೃಹದ್ಬಲ, ಭೂರಿಶ್ರವ, ಶಲ್ಯ, ಅಶ್ವತ್ಥಾಮ ದುರ್ಯೋಧನ ದುಶ್ಶಾಸನರೇ ಮೊದಲಾದ ಅತಿರಥ ಮಹಾರಥರು ಏಕಕಾಲದಲ್ಲಿ ಸುತ್ತುವರಿದು ಬಾಣಪ್ರಯೋಗ ಮಾಡುತ್ತಿದ್ದರೂ ಏಕಾಕಿ ಅಭಿಮನ್ಯು ಅವರನ್ನು ಎದುರಿಸಿ ಹೋರಾಡುತ್ತಿದ್ದರೆ ಬಿಲ್ಲು ಹಿಡಿದು ನೃತ್ಯ ಮಾಡುತ್ತಿರುವಂತೆ ತೋರುತ್ತಿತ್ತು. ಕಲ್ಪನೆಗೂ ನಿಲುಕದ ಆ ಮಹಾಸಾಹಸಕ್ಕೆ ಆತನ ಸಾಮರ್ಥ್ಯವಷ್ಟೇ ಕಾರಣವಲ್ಲ. ಆತ್ಮವಿಶ್ವಾಸವೆಂದರೆ ಅದು!! ಯುದ್ಧೋತ್ಸಾಹದಲ್ಲಿ ಮುನ್ನುಗ್ಗುವ ನನಗೆ ಐರಾವತವನ್ನೇರಿ ಸುರಗಣದೊಂದಿಗೆ ಬರುವ ಇಂದ್ರನೂ ಗಣನೆಗಿಲ್ಲ ಎಂಬ ದೃಢವಿಶ್ವಾಸವೇ ಅಷ್ಟು ಜನರನ್ನೆದುರಿಸುವ ಶಕ್ತಿ ನೀಡಿದೆ. ನಾನು ಒಂಟಿ ಅಸಹಾಯಕ ಎಂಬ ಭಾವನೆ ಕ್ಷಣಕಾಲವೂ ಬಾರದೆ ಮುನ್ನುಗ್ಗಿದರೆ ಸಿಂಹಬಲವು ತಾನಾಗಿಯೇ ಬರುವುದು.

Sunday 24 February 2019

      ಸುಭಾಷಿತ - ೪೬
 



ಪಾತ್ರಾಪಾತ್ರವಿಶೇಷೋಽಸ್ತಿ ಧೇನುಪನ್ನಗಯೋರಿವ। ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್।।





ಅನ್ವಯಾರ್ಥ:



 ಧೇನುಪನ್ನಗಯೋಃ ಇವ(ಗೋವು ಹಾವುಗಳಂತೆ) ಪಾತ್ರಾಪಾತ್ರವಿಶೇಷಃ ಅಸ್ತಿ(ಸತ್ಪಾತ್ರರಿಗೂ ಅಪಾತ್ರರಿಗೂ ವ್ಯತ್ಯಾಸವಿದೆ)
 (ಧೇನ್ವಾ ಗೋವಿನಿಂದ)
 ತೃಣಾತ್ (ಹುಲ್ಲಿನಿಂದ)
 ದುಗ್ಧಂ (ಹಾಲು)
 ಉತ್ಪದ್ಯತೇ (ಉತ್ಪಾದಿಸಲ್ಪಡುತ್ತದೆ)
 (ಪನ್ನಗೇನ ಹಾವಿನಿಂದ)
 ದುಗ್ಧಾತ್(ಹಾಲಿನಿಂದ)
 ವಿಷಂ (ವಿಷವು)
 ಉತತ್ಪದ್ಯತೇ(ಉತ್ಪಾದಿಸಲ್ಪಡುತ್ತದೆ).




 ಭಾವಾರ್ಥ:



ದಾನವು ಪುಣ್ಯಕಾರ್ಯವೇ ಹೌದು. ಆದರೆ ಪಾತ್ರಾಪಾತ್ರವಿವೇಚನೆಯಿಲ್ಲದೆ ದಾನಮಾಡಿದರೆ ಅದು ಪಾಪಕಾರಣವೂ ಆದೀತು. ಹಸುವಿಗೆ ಹುಲ್ಲನ್ನೇ ಕೊಟ್ಟರೂ ಅದು ಅಮೃತಸಮಾನವಾದ ಹಾಲನ್ನೇ ಕೊಡುತ್ತದೆ. ವಿಷಪೂರಿತ ಹಾವಿಗೆ ಹಾಲನ್ನೇ ಕೊಟ್ಟರೂ ಅದರ ಬಾಯಲ್ಲಿ ವಿಷವೇ ತಾನೇ ಬರುವುದು? ಸಜ್ಜನರು ತಮಗೆ ಉಪಕಾರ ಮಾಡಿದವರನ್ನು ಎಂದೂ ಮರೆಯಲಾರರು ಮಾತ್ರವಲ್ಲ ಅಪಕಾರ ಮಾಡಿದವರಿಗೂ ಉಪಕಾರವನ್ನೇ ಮಾಡುವವರು. ಮರಕ್ಕೆ ಕಲ್ಲನ್ನು ಹೊಡೆದರೂ ಅದು ಕೊಡುವುದು ಹಣ್ಣನ್ನು. ಹೂವಿನ ಗಿಡವೊಂದು ತಿನ್ನುವುದು ದುರ್ವಾಸನೆಯ ಗೊಬ್ಬರವನ್ನಾದರೂ ಹೂವಿಗೆ ದುರ್ಗಂಧವಿದೆಯೇ? ದುಷ್ಟರಿಗೆ ದಾನವೋ ಸಹಾಯವೋ ನೀಡಿದರೆ ಅವರ ಅವರ ಪಾಪದಲ್ಲಿ ನಾವುಗಳೂ ಭಾಗಿಗಳಾಗುತ್ತೇವೆಯೇ ಹೊರತು ಯಾವ ಪುಣ್ಯವೂ ಇಲ್ಲ ಸುಖವೂ ಇಲ್ಲ. ದೇಹಿ ಎಂದವರಿಗೆ ನಾಸ್ತಿ ಎನ್ನಬಾರದು ನಿಜ ಆದರೆ ದೇಹಿ ಅಂದವನು ಎಂಥವನು ಎಂದು ನೋಡಬೇಡವೇ?
ಭಯೋತ್ಪಾದಕನೊಬ್ಬ  ಕೇಳಿದನೆಂದ ಆಶ್ರಯ ನೀಡಿದರೆ ಅದು ಪುಣ್ಯಕಾರ್ಯ ಹೇಗಾದೀತು?
ನೀಡುವವನು ಅದರ ಸದ್ವಿನಿಯೋಗ ಆಗುತ್ತದೆಯೇ ಎಂಬುದನ್ನು ಗಮನಿಸಬೇಕು. ಆಗಲೇ ಆ ದಾನಕ್ಕೊಂದು ಬೆಲೆ.

Friday 22 February 2019

ಸುಭಾಷಿತ  ೪೫


 ಸುಶ್ರಾಂತೋಽಪಿ ವಹೇದ್ಭಾರಂ ಶೀತೋಷ್ಣಂ ಚ ನ ಪಶ್ಯತಿ।   ಸಂತುಷ್ಟಶ್ಚರತೇ ನಿತ್ಯಂ ತ್ರೀಣಿ ಶಿಕ್ಷೇಚ್ಚ ಗರ್ದಭಾತ್॥



ಅನ್ವಯ ಅರ್ಥ:

  ಸುಶ್ರಾಂತಃ ಅಪಿ(ಸಾಕಷ್ಟು ಆಯಾಸಗೊಂಡಿದ್ದರೂ)
  ಭಾರಂ (ಭಾರವನ್ನು)
  ವಹೇತ್ (ಹೊರುವುದು)
  ಶೀತೋಷ್ಣಂ ಚ (ಚಳಿಸೆಖೆಯನ್ನೂ)
  ನ ಪಶ್ಯತಿ (ಗಮನಿಸುವುದಿಲ್ಲ)
  ನಿತ್ಯಂ (ಯಾವಾಗಲೂ)
  ಸಂತುಷ್ಟಃ ಚರತಿ)
  (ಸಂತೋಷದಿಂದ ಸುತ್ತಾಡುತ್ತದೆ)
  ತ್ರೀಣಿ(ಈ ಮೂರು ಗುಣಗಳನ್ನು)
  ಗರ್ದಭಾತ್(ಕತ್ತೆಯಿಂದ)
  ಶಿಕ್ಷೇತ್(ಕಲಿಯಬೇಕು)




ಭಾವಾರ್ಥ:


 ಏನೂ ಅರಿಯದ ಮೂರ್ಖನನ್ನು ಕತ್ತೆಗೆ ಹೋಲಿಸುತ್ತಾರೆ. ಆದರೆ ಕಲಿಯುವ ಗುಣವಿದ್ದರೆ ಕತ್ತೆಯಿಂದಲೂ ಕಲಿಯುವುದಿದೆ.  ಎಷ್ಟು ಆಯಾಸಗೊಂಡಿದ್ದರೂ ಕತ್ತೆ ಭಾರವನ್ನು ಹೊರದೆ ಇರುವುದಿಲ್ಲ. ಬಿಸಿಲು ಮಳೆ ಚಳಿ ಗಾಳಿ ಏನೇ ಇದ್ದರೂ ತನ್ನ ಕೆಲಸ ಮಾಡುತ್ತಲೇ ಇರುತ್ತದೆ. ಬೇಸರವೆಂಬುದು ಇಲ್ಲವೇ ಇಲ್ಲವೇನೋ! ಈ ಮೂರೂ ಗುಣಗಳು ಕತ್ತೆಯದೇ ಆದರೂ ಖಂಡಿತವಾಗಿಯೂ ಅನುಸರಣೀಯ.

   ಎಷ್ಟು ಆಯಾಸಗೊಂಡಿದ್ದರೂ ಒಪ್ಪಿಕೊಂಡ ಜವಾಬ್ದಾರಿಯಿಂದ ಹಿಂಜರಿಯುವಂತಿಲ್ಲ. ಎಂತಹ ಅಡೆತಡೆಗಳು ಬಂದರೂ ಅದನ್ನು ಪೂರೈಸುವ ದೃಢಚಿತ್ತವಿರಬೇಕು. ಕಷ್ಟ ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಭೇದವಿಲ್ಲದೆ ಜವಾಬ್ದಾರಿಯನ್ನು ನಿಭಾಯಿಸಬೇಕು.  ಆಗ ಯಶಸ್ಸು ನಿಶ್ಚಯ.

Wednesday 20 February 2019

ಸುಭಾಷಿತ ೪೪



 ಬಾಲಾದಪಿ ಗ್ರಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ।   ರವೇರವಿಷಯೇ ಕಿಂ ನ ಪ್ರದೀಪಸ್ಯ ಪ್ರಕಾಶನಮ್॥



    ಅನ್ವಯ ಅರ್ಥ:


(ಯದಿ)ಯುಕ್ತಂ ಉಕ್ತಂ(ಸರಿಯಾದುದನ್ನು ಹೇಳಿದರೆ) ಬಾಲಾತ್ ಅಪಿ(ಮಗುವಿನಿಂದಲೇ ಆದರೂ)
 ಮನೀಷಿಭಿಃ (ಬುದ್ಧಿವಂತರಿಂದ)
 ಗ್ರಹೀತವ್ಯಂ (ಸ್ವೀಕರಿಸಲ್ಪಡಬೇಕು)
 ರವೇಃ(ಸೂರ್ಯನ)
 ಅವಿಷಯೇ(ಅನುಪಸ್ಥಿತಿಯಲ್ಲಿ/ಅಗೋಚರದಲ್ಲಿ )   ಪ್ರದೀಪಸ್ಯ(ದೀಪದ)
 ಕಿಂ ನ ಪ್ರಕಾಶನಮ್?(ಬೆಳಕೇ ಅಲ್ಲವೇ?)


ಭಾವಾರ್ಥ:


ಸತ್ಯಕ್ಕೆ ವಯಸ್ಸು ವಿದ್ವತ್ತು ಸಂಪತ್ತು ಜಾತಿ ಅಧಿಕಾರ ಯಾವುದೂ ತಡೆಯಾಗಲಾರದು. ಸರಿಯಾದ ಮಾತನ್ನು ಯಾರು ಹೇಳಿದರೂ ಅದು ಗ್ರಾಹ್ಯವೇ. ಬಾಲಕನೇ ಆಗಲೀ ವೃದ್ಧನೇ ಪಂಡಿತನಾಗಲೀ ಪಾಮರನಾಗಲೀ ಯುಕ್ತವು ಯುಕ್ತವು. ಆಪತ್ಕಾಲದಲ್ಲಿ ಹುಲ್ಲು ಕಡ್ಡಿಯೂ ಆಸರೆಯಾಗಬಹುದು. ಬಾಲಕನ ಮಾತೆಂದು ತೆಗೆದುಹಾಕುವಂತಿಲ್ಲ. ಸದಾ ಕಾಲವೂ ಸೂರ್ಯನ ಬೆಳಕೇ ಆಗಬೇಕೆಂದರೆ ಸರಿಯೇ? ಸೂರ್ಯನ ಅನುಪಸ್ಥಿತಿಯಲ್ಲಿ ದೀಪವೂ ದಾರಿ ತೋರುತ್ತದೆ. ಯುಕ್ತಾಯುಕ್ತವಿವೇಚನೆ ಇದ್ದರೆ ಅಣುವಿನಿಂದ ಸ್ಥಾಣುವಿನ ವರೆಗೂ ಪ್ರತಿಯೊಂದೂ ಮಾರ್ಗದರ್ಶಕಗಳೇ.
    ಸುಭಾಷಿತ - ೪೩



ಮನೀಷಿಣಃ ಸಂತಿ ನ ತೇ ಹಿತೈಷಿಣಃ।
ಹಿತೈಷಿಣಃ ಸಂತಿ ನ ತೇ ಮನೀಷಿಣಃ।।
ಸುಹೃಚ್ಚ ವಿದ್ವಾನಪಿ ದುರ್ಲಭೋ ನೃಣಾಮ್।
ಯಥೌಷಧಂ ಸ್ವಾದು ಹಿತಂ ಚ ದುರ್ಲಭಮ್।।



ಅನ್ವಯಾರ್ಥ:

 ಮನೀಷಿಣಃ(ಬುದ್ಧಿವಂತರು)
 ಸಂತಿ(ಇದ್ದಾರೆ)
 (ತು ಆದರೆ)
 ತೇ (ಅವರು)
 ನ ಹಿತೈಷಿಣಃ (ಹಿತವನ್ನು ಬಯಸುವವರಲ್ಲ)   ಹಿತೈಷಿಣಃ(ಹಿತೈಷಿಗಳು)
 ಸಂತಿ(ಇದ್ದಾರೆ)
 (ಆದರೆ) ತೇ (ಅವರು)
 ನ ಮನೀಷಿಣಃ (ಬುದ್ಧಿವಂತರಲ್ಲ)
 ಯಥಾ (ಯಾವ ರೀತಿ)
 ಔಷಧಂ(ಔಷಧವು)
 ಸ್ವಾದು (ರುಚಿಕರವೂ)
 ಹಿತಂ ಚ (ಹಿತಕಾರಿಯೂ ಆದುದು) ದುರ್ಲಭಂ(ಸಿಗಲಾರದೋ)
 (ತಥಾ ಹಾಗೆಯೇ)
 ನೃಣಾಂ(ಜನರಿಗೆ)
 ಸುಹೃತ್ ಚ(ಒಳ್ಳೆಯ ಹೃದಯವಂತನೂ/ಗೆಳೆಯನೂ)
 ವಿದ್ವಾನ್ ಅಪಿ(ವಿದ್ವಾಂಸನೂ ಆದವನು) ದುರ್ಲಭಃ(ಸಿಗಲಾರನು)


   ಭಾವಾರ್ಥ:



 ತಿನ್ನಬೇಕು ಎನಿಸಿದ್ದು ಆರೋಗ್ಯಕ್ಕೆ ಹಿತವಲ್ಲ. ಹಿತವಾದ್ದು ತಿನ್ನಬೇಕು ಅನ್ನಿಸುವುದಿಲ್ಲ. ಔಷಧಿಯು ಎಂದಿಗೂ ರುಚಿಕರ ಆಗಿರದು. ಪ್ರಪಂಚದಲ್ಲಿ ಬುದ್ಧಿವಂತರು ಅನೇಕರು. ಆದರೆ ಲೋಕಹಿತಕ್ಕಾಗಿ ಬುದ್ಧಿ ಉಪಯೋಗಿಸುವವರು ಎಷ್ಟು ಮಂದಿ? ಹಣವಂತರು ಇನ್ನೂ ಒಂದಷ್ಟು ಸಂಗ್ರಹಿಸವವರೇ ಹೊರತು ಬಡವರ ಹಸಿವಿಗೆ ಸ್ಪಂದಿಸುವವರಲ್ಲ. ಬಡವನ ಹಸಿವು ಬಡವನಿಗಷ್ಟೇ ಅರಿವಾಗುವುದು. ಪಾಪ ಸಹಾಯ ಮಾಡುವ ಮನಸ್ಸು ಇದ್ದರೂ ಅವನು ಅಸಹಾಯಕ. ಎಷ್ಟೋ ಮಂದಿಗೆ ಚಿಕ್ಕಂದಿನಲ್ಲಿ ಕಷ್ಟದಲ್ಲಿ ಬೆಳೆವಾಗ ಹೊಟ್ಟೆಗಿಲ್ಲ. ಕಷ್ಟಪಟ್ಟು ದುಡಿದು ಸಾಕಷ್ಟು ಸಂಪಾದಿಸಿದಾಗ ಇದ್ದ ಬದ್ದ ಕಾಯಿಲೆಗಳು ಅಂಟಿಕೊಂಡು ಏನನ್ನೂ ತಿನ್ನುವ ಹಾಗಿಲ್ಲ. ಲೋಕವೇ ಹಾಗೇ ಎಲ್ಲಾ ವೈರುಧ್ಯಗಳ ಸಂತೆಯೇ. ಬುದ್ಧಿವಂತಿಕೆಯೂ ಇದ್ದು ಅದನ್ನು ಜಾರಿಗೊಳಿಸುವ ಸಂಪನ್ಮೂಲಗಳೂ ಇದ್ದು ಲೋಕಹಿತಕ್ಕಾಗಿ ಬಳಸುವವರು ಬಹಳ ವಿರಳ.
   ಸುಭಾಷಿತ - ೪೨


ಅಕ್ಷರಾಣಿ ಪರೀಕ್ಷ್ಯಂತಾಮಂಬರಾಡಂಬರೇಣ ಕಿಮ್।ಶಂಭುರಂಬರಹೀನೋಪಿ ಸರ್ವಜ್ಞಃ ಕಿಂ ನ ಕಥ್ಯತೇ।।
 (ಅಪ್ಪಯ್ಯ ದೀಕ್ಷಿತರು)


ಅನ್ವಯಾರ್ಥ:

 ಅಕ್ಷರಾಣಿ(ಅಕ್ಷರಗಳನ್ನು/ವಿದ್ಯೆಯನ್ನು)   ಪರೀಕ್ಷ್ಯಂತಾಮ್(ಪರೀಕ್ಷಿಸಿ ನೋಡಬೇಕು,)   ಅಂಬರಾಡಂಬರೇಣ ಕಿಮ್?(ವಸ್ತ್ರಗಳ ಆಡಂಬರದಿಂದ ಏನು ಪ್ರಯೋಜನ?)
 ಶಂಭುಃ(ಶಿವನು)
 ಅಂಬರಹೀನಃ ಅಪಿ (ಬಟ್ಟೆ ಇಲ್ಲದ ದಿಗಂಬರನಾದರೂ)   ಸರ್ವಜ್ಞಃ ಇತಿ(ಸರ್ವಜ್ಞನೆದಂದು)
 ನ ಕಥ್ಯತೇ ಕಿಮ್(ಕರೆಯಲ್ಪಡುವುದಿಲ್ಲವೇ?)


ಭಾವಾರ್ಥ:

ಆಡಂಬರದ ವೇಷಭೂಷಣ, ಪಾಂಡಿತ್ಯ ಮೆರೆಯುವ ದೊಡ್ಡ ದೊಡ್ಡ ಪದಗಳನ್ನು ಬಳಸಿ ಮಾತನಾಡುವದು ಹೀಗೆ ಆಡಂಬರ ಮಾಡುವುದರಿಂದ ಏನು ಸುಖ? ಒಳಗಿನ ಪೊಳ್ಳುತನ ಒಂದಲ್ಲಾ ಒಂದು ದಿನ ಹೊರಬಿದ್ದೇ ಬೀಳುತ್ತದೆ. ನಿಜವಾದ ಪ್ರತಿಭೆಗೆ ಯಾವುದೇ ಪ್ರಚಾರ ಬೇಕಾಗಿಲ್ಲ. ದಶದಿಕ್ಕುಗಳೇ ಬಟ್ಟೆಯಾಗಿರುವ ಶಿವನು ಸರ್ವಜ್ಞಮೂರ್ತಿಯೆನಿಸಿಲ್ಲವೇ?
       ಸುಭಾಷಿತ - ೪೧

 ಯಥಾಶಕ್ತಿ ಚಿಕೀರ್ಷಂತಿ ಯಥಾಶಕ್ತಿ ಚ ಕುರ್ವತೇ।
 ನ ಕಿಂಚಿದವಮನ್ಯಂತೇ ನರಾಃ ಪಂಡಿತಬುದ್ಧಯಃ॥
     (ವಿದುರ ನೀತಿ)


ಅನ್ವಯಾರ್ಥ:

 ಪಂಡಿತಬುದ್ಧಯಃ ನರಾಃ( ಪಾಂಡಿತ್ಯ ಉಳ್ಳ ಮನುಷ್ಯರು)
 ಯಥಾಶಕ್ತಿ(ಶಕ್ತಿಗನುಣವಾಗಿ)
 ಚಿಕೀರ್ಷಂತಿ(ಮಾಡಲು ಇಚ್ಛಿಸುತ್ತಾರೆ)
 ಚ(ಮತ್ತು)
 ಯಥಾಶಕ್ತಿ(ಶಕ್ತ್ಯನುಸಾರ)
 ಕುರ್ವತೇ(ಮಾಡುತ್ತಾರೆ)
 ಕಿಂಚಿತ್(ಸ್ವಲ್ಪವೂ)
 ನ ಅವಮನ್ಯಂತೇ(ಕೀಳಾಗಿ ತಿಳಿದುಕೊಳ್ಳುವುದಿಲ್ಲ)


ಭಾವಾರ್ಥ:

ಪಂಡಾ  ಜ್ಞಾನದಿಂದ ಬೆಳಗುವ ಬುದ್ಧಿ ಪಂಡಾ. ಪಂಡಾ ಇರುವವನು ಪಂಡಿತ. ನಿಜವಾದ ಪಂಡಿತ ತಾನೇನು ತಾನೆಷ್ಟು ಎಂಬುದನ್ನು ಅರಿತಿರುತ್ತಾನೆ. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯೋಚನೆ ಯೋಜನೆಗಳಿರುತ್ತವೆ. ಅದೇ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ. ತನಗೆ ತಿಳಿಯದ ವಿಷಯದಲ್ಲಿ ಮಾತನಾಡುವುದು ಮಾಡಲಾಗದ ಕೆಲಸದಲ್ಲಿ ತೊಡಗುವುದು ಬುದ್ಧಿವಂತರ ಲಕ್ಷಣವಲ್ಲ. ಅರಿತಲ್ಲಿ ಜಂಬವಾಗಲೀ ಅರಿಯದಿದ್ದಲ್ಲಿ ಕೀಳರಿಮೆಯಾಗಲೀ ಎಂದಿಗೂ ಸಲ್ಲದು. ಹಾಗೆಯೇ ಇತರರನ್ನು ಕೀಳಾಗಿ ಕಾಣುವುದೂ ಕೂಡಾ ಪಂಡಿತರಿಗೆ ಎಂದೂ ಶೋಭಿಸದು. ಬಸವಣ್ಣ ಹೇಳಿದಂತೆ 'ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ' ಅವಿವೇಕಗಳು ಶಕ್ತಿ ಮೀರಿದ ಕಾರ್ಯದಲ್ಲಿ ತೊಡಗಿಸಿಕೊಂಡು ಕಷ್ಟಕ್ಕೊಳಗಾಗುತ್ತಾರೆ, ನನಗೆ ಬೇಕಾಗಿರಲಿಲ್ಲವಪ್ಪಾ ಎಂದು ಮನಸ್ಸಿನಲ್ಲಿ ಕೊರಗುತ್ತಾರೆ. ಮಾಡಿದ್ದಕ್ಕಿಂತ ಹೆಚ್ಚು ಹೇಳಿಕೊಳ್ಳುತ್ತಾರೆ.
    ಸುಭಾಷಿತ - ೪೦:


ಅನಿರ್ವೇದಮಸಿದ್ಧೇಷು ಸಾಧಿತೇಷ್ವನಹಂಕೃತಿಮ್।
ಅನಾಲಸ್ಯಂ ಚ ಸಾಧ್ಯೇಷು ಕೃತ್ಯೇಷ್ವನುಗೃಹಾಣ ಮೇ॥



   ಅನ್ವಯಾರ್ಥ:


 ಅಸಿದ್ಧೇಷು(ಸಾಧಿಸಲಾಗದಿದ್ದಲ್ಲಿ)
 ಅನಿರ್ವೇದಂ(ಖೇದವಿಲ್ಲದಂತೆ)
 ಸಾಧಿತೇಷು(ಸಾಧಿಸಿದಲ್ಲಿ)
 ಅನಹಂಕೃತಿಃ(ಅಹಂಕಾರವಿಲ್ಲದಂತೆ) ಸಾಧ್ಯೇಷು(ಸಾಧಿಸಲಾಗುವ)
 ಕೃತ್ಯೇಷು(ಕೆಲಸಗಳಲ್ಲಿ)
 ಅನಾಲಸ್ಯಂ (ಆಲಸ್ಯವಿರದಂತೆಯೂ)
 ಮೇ (ನನಗೆ)
 ಅನುಗೃಹಾಣ(ಅನುಗ್ರಹ ಮಾಡು).



      ಭಾವಾರ್ಥ:


     ಪ್ರಯತ್ನ ಮಾಡಿಯೂ ನಿರೀಕ್ಷಿತ ಫಲ ದೊರೆಯದೇ ಹೋದರೆ ಅದರಲ್ಲಿ ನಮ್ಮ ತಪ್ಪೇನಿದೆ? ಅದಕ್ಕಾಗಿ ಖೇದ ಪಡುವುದು ಅನವಶ್ಯಕ. ಕರ್ತವ್ಯವನ್ನು ಮಾಡಿ ಫಲಾಫಲದ ಚಿಂತೆಯನ್ನು ಭಗವಂತನಿಗೇ ಬಿಡೋಣ. ಮುಂದೊಂದು ದಿನ ಕಾರ್ಯಸಾಧನೆ ಆಗುವುದು ಖಚಿತ.

     ಸಾಧಿಸಿದ ಕಾರ್ಯದ ಬಗ್ಗೆ ಜಂಭ ಬೇಡ. ಕರ್ಮ ಮಾತ್ರ ನಮ್ಮದು ಫಲಾಫಲ ಭಗವಂತನದು ತಾನೇ! ಕಾರ್ಯಸಾಧನೆಗೆ ಕಾರಣ ಭಗವಂತನಾಗಿರುವಾಗ ಜಂಭ ಪಡಲು ನಮ್ಮದೇನಿದೆ?

 ಸಾಧಿಸಬಹುದಾದ ಕೆಲಸಗಳಲ್ಲಿ ಆಲಸ್ಯ ಸಲ್ಲದು. ಆಲಸ್ಯವೆಂಬುದು ಮನುಷ್ಯನಿಗೆ ಶರೀರದೊಳಗೇ ಇದ್ದು ದ್ರೋಹ ಮಾಡುವ ಶತ್ರು. ಅದೃಷ್ಟದ ಲಾಭ ಆಲಸಿಗೆ ಎಂದೂ ಸಿಗದು.

    ಆದ್ದರಿಂದ ಭಗವಂತನಲ್ಲಿ ಪ್ರಾರ್ಥನೆ ಇಷ್ಟೇ: ಸಾಧಿಸಲಾಗದಿದ್ದಲ್ಲಿ ಖೇದಪಡದಂತೆ ಸಾಧಿಸಿದಾಗ ಅಹಂಕಾರ ಬರದಂತೆ ಸಾಧಿಸುವಲ್ಲಿ ಆಲಸ್ಯಂ ಬರದಂತೆ ಬುದ್ಧಿ ಕೊಡು ಪರಮಾತ್ಮಾ!!

Monday 18 February 2019

ಸುಭಾಷಿತ - ೩೯:


ಅಧೋಽಧಃ ಪಶ್ಯತಃ ಕಸ್ಯ ಮಹಿಮಾ ನೋಪಚೀಯತೇ।ಉಪರ್ಯುಪರಿ ಪಶ್ಯತಶ್ಚೈವ ಸರ್ವ ಏವ ದರಿದ್ರತಿ।।

 ಅನ್ವಯಾರ್ಥ:


 ಅಧಃ ಅಧಃ ಪಶ್ಯತಃ(ಕೆಳ ಕೆಳಕ್ಕೆ ನೋಡುವ)
 ಕಸ್ಯ (ಯಾವನ)
 ಮಹಿಮಾ(ಮಹತ್ತ್ವವು)
 ನ ಉಪಚೀಯತೇ (ವೃದ್ಧಿಯಾಗುವುದಿಲ್ಲ?)
 ಉಪರಿ ಉಪರಿ(ಮೇಲೆ ಮೇಲೆಯೇ)
 ಪಶ್ಯತಃ (ನೋಡುವವನ)
 ಸರ್ವೇ ಏವ(ಎಲ್ಲವೂ)
 ದರಿದ್ರತಿ(ದುರ್ಗತಿ ಹೊಂದುತ್ತವೆ)



ಭಾವಾರ್ಥ:

ನೆಲವನ್ನು ನೋಡುವವ ನೇರವಾಗಿ ನಡೆಯುತ್ತಾನೆ. ಆಕಾಶವನ್ನು ನೋಡುವವ ಬೀಳದಿರಲಾರ. ದಿನವಿಡೀ ದುಡಿಯುವ ಬಡವ ಇರುವ ಸಂಪಾದನೆಗೆ ತಕ್ಕಂತೆ ತೃಪ್ತಿಯಿಂದ ಬದುಕುತ್ತಾನೆ. ಸಂಪತ್ತು ಬಂದಂತೆಲ್ಲ ಚಿಂತೆ ಜೊತೆಯಲ್ಲೇ ಬರುತ್ತದೆ. ತನಗಿಂತ ಕಡಿಮೆ ಸಂಪತ್ತಿರುವರನ್ನೇ ನೋಡುತ್ತಿದ್ದರೆ ತನ್ನಲ್ಲಿರುವುದೇ ಹೆಚ್ಚು ಎನಿಸುತ್ತದೆ. ಆಗ ಅಪೇಕ್ಷೆಗಳೂ ಮಿತಿಯಲ್ಲೇ ಇರುತ್ತವೆ. ತಾನಾಗಿಯೇ ತೃಪ್ತಿ ಸಿಗುತ್ತದೆ. ಎಲ್ಲವೂ ಅಷ್ಟೇ. ನಮ್ಮ ಅಳವಿಗೆ ಬರುವುದು ಅಲ್ಪ. ಹೊರಗಿರುವುದು ಅನಂತ. ಆ ಅನಂತವನ್ನು ಬಯಸುವವನಿಗೆ ತೃಪ್ತಿ ಎಲ್ಲಿಂದ? ಅಂಥವನು ಎಷ್ಟು ಸಂಪಾಸಿದರೂ ದರಿದ್ರನೇ. ಒಂದು ಮಗುವಿಗೆ ಒಂದು ರೂಪಾಯಿ ಸಿಕ್ಕಾಗ ಎಷ್ಟು ಸಂತೋಷಪಡುತ್ತದೆ! ಅದುವೇ ದೊಡ್ಡದು ಅದಕ್ಕೆ. ದೊಡ್ಡದರ  ಆ ಸಂತೋಷ ಕೋಟಿಧನವಿದ್ದರೂ ಸಿಗದು. ಒಂದಿದ್ದರೆ ಎರಡು ಬೇಕು, ಎರಡಿದ್ದರೆ ನಾಲ್ಕು!! ಆಸೆಗಳು ಮೇಲೆ ಮೇಲೆಯೇ ಹೋಗುತ್ತಾ ಇದ್ದರೆ ಇರುವುದನ್ನು ಅನಭವಿಸುವ ಸಂತೋಷ ನಷ್ಟವಾಗಿ ಇಲ್ಲದುದರ ಬಗೆಗಿನ ಕೊರಗೇ ಉಳಿಯುತ್ತದೆ.
ಸುಭಾಷಿತ - ೩೮
ಉಪಭೋಗಕಾತರಾಣಾಂ ಪುರುಷಾಣಾಮರ್ಥಸಂಚಯಪರಾಣಾಮ್।

ಕನ್ಯಾಮಣಿರಿವ ಸದನೇ ತಿಷ್ಠತ್ಯರ್ಥಃ ಪರಸ್ಯಾರ್ಥೇ।।



ಅನ್ವಯಾರ್ಥ:


ಉಪಭೋಗಕಾತರಾಣಾಂ( ಅನುಭವಿಸಲು ಕಾತರರಾಗಿ) ಅರ್ಥಸಂಚಯಪರಾಣಾಮ್(ಸಂಪತ್ತನ್ನು ಸಂಗ್ರಹಿಸುವದರಲ್ಲೇ ನಿರತರಾದ)
 ಪುರುಷಾಣಾಂ(ಮನುಷ್ಯರ)
 ಅರ್ಥಃ(ಸಂಪತ್ತು)
 ಕನ್ಯಾಮಣಿಃ ಇವ(ವಿವಾಹಯೋಗ್ಯ ಕನ್ಯೆಯಂತೆ) ಪರಾರ್ಥೇ(ಬೇರೆಯವರಿಗಾಗಿ)
 ಸದನೇ (ಮನೆಯಲ್ಲಿ)
 ತಿಷ್ಠತಿ (ಇರುತ್ತದೆ).




 ಭಾವಾರ್ಥ:


 ವಿವಾಹಯೋಗ್ಯಳಾದ ಮಗಳು ಎಷ್ಟೇ ಪ್ರೀತಿಪಾತ್ರಳಾದರೂ ಸಕಲಗುಣಸಂಪನ್ನೆಯಾದರೂ ಯೋಗ್ಯವರನಿಗೆ ವಿವಾಹಮಾಡಿ ಕೊಡಲೇ ಬೇಕು. ಉಭಯ ಕುಲಗಳನ್ನು ಬೆಳಗಿಸಬೇಕಾದ ಕನ್ಯೆಯನ್ನು ಕೊಡಲಾರೆ ಎಂದು ಕಟ್ಟಿಟ್ಟರೆ ಆ ಕನ್ಯಾಧನಕ್ಕೆ ಏನು ಬೆಲೆ? ಸಂಪಾದಿಸಿದ ಸಂಪತ್ತೂ ಅಷ್ಟೇ. ಉಪಭೋಗಿಸಲೆಂದು ಸಂಪಾದಿಸಿ ಖರ್ಚು ಮಾಡಲು ಮನಸ್ಸು ಬಾರದೆ ಕಟ್ಟಿಟ್ಟರೆ ಅದರಿಂದ ಸುಖವೆಂದೂ ಸಿಗಲಾರದು. ಅಗತ್ಯಕ್ಕೆ ತಕ್ಕಷ್ಟು ಉಪಯೋಗಿಸಿ ದಾನವನ್ನೂ ಮಾಡಿದರೆ ಅದು ಅತಿಶ್ರೇಷ್ಠ ಗತಿ. ಮನಸ್ಸಿಲ್ಲದಿದ್ದರೆ ಸ್ವಂತಕ್ಕೆ ಭೋಗಕ್ಕಾದರೂ ಉಪಯೋಗಿಸಬೇಕು. ಏಕೆಂದರೆ ಸಂಪತ್ತಿಗೆ ಮೂರೇ ಗತಿ. ಒಂದು ದಾನ ಎರಡನೆಯದು ಭೋಗ. ಇವೆರಡೂ ಆಗದಿದ್ದಲ್ಲಿ ಅದು ನಾಶವೇ.
ಒಂದು ಚಾಟುಶ್ಲೋಕವಿದೆ : ಜಿಪುಣನಿಗೆ ಸರಿಸಾಟಿಯಾದ ದಾನಿಯೇ ಇಲ್ಲ .ಏಕೆಂದರೆ ಸಾಮಾನ್ಯವಾಗಿ ದಾನಿಗಳು ತಮಗಾಗಿಯೂ ಖರ್ಚು ಮಾಡುತ್ತಾರೆ. ಕೈಯಾರೆ ತುಂಬಾ ದಾನ ಮಾಡುತ್ತಾರೆ. ಆದರೆ ಜಿಪುಣ ಹಾಗಲ್ಲ. ಸಂಪತ್ತನ್ನು ತನಗಾಗಿ ಸ್ವಲ್ಪವೂ ವಿನಿಯೋಗ ಮಾಡುವುದಿಲ್ಲ. ಕೊನೆಗೆ ಕೈಯಲ್ಲಿ ಮುಟ್ಟದೇ ಅ ಬೇರೆಯವರಿಗೆ ಸೇರಿಸಿಬಿಡುತ್ತಾನೆ!!!
ಸುಭಾಷಿತ - ೩೭



ಅಕೃತ್ವಾ ಪರಸಂತಾಪಮ್ ಅಗತ್ವಾ ಖಲನಮ್ರತಾಮ್।
ಅನುಸೃತ್ಯ ಸತಾಂ ಮಾರ್ಗಂ ಯತ್ಸ್ವಲ್ಪಮಪಿ ತದ್ಬಹು।।



ಅನ್ವಯಾರ್ಥ:


 ಪರಸಂತಾಪಂ ಅಕೃತ್ವಾ(ಬೇರೆಯವರಿಗೆ ಸಂತಾಪವನ್ನುಂಟುಮಾಡದೆ)
 ಖಲನಮ್ರತಾಮ್ ಅಗತ್ವಾ(ದುಷ್ಟಜನರೆದುರು ತಲೆಬಾಗದೆ) ಸತಾಂ ಮಾರ್ಗಂ ಅನುಸೃತ್ಯ (ಸಜ್ಜನರ ದಾರಿಯನ್ನು ಅನುಸರಿಸಿ)
 ಯತ್ ಸ್ವಲ್ಪಂ ಅಪಿ (ಸ್ವಲ್ಪವೇ ಆದರೂ ಏನು ಸಂಪಾದಿಸುತ್ತೇವೆಯೋ)
 ತತ್ (ಅದು) ಬಹು (ಅಗಾಧವಾದುದು)



ಭಾವಾರ್ಥ:


 ಎಷ್ಟು ಸಂಪಾದಿಸಿದೆ ಎಂಬುದಕ್ಕಿಂತ ಹೇಗೆ ಸಂಪಾದಿಸಿದೆ ಎಂಬುದು ಮುಖ್ಯ. ಇತರರಿಗೆ ಅನ್ಯಾಯ ಮಾಡಿ, ದುಷ್ಟರೆದುರು ತಲೆಬಾಗಿ ಓಲೈಸಿ ಅವರೊಂದಿಗೆ ಸೇರಿ ಹೇರಳವಾಗಿ ಸಂಪಾದಿಸುವುದಕ್ಕಿಂತ ಸಜ್ಜನರ ಮಾರ್ಗವನ್ನೇ ಅನುಸರಿಸಿ ದುಡಿದು ಸ್ವಲ್ಪವೇ ಸಂಪಾದಿಸಿದರೂ ಅದು ಉತ್ಕೃಷ್ಟ ಮತ್ತು ಅಗಾಧವಾದ ಸಂಪಾದನೆ. ಸರ್ವಜ್ಞ ಹೇಳುವಂತೆ ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು ಭಂಗಬಟ್ಟುಂಬ ಬಿಸಿಯನ್ನಕಿಂತಲು ತಂಗುಳವೆ ಲೇಸು ಸರ್ವಜ್ಞ.
ಸುಭಾಷಿತ ೩೬




 ಸಂತೋಷಾಮೃತತೃಪ್ತಾನಾಂ ಯತ್ಸುಖಂ ಶಾಂತಿರೇವ ಚ।   ಕುತಸ್ತದ್ಧನಲುಬ್ಧಾನಾಮಿತಶ್ಚೇತಶ್ಚ ಧಾವತಾಮ್॥



     ಅನ್ವಯ ಅರ್ಥ:



  ಸಂತೋಷಾಮೃತತೃಪ್ತಾನಾಂ (ಸಂತೋಷವೆಂಬ ಅಮೃತದಿಂದ  ತೃಪ್ತರಾದವರಿಗೆ)
 ಯತ್ ಸುಖಂ(ಯಾವ ಸುಖ)
 ಚ (ಮತ್ತು)
  ಶಾಂತಿಃ (ಶಾಂತಿಯು)
 (ಅಸ್ತಿ ಇರುತ್ತದೋ)
 ತತ್ (ಅದು)
  ಇತಃ ಚ ಇತಃ ಚ(ಅತ್ತಿತ್ತ)
 ಧಾವತಾಂ (ಓಡುತ್ತಿರುವ)
 ಧನಲುಬ್ಧಾನಾಂ (ಧನದಾಹಿಗಳಿಗೆ)
 ಕುತಃ(ಎಲ್ಲಿಂದ?)



ಭಾವಾರ್ಥ:

 ತೃಪ್ತಿ ಸಂತೋಷಕಾರಕ. ಆಸೆ ದುಃಖಮೂಲ. ತೃಪ್ತಿ ಇದ್ದಲ್ಲಿ ಸಂತೋಷವಿದೆ ಸುಖಶಾಂತಿನೆಮ್ಮದಿಯಿದೆ. ಇರುವುದು ಅಲ್ಪ ಇಲ್ಲದಿರುವುದು ಅನಂತ. ಒಂದು ಆಸೆ ಪೂರೈಸಿದಾಗ ಇನ್ನೊಂದು ಹುಟ್ಟಿಕೊಳ್ಳುತ್ತದೆ. ಅದೆಲ್ಲವೂ ಬೇಕು ಎಂದರೆ ಅದು ಅಸಾಧ್ಯ.

    ಇಲ್ಲದಿರುವುದರ ಬೆಂಬತ್ತಿ ಹೋದರೆ ಇರುವುದನ್ನು ಅನುಭವಿಸುವ ಯೋಗ ತಪ್ಪಿ ಹೋಗುತ್ತದೆ. ಹೊಸದು ಸಿಗಲಿಲ್ಲ ಇದ್ದದ್ದು ಉಳಿಯಲಿಲ್ಲ ಎಂಬ ಪರಿಸ್ಥಿತಿಯಲ್ಲಿ ಸುಖವೆಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಇದ್ದುದರಲ್ಲಿ ತೃಪ್ತಿಯಿಯಿಂದ ಸುಖಪಡುವವನಿಗೆ ಇಲ್ಲದುದರ ಚಿಂತೆಯಿಲ್ಲ. ಸುಖದ ಕಲ್ಪನೆಯಲ್ಲೇ ದುಃಖ ಅನುಭವಿಸುವ ಧನದಾಹಿಗೆ ಆ ಸುಖ ಎಲ್ಲಿಂದ ಬರಬೇಕು?
ಸುಭಾಷಿತ - ೩೫



ಪ್ರಿಯೋ ಭವತಿ ದಾನೇನ ಪ್ರಿಯವಾದೇನ ಚಾಪರಃ।ಮಂತ್ರತಂತ್ರಬಲೇನಾನ್ಯೋ ಯಃ ಪ್ರಿಯಃ ಪ್ರಿಯ ಏವ ಸಃ।।


ಪದಚ್ಛೇದ:

 ಪ್ರಿಯಃ ಭವತಿ ದಾನೇನ ಪ್ರಿಯವಾದೇನ ಚ ಅಪರಃ।   ಮಂತ್ರತಂತ್ರಬಲೇನ ಅನ್ಯಃ ಯಃ ಪ್ರಿಯಃ ಪ್ರಿಯಃ ಏವ ಸಃ॥


ಅನ್ವಯಾರ್ಥ:

 ದಾನೇನ(ಕೊಡುವುದರಿಂದ)
 ಪ್ರಿಯಃ ಭವತಿ(ಪ್ರಿಯನಾಗುತ್ತಾನೆ)
 ಅಪರಃ(ಮತ್ತೊಬ್ಬ)
 ಪ್ರಿಯವಾದೇನ(ನಲ್ಮಾತುಗಳನ್ನು ಆಡುವುದರಿಂದ)
 (ಪ್ರಿಯಃ ಭವತಿ - ಪ್ರಿಯನಾಗುತ್ತಾನೆ) ಮಂತ್ರತಂತ್ರಬಲೇನ(ಮಂತ್ರ ಉಪಾಯಾದಿಗಳ ಬಲದಿಂದ) ಅನ್ಯಃ(ಬೇರೊಬ್ಬ)
 (ಪ್ರಿಯಃ ಭವತಿ - ಪ್ರಿಯನಾಗುತ್ತಾನೆ)
 ಯಃ(ಯಾವನು)
 ಪ್ರಿಯಃ(ಪ್ರಿಯನೋ)
 ಸಃ (ಅವನು)
 ಪ್ರಿಯಃ ಏವ (ಪ್ರಿಯನೇ).



 ಭಾವಾರ್ಥ:


 ನೈಜಪ್ರೀತಿ ಎನ್ನುವುದು ಕೊಡು ಕೊಳ್ಳುವ ವಸ್ತು ಅಲ್ಲ. ಅದು ಅಂತರಾಳದ ಭಾವ. ಅದಕ್ಕೆ ಕಾರಣ ಬೇಕಿಲ್ಲ. ಕಾರ್ಯಕಾರಣದಿಂದ ಉಂಟಾಗುವ ಶತ್ರುಮಿತ್ರಉದಾಸೀನಭಾವಗಳು ಸ್ಥಾಯೀ ಅಲ್ಲ. ಕಾರಣ ನಿವಾರಣೆ ಆದಾಗ ಆ ಭಾವವೂ ಇಲ್ಲವಾಗುತ್ತದೆ. ಏನನ್ನೋ ಕೊಡುವುದರಿಂದ ಕೆಲವರು ಪ್ರಿಯರಾಗಬಹುದು. ಪ್ರೀತಿಯ ಮಾತಿನಿಂದ ಕೆಲವರು ಪ್ರೀತಿ ಗಳಿಸಿಯಾರು. ವಶೀಕರಣಾದಿ ಮಂತ್ರತಂತ್ರಗಳಿಂದಲೂ ಕೆಲವೊಮ್ಮೆ ಪ್ರೀತಿ ಗಳಿಸಬಹುದು. ಆದರೆ ಅವು ನಿರಂತರವಾಗಿ ಉಳಿಯಬೇಕಾದರೆ ನಿರಂತರವಾಗಿ ಕೊಡುತ್ತಾ ಪ್ರಿಯವಾದ ಮಾತು ಆಡುತ್ತಾರೆ ಅಥವಾ ವಶೀಕರಣ ಮಾಡುತ್ತಾ ಇರಬೇಕಾಗುತ್ತದೆ. ಆದರೆ ಕಂದನಿಗೆ ಅಮ್ಮನಲ್ಲಿ ಅಮ್ಮನಿಗೆ ಕಂದನಲ್ಲಿ ಉದಿಸಿದ ಪ್ರೀತಿ ಅದು ನಿಷ್ಕಾರಣ ನಿಷ್ಕಲಂಕ. ಅಮ್ಮ ಏನೋ ಕೊಡುತ್ತಾಳೆಂಬ ಕಾರಣಕ್ಕೆ ಬರುವ ಪ್ರೀತಿಯಲ್ಲ ಅದು. ಹೊಡೆದರೂ ಬೈದರೂ ಅದು ಅಂಟಿಕೊಳ್ಳುವುದು ಅಮ್ಮನನ್ನೇ. ಆ ರೀತಿಯ ಹೃದಯದ ಅಂತರಾಳದ ಪ್ರೀತಿಯ ನಿಜವಾದ ಪ್ರೀತಿ.
ಸುಭಾಷಿತ - ೩೪


ಕ್ಷೋಣೀಕೋಣಶತಾಂಶಪಾಲನಕಲಾದುರ್ವಾರಗರ್ವಾನಲ- ಕ್ಷುಭ್ಯತ್ಕ್ಷುದ್ರನರೇಂದ್ರಚಾರುರಚನಾಧನ್ನ್ಯಾನ್ನಮನ್ಯಾಮಹೇ।ದೇವಂಸೇವಿತುಮೇವ ನಿಶ್ಚಿನುಮಹೇ ಯೋಽಸೌ ದಯಾಲುಃ ಪರಾ।
ಧಾನಾಮುಷ್ಟಿಮುಚೇಕುಚೇಲಮುನಯೇ ದತ್ತೇ ಸ್ಮ ವಿತ್ತೇಶತಾಮ್।।
 (ವೈರಾಗ್ಯ ಪಂಚಕ )


ಅನ್ವಯಾರ್ಥ:

 ಕ್ಷೋಣೀಕೋಣ(ಭೂಮಿಯ ಒಂದು ಮೂಲೆಯ)
ಶತಾಂಶ(ನೂರಕ್ಕೊಂದುಭಾಗದ)
ಪಾಲನಕಲಾ(ಪಾಲಿಸುವ ಕಲೆಯಿಂದಲೇ)
ದುರ್ವಾರಗರ್ವಾನಲಕ್ಷುಭ್ಯತ್(ತಡೆಯಲಾರದ ಗರ್ವವೆಂಬ ಬೆಂಕಿಯಿಂದ ಕುದಿಯುತ್ತಿರುವ)
ಕ್ಷುದ್ರ ನರೇಂದ್ರ(ಕ್ಷುದ್ರರಾದ ರಾಜರ ಕುರಿತು)
ಚಾರುರಚನಾಧನ್ಯಾನ್(ಇತಿ)(ಸುಂದರಕೃತಿಗಳನ್ನು ರಚಿಸಿ ಧನ್ಯರಾದೆವು ಎಂದು)
 ನ ಮನ್ಯಾಮಹೇ(ತಿಳಿಯುವುದಿಲ್ಲ).
 ಯಃ(ಯಾರು)
ಧಾನಾಮುಷ್ಟಿಮುಚೇ(ಮುಷ್ಠಿಯಷ್ಟು ಧಾನ್ಯವನ್ನು ಕೊಟ್ಟ) ಕುಚೇಲಮುನಯೇ (ಸುದಾಮಾ ಮುನಿಗೆ)
 ವಿತ್ತೇಶತಾಂ ದತ್ತೇ(ಸಂಪತ್ತಿನ ಒಡತನವನ್ನು ನೀಡಿದ) ಪರಾ(ಪರಮಶ್ರೇಷ್ಠನಾದ)
 ದಯಾಲುಃ ಅಸೌ (ಅಸ್ತಿ)
(ಆ ದಯಾಳುವಿದ್ದಾನೋ)
 ತಂ ದೇವಂ (ಆ ದೇವನನ್ನು)
ಸೇವಿತುಂ ಏವ(ಸೇವೆಮಾಡಲು ಮಾತ್ರ ) ನಿಶ್ಚಿನುಮಹೇ(ನಿರ್ಧಾರ ಮಾಡುತ್ತೇವೆ)



 ಭಾವಾರ್ಥ:


 ಅನಂತ ವಿಶ್ವ. ಅದರೊಳಗೆ ಅಸಂಖ್ಯ ಆಕಾಶಗಂಗೆಗಳು. ಒಂದೊಂದು ಆಕಾಶಗಂಗೆಯಲ್ಲೂ ಲೆಕ್ಕವೇ ಇಲ್ಲದಷ್ಟು ಸೂರ್ಯರು. ಅವರಲ್ಲೊಬ್ಬ ನಮಗೆಲ್ಲ ಗೊತ್ತಿರುವ ಸೂರ್ಯ. ಅವನ ಸುತ್ತ  ಭೂಮಿಗಿಂತ ಎಷ್ಟೋ ದೊಡ್ಡದಾದ ಚಿಕ್ಕದಾದ ಗ್ರಹಗಳು. ಅವುಗಳಲ್ಲೊಂದು ಭೂಮಿ.  ಭೂಮಿಯ ಮೇಲೆ ಒಂದು ಸಣ್ಣ ಭಾಗಕ್ಕೆ ಅರಸರಾಗಿ ಗರ್ವದಿಂದ ಬೀಗುವ ಅವರನ್ನು ಕುರಿತು ಕೃತಿಗಳನ್ನು ರಚಿಸಿದರೆ ಅವರು ಮಹಾಕವಿ ಎಂಬ ಬಿರುದನ್ನೋ ಒಂದಷ್ಟು ಧನವನ್ನೋ ಸಂಪರ್ಕಿಸಬಹುದು. ಅಷ್ಟರಿಂದಲೇ ಧನ್ಯರಾದೆವು ಎಂದುಕೊಳ್ಳುವವರು ಮಹಾತ್ಮರಲ್ಲ ಮೂರ್ಖರು. ಭಜಿಸಬೇಕಾದ್ದು ಕೀರ್ತಿಸಬೇಕಾದ್ದು ಈ ನಾಯಕರನ್ನಲ್ಲ. ವಿಶ್ವನಾಯಕನಾದ ಭಗವಂತನನ್ನು.
  ಹಿಂದಿಯಲ್ಲೊಂದು ಕಥೆಯಿದೆ.
 ಬಡವರಾದ ಬುದ್ಧಿ ಸುಬುದ್ದಿ ಎಂಬ ವಿದ್ವಾಂಸರಿಬ್ಬರು ಸ್ನೇಹಿತರು. ಬುದ್ಧಿ ಹೇಳಿದ: ರಾಜನಾದ ಗೋಪಾಲನಲ್ಲಿಗೆ ಹೋದರೆ ನಮ್ಮ ಬಡತನ ನೀಗೀತು.
ಸುಬುದ್ಧಿ ಹೇಳಿದ: ನೀಡುವುದು ಬಿಡುವುದು ಭಗವಂತನಿಚ್ಛೆ. ಬುದ್ಧಿ ಹೇಳಿದ: ದೇಗಾ ತೋ ಗೋಪಾಲ್ ಕ್ಯಾ ಕರೇಗಾ ಕಪಾಲ್? ಗೋಪಾಲ ರಾಜ ಕೊಟ್ಟರೆ ಭಗವಂತ ಏನು ಮಾಡುತ್ತಾನೆ? ಕೊನೆಗೆ ಇಬ್ಬರೂ ರಾಜನ ಬಳಿ ಹೋಗಿ ತಮ್ಮ ತಮ್ಮ ವಾದ ಮಂಡಿಸಿದರು. ಇಬ್ಬರ ವಾದವನ್ನೂ ಕೇಳಿದ ರಾಜ. ಬುದ್ಧಿಗೆ ಒಂದು ಕುಂಬಳಕಾಯಿಯನ್ನೂ ಸುಬುದ್ಧಿಗೆ ಒಂದು ಸೇರು ಅಕ್ಕಿ ಸ್ವಲ್ಪ ಹಣವನ್ನೂ ಕೊಟ್ಟು ಕಳುಹಿಸಿದ. ಬರುವಾಗ ಬೇಸರಗೊಂಡ ಬುದ್ಧಿ ಆ ಕುಂಬಳಕಾಯಿಯನ್ನು ಸುಬುದ್ಧಿಗೆ ಕೊಟ್ಟು ಅವನ ಅಕ್ಕಿಯನ್ನು ತಾನು ತೆಗೆದುಕೊಂಡ. ಮನೆಯಲ್ಲಿ ಕುಂಬಳಕಾಯಿಯನ್ನು ಕೊರೆಯುವಾಗ ಸುಬುದ್ಧಿಗೆ ಅದರೊಳಗೆ ಗೋಪಾಲ ರಾಜ ಇಟ್ಟಿದ್ದ ಚಿನ್ನ ಸಿಕ್ಕಿತು. ದೇಗಾ ತೋ ಕಪಾಲ್ ಕ್ಯಾ ಕರೇಗಾ ಗೋಪಾಲ್!!!!
  ಮಾನವ ತಂತ್ರಜ್ಞಾನದಿಂದ ಏನೇನೋ ಏನೇನೋ ಸಾಧಿಸಿದರೂ ದೈವಸಂಕಲ್ಪದ ಮುಂದೆ ಅದು ಏನೇನೂ ಏನೇನೂ ಅಲ್ಲ. ಸಾಧಿಸಿದೆ ಎಂಬ ಆ ಗರ್ವ ಸೂರ್ಯನ ಮುಂದೆ ಮಿಂಚು ಹುಳ ಬೀಗಿದಂತೆ. ಸುಖಾ ಸುಮ್ಮನೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಅಷ್ಟೇ. ಆದುದರಿಂದಲೇ ವೇದಾಂತದೇಶಿಕರು ಹೇಳುತ್ತಾರೆ
 ದೇವಂ ಸೇವಿತುಮೇವ ನಿಶ್ಚಿನುಮಹೇ
 ಮುಷ್ಠಿ ಧಾನ್ಯಕ್ಕೆ ಕುಚೇಲನಿಗೆ ಸಂಪತ್ತಿನ ಒಡೆತನವನ್ನೇ ಕೊಟ್ಟ ಆ ಪರಮಾತ್ಮನನ್ನೇ ಸೇವೆಮಾಡುತ್ತೇವೆ ಖಂಡಿತವಾಗಿಯೂ ಅನ್ಯರನ್ನಲ್ಲ. ಹಾಗೆಯೇ ನಮ್ಮ ನಿರ್ಧಾರ.

Sunday 17 February 2019

ಸುಭಾಷಿತ ೩೩




ಶಿಲಂ ಕಿಮಲಂ ನ ಭವೇದನಲಮೌದರಂ ಬಾಧಿತುಮ್।
ಪಯಃ ಪ್ರಸೃತಿಪೂರಕಂ ಕಿಮು ನ ಧಾರಕಂ ಸಾರಸಮ್।ಅಯತ್ನಮಲಮಲ್ಲಕಂ ಪಥಿ ಪಟಚ್ಚರಂ ಕಚ್ಚರಂ।
ಭಜಂತಿ ವಿಬುಧಾ ಮುಧಾ ಹ್ಯಹಹ ಕುಕ್ಷಿತಃ ಕುಕ್ಷಿತಾಃ।।
(ವೈರಾಗ್ಯ ಪಂಚಕ)


ಅನ್ವಯಾರ್ಥ:

 ಔದರಂ ಅನಲಂ(ಜಠರಾಗ್ನಿಯನ್ನು)
 ಬಾಧಿತುಂ (ತಡೆಯಲು)
 ಶಿಲಂ (ಹೊಲದಲ್ಲಿ ಬಿದ್ದಿರುವ ಧಾನ್ಯಗಳು)
 ಕಿಂ ನ ಅಲಮ್)(ಸಾಲದೇನು?) ಪ್ರಸೃತಿಪೂರಕಂ(ಬೊಗಸೆಯಲ್ಲಿ ಹಿಡಿಸುವ)
 ಸಾರಸಂ ಪಯಃ (ಸರೋವರದ ನೀರು)
 ಕಿಮು ನ ಧಾರಕಮ್(ಜೀವಧಾರಣೆ ಮಾಡದೇನು?) ಪಥಿ(ದಾರಿಯಲ್ಲಿ)
 ಅಯತ್ನಂ(ಪ್ರಯತ್ನವಿಲ್ಲದೆ ಸಿಗುವ)
 ಕಚ್ಚರಂ ಪಟಚ್ಚರಂ(ಚಿಂದಿ ಬಟ್ಟೆಯು)
 ಮಲಮಲ್ಲಕಂ(ಮಾನ ಮುಚ್ಚಲು ಕೌಪೀನ)
 (ನ ಭವೇತ್ ಕಿಮ್? ಆಗದೇನು?)
 ಅಹಹ(ಅಯ್ಯೋ)
 ಕುಕ್ಷಿತಃ (ಕಠಿನವಾಗಿ ಬಾಧಿಸಲ್ಪಟ್ಟ)
 ವಿಬುಧಾಃ(ಪಂಡಿತರು)
 ಮುಧಾ(ವ್ಯರ್ಥವಾಗಿ)
 ಕುಕ್ಷಿತಃ(ಕೆಟ್ಟ ರಾಜರನ್ನು)
 ಭಜಂತಿ(ಸೇವೆ ಮಾಡುತ್ತಾರೆ).



ಭಾವಾರ್ಥ:


  ಹೊಟ್ಟೆಯ ಹಸಿವನ್ನು ಹಿಂಗಿಸಲು ಎಷ್ಟು ತಾನೇ ಬೇಕು. ಕೊಯ್ಲಿನ ಬಳಿಕವೂ ಗದ್ದೆಯಲ್ಲಿ ಬಿದ್ದಿರುವ ಧಾನ್ಯ ಸಾಕು ಉದರಂಭರಣಕ್ಕೆ! ಪೃಥ್ವೀಭೂತಾಂಶವಾದ ಶರೀರದಲ್ಲಿ ಪ್ರಾಣಧಾರಣೆಗೆ ಧಾರಣೆ ನೀರು ಬೇಕೇ ಬೇಕು ನಿಜ. ಸರೋವರದಲ್ಲಿ ಎಷ್ಟು ನೀರಿದ್ದರೂ ಪ್ರಾಣಧಾರಣೆಗೆ ಬೇಕಾಗಿರುವುದು ಬೊಗಸೆನೀರು ಮಾತ್ರ. ದಾರಿಸಾಗುವಾಗ ಸಿಗುವ ಚಿಂದಿ ಬಟ್ಟೆ ಸಾಕು ಮಾನ ಮುಚ್ಚುವ ಕೌಪೀನಕ್ಕೆ. ತೃಪ್ತಿ ಇದ್ದರೆ ಅದೇ ನಿಜವಾದ ಸುಖ. ಇರುವಷ್ಟು ಸಾಕು ಎನಿಸಿದರೆ ಅದು ತೃಪ್ತಿ. ಬೇಕು ಎಂಬುದಕ್ಕೆ ಮಿತಿಯಿಲ್ಲ. ಒಂದಿದ್ದರೆ ಇನ್ನೊಂದು ಬೇಕು, ಇನ್ನೊಂದಿದ್ದರೆ ಮತ್ತೊಂದು ಬೇಕು. ಬೇಕುಗಳ ಪಟ್ಟಿಗೆ ಕೊನೆಯಿಲ್ಲ. ಜೀವಾಧಾರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಸ್ವೀಕರಿಸಿ ಹೆಚ್ಚಿನದು ಬೇಡ ಎನ್ನುವುದೇ ಅಪರಿಗ್ರಹ. ಅದರಿಂದಲೇ ತೃಪ್ತಿ. ಯೋಗಿಯೋ ವಿರಾಗಿಯೋ ಆಗುವುದು ಲೌಕಿಕರೆಲ್ಲರಿಗೆ ಅಸಾಧ್ಯ. ಆದರೂ ಒಂದು ಮಟ್ಟದಲ್ಲಿ ಬೇಕುಗಳಿಗೆ ಕಡಿವಾಣ ಹಾಕಲೇ ಬೇಕು. ಅತಿಯಾದ ಸಂಪಾದನೆ ಇನ್ನೊಬ್ಬನ ಸೊತ್ತನ್ನು ಅಪಹರಿಸಿದಂತೆಯೇ. ಇದನ್ನೆಲ್ಲಾ ಅರಿತಿದ್ದೂ ಹೊಟ್ಟೆಪಾಡಿಗಾಗಿ ಪಂಡಿತರು ರಾಜರ, ಶ್ರೀಮಂತರ ಸೇವೆಯನ್ನು ಮಾಡುತ್ತಾರಲ್ಲ ಅಯ್ಯೋ ಎನಿಸುತ್ತದೆ.

Friday 15 February 2019

ಸುಭಾಷಿತ - ೩೨

  ಅಕಾಮಸ್ಯ ಕ್ರಿಯಾ ಕಾಚಿದ್ದೃಶ್ಯತೇ ನೇಹ ಕರ್ಹಿಚಿತ್।
  ಯದ್ಯದ್ಧಿ ಕುರುತೇ ಜಂತುಸ್ತತ್ತತ್ಕಾಮಸ್ಯ ಚೇಷ್ಟಿತಮ್।।


 ಅನ್ವಯ ಅರ್ಥ:


 ಅಕಾಮಸ್ಯ(ಬಯಕೆಗಳಿಲ್ಲದವನ)
 ಕಾಚಿತ್ ಕ್ರಿಯಾ(ಯಾವುದೇ ಕಾರ್ಯ)
 ಇಹ(ಇಲ್ಲಿ)
 ಕರ್ಹಿಚಿತ್(ಎಂದಿಗೂ)

 ನ ದೃಶ್ಯತೇ(ಕಾಣಿಸುವುದಿಲ್ಲ)
 ಜಂತುಃ (ಜೀವಿಯು)
 ಯತ್ ಯತ್ ಹಿ ಕುರುತೇ(ಏನೇನೆಲ್ಲ ಮಾಡುತ್ತದೋ)
 ತತ್ ತತ್(ಅದೆಲ್ಲವೂ)
 ಕಾಮಸ್ಯ (ಬಯಕೆಯ)
 ಚೇಷ್ಟಿತಮ್(ಚೇಷ್ಟೆಗಳೇ ಆಗಿವೆ)




ಭಾವಾರ್ಥ:

ಕಾಮ ಎಂದರೆ ಬಯಕೆ. ಬಯಕೆಯಿಲ್ಲದ ಯಾವುದೇ ಒಂದು ಕಾರ್ಯವನ್ನೂ ಯಾವ ಜಂತುವೂ ಮಾಡುವುದಿಲ್ಲ. ಹುಟ್ದಿದ ಕೂಡಲೇ ಹಸಿವನ್ನು ಹಿಂಗಿಸಿಕೊಳ್ಳಲು ಅಳುವಲ್ಲಿಂದಾರಂಭಿಸಿ ಸಾಯುತ್ತಿರುವಾಗ ಮೋಕ್ಷಕ್ಕಾಗಿ ಭಗವಂತನನ್ನು ನೆನೆಯುವ ವರೆಗೆ ಎಲ್ಲಾ ಕಾರ್ಯಗಳಿಗೂ ಕಾರಣ ಬಯಕೆಯೇ. ನಿವೃತ್ತಿಮಾರ್ಗಿಗಳಾದ ಶುಕ, ಜಡಭರತರಂತಹ ಬ್ರಹ್ಮಜ್ಞಾನಿಗಳನ್ನು ಹೊರತುಪಡಿಸಿ ಎಲ್ಲಾ ಜೀವಿಗಳೂ ಬಯಕೆಯುಳ್ಳವರೇ. ಸಾಧನೆಗೆ ಬಯಕೆ ಮತ್ತು ಸಂಕಲ್ಪ ಬೇಕೇ ಬೇಕು. ಇಲ್ಲದಿದ್ದಲ್ಲಿ ಜಡತ್ವವು ತಾನೇ ತಾನಾಗಿ ಮೆರೆಯುವುದು. ಪ್ರವೃತ್ತಿ ಮಾರ್ಗದ ಕಾಮನೆ ಬಂಧನಕ್ಕಾಗಿ ಕಾರಣ. ಸ್ವಾರ್ಥರೂಪದ ಲೌಕಿಕ ಆಸಕ್ತಿಯನ್ನು ಬದಿಗೊತ್ತಿ ಪರಾರ್ಥವಾದ ಲೋಕಹಿತಕಾರಕವಾದ ನಿವೃತ್ತಿಮಾರ್ಗದ ಕಾರ್ಯದಲ್ಲಿ ತೊಡಗಿದಾಗ ಆ ಕಾಮನೆ ಸಾಧುವೆನಿಸುತ್ತದೆ. ಸಾಧುವಾದ ಬಯಕೆ ಮತ್ತು ಸತ್ಸಂಕಲ್ಪದಿಂದ ಲೋಕಕ್ಕೆ ಹಿತ. ರಾವಣನಂತೆ ಸಾಧುವಲ್ಲದ ಬಯಕೆ ಹೊಂದಿ ಅದರ ಸಾಧನೆಗಾಗಿ ದುರ್ಮಾರ್ಗವನ್ನು ಹಿಡಿದಾಗ ತನಗೂ ಹಾನಿ ಲೋಕಕ್ಕೂ ಹಾನಿ. ಕಾಮ ಎಂದೂ ಅಹಿತವಲ್ಲ. ಹಿಡಿತವಲ್ಲದ ಬಯಕೆ ಮಾತ್ರ ಅರಿಷಡ್ವರ್ಗಗಳಲ್ಲೊಂದಾದ ಕಾಮ.
ಸುಭಾಷಿತ - ೩೧


ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ।
ಅಭಿರೂಪ್ಯಾಚ್ಚ ಮೂರ್ತೀನಾಂ ದೇವಃ ಸಾನ್ನಿಧ್ಯಮೃಚ್ಛತಿ।।


ಅನ್ವಯ ಅರ್ಥ:

 ಅರ್ಚಕಸ್ಯ(ಪೂಜಿಸುವವನ)
 ಪ್ರಭಾವೇನ(ಪ್ರಭಾವದಿಂದ)
 ಶಿಲಾ(ಶಿಲೆಯು)
 ಶಂಕರಃ ಭವತಿ(ದೇವರಾಗುತ್ತದೆ)
 ಮೂರ್ತೀನಾಂ (ಮೂರ್ತಿಗಳ)(ಲ್ಲಿ) ಅಭಿರೂಪ್ಯಾತ್(ರೂಪದರ್ಶನದಿಂದ)
 (ತತ್ರ/ಅಲ್ಲಿ)
 ದೇವಃ(ದೇವರು)
 ಸಾನ್ನಿಧ್ಯಂ(ಸಾನ್ನಿಧ್ಯವನ್ನು)
 ಋಚ್ಛತಿ(ಹೊಂದುತ್ತಾನೆ)


ಭಾವಾರ್ಥ:

 ಅರ್ಚಿಸುವವನ ಪ್ರಭಾವದಿಂದ ಕಲ್ಲೂ ಕೂಡಾ ದೇವತ್ವವನ್ನು ಹೊಂದುತ್ತದೆ. ಆ ಕಲ್ಲಿನಲ್ಲಿ, ಕಲ್ಲಿನ ಮೂರ್ತಿಯಲ್ಲಿ ದೇವರನ್ನು ಭಾವಿಸಿದಾಗ ಭಗವಂತನ ಅಲ್ಲಿ ಸಾನ್ನಿಧ್ಯವನ್ನು ಹೊಂದುತ್ತಾನೆ. ಅದು ಕಲ್ಲು ಎಂಬ ಭಾವ ಮನಸ್ಸಿನಲ್ಲಿದ್ದರೆ ಕೇವಲ ಕಲ್ಲಾಗಿಯೇ ಉಳಿದೀತು.
 ಅರಣಿಯಲ್ಲಿ ಬೆಂಕಿ ಇರುವುದು ಮೇಲ್ನೋಟಕ್ಕೆ ಕಾಣಿಸದು. ಅರಿತವನಷ್ಟೇ ಅದನ್ನು ಕಾಣಬಲ್ಲ, ಅದರಿಂದ ಬೆಂಕಿಯನ್ನು ಪಡೆಯಬಲ್ಲ. ಉಳಿದವರಿಗೆ ಅದು ಕೇವಲ ಮರದ ಕೊರಡು. ಅದೇ ರೀತಿ ಭಗವಂತನ ರೂಪ ಮೊದಲು ಮನದಲ್ಲಿ ಉದಿಸಬೇಕು. ಆ ರೂಪವನ್ನು ಆ ಮೂರ್ತಿಯಲ್ಲಿ ಕಾಣಬೇಕು,ಅಲ್ಲಿ ಸ್ಥಾಪಿಸಬೇಕು. ಆಗ ಭಗವಂತನ ಸಾನ್ನಿಧ್ಯ ಅಲ್ಲಿ ಆಗುವುದು. ತನ್ನಲ್ಲೇ, ತನ್ನ ಮನಸ್ಸಿನಲ್ಲೇ ಇಲ್ಲದಿರುವುದನ್ನು ಅಲ್ಲಿ ಕಾಣಲು ಹೇಗೆ ಸಾಧ್ಯ? ಆದ್ದರಿಂದ ಅರ್ಚಿಸುವವನ ಭಾವ ಪ್ರಕರ್ಷವಾಗಿ ಹೊಮ್ಮಿ ಆ ಭಾವ ಮೂರ್ತಿಯಲ್ಲಿ ಬಂದಾಗ ಆ ಶಿಲೆಯೇ ಶಂಕರನಾಗಿ ಪ್ರಕಟವಾಗುತ್ತದೆ.


ಅವರವರ ಭಾವಕ್ಕೆ ಅವರವರ ಬಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ
ಸುಭಾಷಿತ ೩೦




ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಮ್।ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ।।



ಅನ್ವಯ ಅರ್ಥ:



 ಪಠತಃ(ಓದುವವನಿಗೆ)
 ಮೂರ್ಖತ್ವಂ ನ ಅಸ್ತಿ (ಮೂರ್ಖತನವಿಲ್ಲ)   ಜಪತಃ(ಜಪಿಸುವವನಿಗೆ)
 ಪಾತಕಂ ನ ಅಸ್ತಿ(ಪಾಪವಿಲ್ಲ)
 ಮೌನಿನಃ (ಮೌನದಿಂದ ಇರುವವನಿಗೆ)
 ಕಲಹಃ ನ ಅಸ್ತಿ(ಜಗಳವಿಲ್ಲ)
 ಜಾಗ್ರತಃ ಚ(ಮತ್ತು ಎಚ್ಚರಿಕೆಯಿಂದ ಇರುವವನಿಗೆ) ಭಯಂ ನ ಅಸ್ತಿ(ಭಯವಿಲ್ಲ)


ಭಾವಾರ್ಥ:


ಸದಾ ಓದುತ್ತಾ ಇರುವುದರಿಂದ ಮೂರ್ಖತನ ದೂರವಾಗುತ್ತದೆ. ದೇವರನಾಮಜಪದಿಂದ ಪಾಪವು ನಾಶವಾಗುತ್ತದೆ. ಹೆಚ್ಚು ಮಾತನಾಡದೆ ಇರುವುದರಿಂದ ಜಗಳವು ಕಡಿಮೆಯಾಗುತ್ತದೆ. ಸದಾ ಎಚ್ಚರವಹಿಸಿ ಯೋಚಿಸಿ ಕಾರ್ಯವೆಸಗಿದರೆ ಭಯವೆಂಬುದಿಲ್ಲ.
    ಸುಭಾಷಿತ - ೨೯


 ವಿಧೌ ವಿರುದ್ಧೇ ನ ಪಯಃ ಪಯೋನಿಧೌ।
 ಸುಧೌಘಸಿಂಧೌ ನ ಸುಧಾ ಸುಧಾಕರೇ।।
 ನ ವಾಂಛಿತಂ ಸಿಧ್ಯತಿ ಕಲ್ಪಪಾದಪೇ।
 ನ ಹೇಮ ಹೇಮಪ್ರಭವೇ ಗಿರಾವಪಿ।।


ಅನ್ವಯ ಅರ್ಥ:

 ವಿಧೌ ವಿರುದ್ಧೇ (ಸತಿ)(ವಿಧಿಯು ತಿರುಗಿಬಿದ್ದರೆ) ಪಯೋನಿಧೌ(ಅಪಿ)(ಸಮುದ್ರದಲ್ಲೂ)
 ನ ಪಯಃ(ನೀರಿರದು).
 ಸುಧೌಘಸಿಂಧೌ(ಅಮೃತಪ್ರವಾಹದ ಸಾಗರವೇ ಆದ)
 ಸುಧಾಕರೇ (ಚಂದ್ರನಲ್ಲೂ)
 ನ ಸುಧಾ(ಅಮೃತವಿರದು)
 ಕಲ್ಪಪಾದಪೇ(ಅಪಿ)(ಕಲ್ಪವೃಕ್ಷದಲ್ಲೂ)   ವಾಂಛಿತಂ(ಇಷ್ಟಪಟ್ಟದ್ದನ್ನು)
 ನ ಸಿಧ್ಯತಿ(ಪಡೆಯಲಾಗದು)
 ಹೇಮಪ್ರಭವೇ(ಬಂಗಾರವನ್ನು ಸುರಿಸುವ)
 ಗಿರೌ ಅಪಿ(ಪರ್ವತದಲ್ಲೂ)
 ನ ಹೇಮ (ಲಭತೇ)(ಬಂಗಾರವನ್ನು ಪಡೆಯಲಾಗದು)


ಭಾವಾರ್ಥ:

 ವಿಧಿಲಿಖಿತವನ್ನು ಬದಲಿಸುವುದು ಅಸಾಧ್ಯ. ಪಾಪಿ ಹೋದಲ್ಲಿ ಮೊಣಕಾಲು ನೀರು ಎಂಬ ಗಾದೆಯಿದೆ. ವಿಧಿ ತಿರುಗಿ ಬಿದ್ದರೆ ಸಮುದ್ರವೂ ಆರಿಹೋದೀತು. ಸುಧಾಮಯನೂ ಅಮೃತಾತ್ಮಕನೂ ಆದ ಚಂದ್ರನಲ್ಲೂ ಅಮೃತ ಸಿಗದು. ಕಲ್ಪವೃಕ್ಷವನ್ನೇ ಬೇಡಿದರೂ ಬೇಕಾದ್ದು ಸಿಗದು. ಸ್ವರ್ಣಪರ್ವತಕ್ಕೇ ಹೋದರೂ ತುಂಡು ಚಿನ್ನವೂ ಸಿಗಲಾರದು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಬದಲು ಸಲ್ಲದ ಮಹತ್ವಾಕಾಂಕ್ಷೆಗಳನ್ನು ತೊರೆದು ಹಾಸಿಗೆ ಇದ್ದಷ್ಟು ಕಾಲು ಚಾಚಿ ನೆಮ್ಮದಿಯಿಂದ ಇರುವುದು ಲೇಸು.
ಸುಭಾಷಿತ - ೨೮


ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥೋ ನ ತಥಾ ಮಹಾನ್।ಪ್ರಾಯಃ ಕೂಪಸ್ತೃಷಾಂ ಹಂತಿ ಸತತಂ ನ ತು ವಾರಿಧಿಃ।।


ಅನ್ವಯ ಅರ್ಥ:

ಸ್ವಲ್ಪಃ (ಸಣ್ಣವನು)
 ಯಥಾ(ಹೇಗೆ)
 ಉಪಕರ್ತುಂ (ಉಪಕಾರಮಾಡಲು) ಸಮರ್ಥಃ(ಸಮರ್ಥನೋ)
 ತಥಾ(ಹಾಗೆ)
 ಮಹಾನ್(ದೊಡ್ಡವನು)
 ನ ಸಮರ್ಥಃ(ಸಮರ್ಥನಲ್ಲ)
 ಪ್ರಾಯಃ(ಬಹುಶಃ)
 ಸತತಂ(ಯಾವಾಗಲೂ)
 ಕೂಪಂ (ಬಾವಿಯು)
 ತೃಷಾಂ(ಬಾಯಾರಿಕೆಯನ್ನು)
 ಹಂತಿ (ನಾಶಮಾಡುತ್ತದೆ)
 ವಾರಿಧಿಃ(ಸಮುದ್ರವು)
 ನ (ಹಂತಿ )(ನಾಶಮಾಡದು)


 ಭಾವಾರ್ಥ:

 ಸಣ್ಣವರು ಮಾಡುವ ಉಪಕಾರವನ್ನು ದೊಡ್ಡವರು ಮಾಡಲಾರರು. ಸಮುದ್ರವು ಗಾತ್ರದಲ್ಲಿ ದೊಡ್ಡದಾಗಿರಬಹುದು ಆದರೆ ಬಾಯಾರಿಕೆ ಹಿಂಗಿಸಲು ಬಾವಿಯ ನೀರೇ ಆಗಬೇಕಷ್ಟೇ!!    ದೊಡ್ಡದೆಂದು ಪುರಸ್ಕಾರವೂ ಬೇಡ. ಚಿಕ್ಕದೆಂದು ತಿರಸ್ಕಾರವೂ ಬೇಡ. ದೊಡ್ಡವರೆಲ್ಲ ಜಾಣರೂ ಅಲ್ಲ. ಚಿಕ್ಕವರೆಲ್ಲ ಕೋಣರೂ ಅಲ್ಲ . ಈಟಿಯೋ ಭರ್ಚಿಯೋ ಗಾತ್ರದಲ್ಲಿ ದೊಡ್ಡದಾಗಿರಬಹುದು.ಬಟ್ಟೆ ಹೊಲಿಯಲು ಸೂಜಿಯೇ ಆಗಬೇಕು. ಸಣ್ಣವನು ಅರಿಯದವನು ಎಂಬ ಕೀಳರಿಮೆ ಎಂದಿಗೂ ಬೇಡ. ಒಂದಲ್ಲಾ ಒಂದು ದಿನ ಖಂಡಿತವಾಗಿಯೂ ನನ್ನ ಉಪಯೋಗ ಇದ್ದೇ ಇದೆ ಅಥವಾ ಒಂದಲ್ಲಾ ಒಂದು ದಿನ ನಾನೇನಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಎಷ್ಟು ಸಣ್ಣವನನ್ನೂ ಅತಿಪ್ರಬಲನನ್ನಾಗಿ ಮಾಡೀತು.
 ಸುಭಾಷಿತ ೨೭:


 ಮಹಾನುಭಾವಸಂಸರ್ಗಃ ಕಸ್ಯ ನೋನ್ನತಿಕಾರಕಃ।
 ರಥ್ಯಾಂಬು ಜಾಹ್ನವೀಸಂಗಾತ್ ತ್ರಿದಶೈರಪಿ ವಂದ್ಯತೇ॥


ಅನ್ವಯ ಅರ್ಥ:

 ಮಹಾನುಭಾವಸಂಸರ್ಗಃ(ಮಹಾನುಭಾವರ ಸಹವಾಸವು)       ಕಸ್ಯ (ಯಾರಿಗೆ ತಾನೇ)
 ನ ಉನ್ನತಿಕಾರಕಃ(ಶ್ರೇಯಸ್ಕರವಲ್ಲ?)
 ರಥ್ಯಾಂಬು(ಮಾರ್ಗದಲ್ಲಿ ಹರಿವ ನೀರು)   ಜಾಹ್ನವೀಸಂಗಾತ್(ಗಂಗೆಯ ಸಂಗಮದಿಂದ)
 ತ್ರಿದಶೈಃ ಅಪಿ (ದೇವತೆಗಳಿಂದಲೂ)
 ವಂದ್ಯತೇ(ಪೂಜಿಸಲ್ಪಡುತ್ತದೆ)



 ಭಾವಾರ್ಥ:


  ಮಹಾನುಭಾವರ ಸಂಗದಿಂದ ಕೇಡೆಂಬುದು ಇಲ್ಲವೇ ಇಲ್ಲ. ಎಂತಹ ಪಾಪಿಯೇ ಆದರೂ ಮನಃಪೂರ್ವಕವಾಗಿ ಸಾಧುಜನರೊಂದಿಗೆ ಸೇರಿದರೆ ಕಾಲಕ್ರಮೇಣ ಪರಿಶುದ್ಧನಾಗುವನು. ಕಾಡ ಬೇಡನಾದ ರತ್ನಾಕರನೂ ಆದಿಕವಿ ಆದುದು ನಾರದರ ಸಂಸರ್ಗದಿಂದ!

  ರಸ್ತೆಬದಿಯ ಗಟಾರದ ನೀರೂ ಸಹ ಗಂಗಾನದಿಯನ್ನು ಸೇರಿದಾಗ ಪೂಜ್ಯರಾದ ದೇವತೆಗಳಿಂದಲೂ ಪೂಜಿಸಲ್ಪಡುತ್ತದೆ. ಹೂವಿನೊಂದಿಗೆ ಸೇರಿದಾಗ ದಾರವೂ ದೇವರ ಮುಡಿಯೇರುತ್ತದೆ.

   ಸಜ್ಜನರ ಸ್ವಭಾವವೇ ಹಾಗೆ. ಮೇಲುಕೀಳೆಂಬ ಭಾವವಿಲ್ಲದೆ ಬಳಿಬಂದ ಎಲ್ಲರನ್ನೂ ಉದ್ಧರಿಸುತ್ತಾರೆ. ಬೊಗಸೆಯಲ್ಲಿನ ಹೂವು ಎಡಗೈ ಬಲಗೈ ಎಂದು ಭಾವಿಸದೇ ಎರಡೂ ಕೈಗಳನ್ನು ಏಕರೀತಿಯಲ್ಲಿ ಪರಿಮಳಗೊಳಿಸುತ್ತದೆ.

Thursday 14 February 2019

ಸುಭಾಷಿತ - ೨೬


ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:।
 ಕಿಂ ನು ಮೇ ಪಶುಭಿಸ್ತುಲ್ಯಂ ಕಿಂ ಸತ್ಪುರುಷೈರಿತಿ।।


ಅನ್ವಯ ಅರ್ಥ:

ಮೇ ಚರಿತಂ(ನನ್ನ ನಡತೆಯು) ಪಶುಭಿಃ ತುಲ್ಯಂ ಕಿಂ(ಪಶುಗಳಂತೆ ಇತ್ತೇ) ಕಿಂ ಸತ್ಪುರುಷೈಃ (ತುಲ್ಯಂ)(ಸತ್ಪುರುಷರಂತೆ ಇತ್ತೇ) ಇತಿ(ಎಂದು) ನರಃ(ಮನುಷ್ಯನು) ಪ್ರತ್ಯಹಂ(ಪ್ರತಿದಿನವೂ) ಆತ್ಮನಃ(ತನ್ನ) ಚರಿತಂ(ನಡತೆಯನ್ನು) ಪ್ರತ್ಯವೇಕ್ಷೇತ(ವಿವೇಚಿಸಿಕೊಳ್ಳಬೇಕು)।


ಭಾವಾರ್ಥ:

ಪ್ರತಿದಿನವೂ ರಾತ್ರಿ ಮಲಗುವ ಮುನ್ನ ನಮ್ಮ ದಿನಚರಿಯನ್ನೊಮ್ಮೆ ಅವಲೋಕಿಸಬೇಕು. ಪ್ರತಿಯೊಬ್ಬರಿಗೂ ತಾವು ಮಾಡಿದ್ದೇ ಸರಿ ಎನಿಸುವುದು ಸಹಜವೇ. ಅಹಂಭಾವವನ್ನು ಬಿಟ್ಟು ಆತ್ಮಸಾಕ್ಷಿಯಾಗಿ ವಿಚಾರಮಾಡಿದಾಗ ನಮ್ಮ ಗುಣದೋಷಗಳು ನಿಚ್ಚಳವಾಗಿ ಕಾಣಿಸುತ್ತದೆ. ಅಂತರ್ಮುಖಿಯಾಗಿ ತನ್ನ ವರ್ತನೆ ಸರಿಯೇ? ನಾಲ್ಕು ಜನ ಮೆಚ್ಚುವಂತೆ ನಡೆದುಕೊಂಡಿರುವೆನೇ?ಎಂದು ವಿಮರ್ಶಿಸದರೆ ಆತ್ಮಸಾಕ್ಷಿಯೇ ಮಾರ್ಗದರ್ಶನ ಮಾಡುತ್ತದೆ. ದುಗುಡ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮರುದಿನದ ವರ್ತನೆಯಲ್ಲಿ ತಾನಾಗಿಯೇ ಬದಲಾವಣೆ ಉಂಟಾಗುತ್ತದೆ.
 ಸುಭಾಷಿತ ೨೫

 ಹೀಯತೇ ಹಿ ಮತಿಸ್ತಾತ ಹೀನೈಃ ಸಹ ಸಮಾಗಮಾತ್।
 ಸಮೈಶ್ಚ ಸಮತಾಮೇತಿ ವಿಶಿಷ್ಟೈಶ್ಚ ವಿಶಿಷ್ಟತಾಮ್॥


ಅನ್ವಯ ಅರ್ಥ:


 ತಾತ(ಅಪ್ಪಾ!, ಮಗೂ!)
 ಹೀನೈಃ ಸಹ (ಹೀನರೊಂದಿಗೆ)   ಸಮಾಗಮಾತ್(ಸೇರುವುದರಿಂದ)
 ಮನಃ (ಮನಸ್ಸು)
 ಹೀಯತೇ(ದೂಷಿತವಾಗುತ್ತದೆ)
 ಸಮೈಃ (ಸಮಾನರೊಂದಿಗೆ ಸೇರುವುದರಿಂದ)
 ಸಮತಾಮ್ ಏತಿ(ಸಮತ್ವವನ್ನು ಹೊಂದುತ್ತದೆ)
 ಚ(ಮತ್ತು)
 ವಿಶಿಷ್ಟೈಃ (ವಿಶಿಷ್ಟರೊಂದಿಗೆ ಸೇರುವುದರಿಂದ )
 ವಿಶಿಷ್ಟತಾಮ್ ಏತಿ(ವಿಶಿಷ್ಟತೆಯನ್ನು ಹೊಂದುತ್ತದೆ.)


. ಭಾವಾರ್ಥ:


 ಒಬ್ಬ ವ್ಯಕ್ತಿ ಕೆಟ್ಟದ್ದನ್ನು ಮಾಡುತ್ತಿದ್ದಾನೆ ಅಥವಾ ಕೆಟ್ಟದ್ದನ್ನು ಆಡುತ್ತಿದ್ದಾನೆ ಎಂದರೆ ಅದು ಅವನ ಸ್ವಭಾವವೇ ಆಗಿರಬೇಕೆಂದೇನೂ ಇಲ್ಲ. ಕೆಟ್ಟವರ ಸಹವಾಸದಿಂದಲೂ ಆಗಿರಬಹುದು.

 ಬೇಡನ ಮನೆಯಲ್ಲಿರುವ ಗಿಳಿ ಯಾರನ್ನಾದರೂ ಕಂಡೊಡನೇ ಹೊಡಿ ಬಡಿ ಕೊಲ್ಲು ಎನ್ನುತ್ತದೆ. ಕಾರಣ ದಿನ ಬೆಳಗಾದರೆ ಅದು ಆ ಮಾತುಗಳನ್ನೇ ಕೇಳುತ್ತಿರುತ್ತದೆ. ಬೇಡರ ಸಹವಾಸ ಅದಕ್ಕೆ ಕಾರಣ. ಸಂತನ ಮನೆಯಲ್ಲಿರುವ ಗಿಳಿ ಮನೆಗೆ ಬಂದವರನ್ನು ಸ್ವಾಗತಿಸಿ ನಲ್ಮಾತುಗಳನ್ನು ಆಡುತ್ತದೆ. ಕಾರಣ ಅದು ಸಂತನ ಸಹವಾಸದಲ್ಲಿ ಅದೇ ಸಂಸ್ಕಾರ ಪಡೆಯುತ್ತದೆ.
      ಮಸಿಯನ್ನು ಮುಟ್ಟಿದರೆ ಕೈ ಕಪ್ಪಾಗುತ್ತದೆ, ಆ ಕೈಯಿಂದ ಇನ್ನೊಂದನ್ನು ಮುಟ್ಟಿದಾಗ ಅದೂ ಕಪ್ಪಾಗುತ್ತದೆ. ಆದರೆ ಮಾರ್ಜಕವನ್ನು ಮುಟ್ಟಿದರೆ ಕೈ ಶುಭ್ರವಾಗುತ್ತದೆ, ಆ ಕೈಯಿಂದ ಕೊಳೆಯಾದ ಪಾತ್ರೆಯನ್ನು ಸಿಕ್ಕಿದಾಗ ಪಾತ್ರೆಯೂ ಶುಭ್ರವಾಗುತ್ತದೆ. ಹಾಗೆಯೇ ಹೀನಸಹವಾಸದಿಂದ ತಾನೂ ಕೆಡುವುದಲ್ಲದೆ ಇತರರನ್ನೂ ಕೆಡಿಸುತ್ತಾನೆ. ದೀಪದಿಂದ ದೀಪ ಬೆಳಗುವಂತೆ ಸತ್ಸಂಗದಿಂದ ಎಲ್ಲೆಡೆ ಒಳಿತು ಹರಡುತ್ತದೆ. ಇದೇ ಸಜ್ಜನ ಸಹವಾಸಕ್ಕೂ ದುರ್ಜನ ಸಹವಾಸಕ್ಕೂ ಇರುವ ವ್ಯತ್ಯಾಸ.

 ದುರ್ಜನರ ಸಹವಾಸ ಒಮ್ಮೆಗೆ ಆಪ್ಯಾಯಮಾನ ಎನಿಸಬಹುದು ಆದರೆ ಪರಿಣಾಮದಲ್ಲಿ ಖಂಡಿತಾ ಸುಖ ಸಿಗದು. ಅಪರಾಧ ಮಾಡದಿದ್ದರೂ ಅಪರಾಧಿಯೊಂದಿಗೆ ಸೇರಿದವರಿಗೂ ಶಿಕ್ಷೆ ಕಟ್ಟಿಟ್ಟದ್ದೇ. ಸಜ್ಜನರ ನಡೆ ಅನುಸರಿಸಲು ಕಠಿಣವಾದರೂ ಪರಿಣಾಮದಲ್ಲಿ ಉನ್ನತಿಕಾರಕವಾಗಿರುತ್ತದೆ.

   ಹೀನರ ಸಹವಾಸದಿಂದ ಮನಸ್ಸು ಹೀನವಾಗುತ್ತದೆ. ಮಧ್ಯಮರ ಸಹವಾಸದಿಂದ ಮನಸ್ಸು ಹಾಳಾಗಲಾರದು ಆದರೆ ಉನ್ನತಿಯನ್ನೂ ಹೊಂದಲಾರದು. ಆದರೆ ಸಂತರ ಸಹವಾಸ ಸದಾ ಶ್ರೇಯಸ್ಕರವಾಗಿರುತ್ತದೆ.

Monday 11 February 2019

 ಸುಭಾಷಿತ ೨೪


ಪರನಿಂದಾಸು ಪಾಂಡಿತ್ಯಂ ಸ್ವೇಷು ಕಾರ್ಯೇಷ್ವನುದ್ಯಮಃ।   ಪ್ರದ್ವೇಷಶ್ಚ ಗುಣಜ್ಞೇಷು ಪಂಥಾನೋ ಹ್ಯಾಪದಾಂ ತ್ರಯಃ॥

    ಅನ್ವಯ ಅರ್ಥ:


 ಪರನಿಂದಾಸು (ಇತರರನ್ನು ದೂರುವುದರಲ್ಲಿ)
 ಪಾಂಡಿತ್ಯಂ (ನಿಪುಣನಾಗಿರುವುದು)
 ಸ್ವೇಷು ಕಾರ್ಯೇಷು (ತನ್ನ ಕೆಲಸಗಳಲ್ಲಿ)   ಅನುದ್ಯಮಃ(ತೊಡಗದಿರುವುದು)
 ಗುಣಜ್ಞೇಷು(ಜ್ಞಾನಿಗಳಲ್ಲಿ)
 ಪ್ರದ್ವೇಷಃ(ಅತಿ ದ್ವೇಷ ಹೊಂದಿರುವುದು)
 (ಏತೇ) ತ್ರಯಃ(ಈ ಮೂರು)
 ಆಪದಾಂ ಪಂಥಾನಃ(ಆಪತ್ತುಗಳಿಗೆ ದಾರಿಗಳು)


 ಭಾವಾರ್ಥ:

 ಇತರರು ಮಾಡುವ ಒಳ್ಳೆಯ ಕೆಲಸವನ್ನು ಮೆಚ್ಚಿ ಪ್ರೋತ್ಸಾಹ ನೀಡಬೇಕು. ಅಷ್ಟು ಮಾಡುವ ಮನಸ್ಸಿಲ್ದಿದ್ದರೆ ಸುಮ್ಮನಾದರೂ ಇರಬೇಕು. ಅದು ಬಿಟ್ಟು ಎಲ್ಲದರಲ್ಲೂ ದೋಷ ಹುಡುಕುತ್ತಾ ನಿಂದಿಸುತ್ತಿದ್ದರೆ ನಿಂದಿಸುವವನಿಗೂ ನೆಮ್ಮದಿ ಇಲ್ಲ ಕೇಳಿಸಿಕೊಳ್ಳುವವನಿಗೂ ನೆಮ್ಮದಿ ಇಲ್ಲ. ಲೋಕಕ್ಕಂತೂ ನಿಜಕ್ಕೂ ಹಾನಿಯೇ. ಹಾಗೆ ನಿಂದಿಸುವವರು ಛಿದ್ರಾನ್ವೇಷಿಗಳು. ಒಳ್ಳೆಯ ಗುಣಗಳು ಅವರಿಗೆ ಕಾಣಿಸುವುದೇ ಇಲ್ಲ. ಕಂಡರೂ ಗುರುತಿಸಿ ಮೆಚ್ಚುಗೆ ಸೂಚಿಸುವ ಗುಣ ಅವರಲ್ಲಿಲ್ಲ. ತಾವಾಗಿ ಮಾಡಲಾರರು, ಇತರರನ್ನು ಮಾಡಲೂ ಬಿಡಲಾರರು. ಸಜ್ಜನರರ ಸದ್ಗುಣಗಳನ್ನು ಕಂಡರೆ ಮತ್ಸರ, ದ್ವೇಷ! ತನಗೇನೂ ಲಾಭವಿಲ್ಲದಿದ್ದರೂ ಅವರನ್ನು ತುಚ್ಛೀಕರಿಸಿ ಅವಮಾನಿಸಿ ಸಮಾಜದಲ್ಲಿ ವಿಷಬೀಜ ಬಿತ್ತುವುದರಲ್ಲೇ ಏನೋ ಒಂದು ಆನಂದ ಅವರಿಗೆ. ಯಾರು ಏನೇ ಮಾಡಿದರೂ ಅದರಲ್ಲೊಂದು ಕೊರತೆ ಅವರಿಗೆ ಕಾಣಿಸುವುದು. ಅವರನ್ನು ಮೆಚ್ಚಿಸುವುದು, ಅವರ ಬಾಯನ್ನು ಮುಚ್ಚಿಸುವುದು ಅಸಾಧ್ಯ. ತಾನು ಮಾಡದಿರುವುದು, ಮಾಡುವವನನ್ನು ನಿಂದಿಸುವುದು ಸಜ್ಜನರನ್ನು ದ್ವೇಷಿಸುವುದು ಈ ಮೂರೂ ಗುಣಗಳೂ ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಆಪತ್ತಿಗೆ ದಾರಿಗಳು.

Friday 8 February 2019

ಸುಭಾಷಿತ ೨೩


ತಮಃ ಪರಿವೃತಂ ವೇಶ್ಮ ಯಥಾ ದೀಪೇನ ದೀಪ್ಯತೇ।
ತಥಾ ಬುದ್ಧಿಪ್ರದೀಪೇನ ಶಕ್ಯ ಆತ್ಮಾ ನಿರೀಕ್ಷಿತುಮ್॥


ಅನ್ವಯ ಅರ್ಥ:


 ತಮಃಪರಿವೃತಂ(ಕತ್ತಲಿನಿಂದ ಆವೃತವಾದ)
ವೇಶ್ಮ(ಮನೆಯು)
ದೀಪೇನ (ದೀಪದಿಂದ)
ದೀಪ್ಯತೇ(ಬೆಳಗಲ್ಪಡುತ್ತದೆ)
 ತಥಾ (ಹಾಗೆಯೇ)
 ಬುದ್ಧಿಪ್ರದೀಪೇನ(ಬುದ್ಧಿಯೆಂಬ ದೀಪದಿಂದ )
 ಆತ್ಮಾ ನಿರೀಕ್ಷತುಂ(ಆತ್ಮನಿರೀಕ್ಷಣೆ ಮಾಡಲು)
 ಶಕ್ಯಃ(ಸಾಧ್ಯವಿದೆ)


  ಭಾವಾರ್ಥ:

ಕತ್ತಲು ಎಷ್ಟು ಗಾಢವಾಗಿದ್ದರೂ ಸಣ್ಣದೊಂದು ದೀಪವು ಅದನ್ನು ಹೊಡೆದೋಡಿಸುತ್ತದೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಉರಿಸುತ್ತಾ ಕತ್ತಲಾವರಿಸಿದ ಇಡೀ ಮನೆಯನ್ನು ಬೆಳಗಿಸಿ ಬಿಡಬಹುದು. ಮೊದಲು ಕಿಡಿಯಿಂದ ದೀಪಬೆಳಗಿಸುವ ಪ್ರಯತ್ನ ಬೇಕು. ದೀಪವಿದ್ದರೆ ಕತ್ತಲು ಎಷ್ಟಿದ್ದರೂ ಗುರಿ ತಲುಪುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಹಾಗೆಯೇ ಶ್ರದ್ಧೆ ಮತ್ತು ಗುರುಭಕ್ತಿಗಳೆಂಬ ಎಣ್ಣೆ ಬತ್ತಿಗಳಿಂದ ಬುದ್ಧಿಯೆಂಬ ದೀಪವನ್ನು ಬೆಳಗಿಸಿ ಜ್ಞಾನವೆಂಬ ಬೆಳಕಿನಿಂದ ಮನಸ್ಸಿನ ಅಂಧಕಾರವನ್ನು ತೊಡೆಯಲು ಸಾಧ್ಯ, ಆತ್ಮಸಾಕ್ಷಾತ್ಕಾರವೂ ಸಾಧ್ಯ.
ಸುಭಾಷಿತ  ೨೨


ಗತೇಽಪಿ ವಯಸಿ ಗ್ರಾಹ್ಯಾ ವಿದ್ಯಾ ಸರ್ವಾತ್ಮನಾ ಬುಧೈಃ।
ಯದಿ ವಾ ನ ಫಲದಾ ಸ್ಯಾತ್ಸುಲಭಾ ಸ್ಯಾದನ್ಯಜನ್ಮನಿ।।


ಅನ್ವಯ ಅರ್ಥ:

 ವಯಸಿ ಗತೇ ಅಪಿ(ಪ್ರಾಯಶಃ ಸಂದಿದ್ದರೂ)
 ಬುಧೈಃ(ಬುದ್ಧಿವಂತರಿಂದ)
ಸರ್ವಾತ್ಮನಾ(ಸರ್ವಥಾ))
 ವಿದ್ಯಾ ಗ್ರಾಹ್ಯಾ(ವಿದ್ಯೆಯು ಸಂಗ್ರಹಿಸಲ್ಪಡಬೇಕು)
 ಯದಿ ವಾ (ಅದ್ಯ) ನ ಫಲದಾ ಸ್ಯಾತ್(ಒಂದು ವೇಳೆ ಇಂದು ಫಲಸಿಗೇಹೋದರೂ)
 ಅನ್ಯ ಜನ್ಮನಿ(ಅನ್ಯ ಜನ್ಮನಿ(ಮುಂದಿನ ಜನ್ಮದಲ್ಲಿ)
 ಸುಲಭಾ ಸ್ಯಾತ್। (ಸುಲಭವಾದೀತು)



ಭಾವಾರ್ಥ:*

ವಿದ್ಯೆಯು ಕಲಿತು ಮುಗಿಯುವಂಥದ್ದಲ್ಲ. ಮದಿವಯಸ್ಸಿನಲ್ಲಿಯೂ ಅಧ್ಯಯನ ಅಥವಾ ಹೊಸ ವಿಷಯಗಳನ್ನು ತಿಳಿಯುವ ಆತುರ ಇರುವವನು ಪ್ರಾಜ್ಞ. ಇನ್ನು ಈ ಪ್ರಾಯದಲ್ಲಿ ನಾನೇಕೆ ಕಲಿಯಲಿ? ಸುಮ್ಮನೆ ವಯಸ್ಸಾದ ಮೇಲೆ ಓದು ವ್ಯರ್ಥ ಎಂಬ ಭಾವನೆ ತಪ್ಪು. ಕಲಿತುದು ಈ ಜನ್ಮದಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ಜನ್ಮಾಂತರದಲ್ಲಿ ಖಂಡಿತಾ ಪ್ರಯೋಜನವಾದೀತು. ವೃದ್ಧಾಪ್ಯ ಶರೀರಕ್ಕೇ ಹೊರತು ಆತ್ಮಕ್ಕಲ್ಲ.
 ಭಗವದ್ಗೀತೆಯಲ್ಲಿ ಕೃಷ್ಣ ಹೇಳುವಂತೆ
 ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್। ಪೂರ್ವದೇಹದ ಬುದ್ಧಿಸಂಯೋಗ ಮತ್ತಿನ ಜನ್ಮದಲ್ಲಿ ಆಗಿಯೇ ಆಗುವುದು. ಸರಿಯಾಗಿ ಮತನಾಡಲೂ ಅರಿಯದ ಮಕ್ಕಳಲ್ಲೂ ನಮ್ಮ ಕಲ್ಪನೆಗೂ ಮೀರಿದ ಪ್ರತಿಭೆ ಇರುವುದನ್ನು  ಕಾಣುತ್ತೇವೆ. ಕಾರಣ ಪೌರ್ವದೇಹಿಕ ಬುದ್ಧಿಸಂಯೋಗವೇ. ಆದ ಕಾರಣ ಕೊನೆಯ ಉಸಿರಿನ ವರೆಗೂ ವಿದ್ಯೆ ಅನ್ವೇಷಣೆ ಅಧ್ಯಯನ ಮಾಡಲೇ ಬೇಕು.

Thursday 7 February 2019

ಸುಭಾಷಿತ - ೨೧


ನ ಕಶ್ಚಿತ್ಕಸ್ಯಚಿನ್ಮಿತ್ತ್ರಂ ನ ಕಶ್ಚಿತ್ಕಸ್ಯಚಿದ್ರಿಪುಃ।
ಸ್ವಭಾವೇನ ಹಿ ಮಿತ್ರಾಣಿ ಜಾಯಂತೇ ರಿಪವಸ್ತಥಾ।।


ಅನ್ವಯ ಅರ್ಥ :


ಕಶ್ಚಿತ್ (ಯಾರೂ)
ಕಸ್ಯಚಿತ್ (ಯಾರಿಗೂ)
ನ ಮಿತ್ರಮ್(ಗೆಳೆಯನಲ್ಲ)
 ಕಶ್ಚಿತ್ (ಯಾರೂ)
 ಕಸ್ಯಚಿತ್ (ಯಾರಿಗೂ)
 ನ ರಿಪುಃ (ಶತ್ರುವಲ್ಲ)
 ಸ್ವಭಾವೇನ ಹಿ (ಸ್ವಭಾವದಿಂದಲೇ)
 ಮಿತ್ರಾಣಿ (ಗೆಳೆಯರು)
 ತಥಾ (ಹಾಗೂ)
 ರಿಪವಃ (ಶತ್ರುಗಳು)
 ಜಾಯಂತೇ (ಆಗುತ್ತಾರೆ)



 ಭಾವಾರ್ಥ:

ಹುಟ್ಟುತ್ತಲೇ ಯಾರಿಗೂ ಯಾರಲ್ಲೂ ಮಿತ್ರತ್ವವೋ ಶತ್ರುತ್ವವೋ ಇರುವುದಿಲ್ಲ.  ಅವರವರ ಸ್ವಭಾವ ಕರ್ಮಾನುಸಾರ ಸಮಾಜದಲ್ಲಿ ಶತ್ರುಗಳೋ ಮಿತ್ರರೋ ಉಂಟಾಗುತ್ತಾರೆ. ಸಮಾನಗುಣವಿದ್ದಾಗ ಮಿತ್ರರಾಗುತ್ತಾರೆ. ವಿರುದ್ಧವಾದಾಗ ಶತ್ರುಭಾವ. ಶತ್ರುನಾಶಕ್ಕಾಗಿ ಬಾಹ್ಯಪ್ರಯತ್ನ ಮಾಡಿದಷ್ಟೂ ಅದು ಹೆಚ್ಚುತ್ತಾ ಹೋಗುವುದು.
 ಬೆಂಕಿಗೆ ತುಪ್ಪವೆರೆದಂತೆ ಮತ್ತೂ ವೃದ್ಧಿಯಾಗುತ್ತಲೇ ಹೋಗುವುದು. ಊರಿನಲ್ಲಿರುವ ಕಲ್ಲನ್ನೆಲ್ಲಾ ಹುಡಿಮಾಡುತ್ತಾ ಹೋಗುವ ಬದಲು ಕಾಲನ್ನು ಗಟ್ಟಿ ಮಾಡಿಕೊಳ್ಳವುದು ಸೂಕ್ತ. ಅಂತರಂಗದಲ್ಲಿ ವಿರುದ್ಧಭಾವವನ್ನು ತೊರೆದಾಗ ಶತ್ರುತ್ವ ತಾನಾಗಿಯೇ ದೂರವಾಗುತ್ತದೆ. ಮಿತ್ರಭಾವ ವೃದ್ಧಿಕಾರಕ. ಶತ್ರುಭಾವ ಕ್ಷಯಕಾರಣ.  ಅವಧೂತರಾಗಿ ಸುಖ-ದುಃಖ ಶತ್ರು-ಮಿತ್ರಾದಿಗಳಿಂದ ಅತೀತರಾಗಿ ಉದಾಸೀನರಾಗಿ ಬದುಕುವುದು ಲೌಕಿಕರಿಗೆ ಕಷ್ಟಸಾಧ್ಯ. ಸ್ವಭಾವವನ್ನು ತಿದ್ದಿಕೊಂಡು ಶತ್ರುತ್ವವನ್ನು ಕಳೆದುಕೊಳ್ಳುವುದು ಕಷ್ಟಸಾಧ್ಯವೇನಲ್ಲ. ಆ ಕುರಿತು ಮನಸ್ಸು ಮಾಡಿ ಪ್ರಯತ್ನಿಸಿಬೇಕು ಅಷ್ಟೇ.
ಸುಭಾಷಿತ - ೨೦


ಅನುಗಂತುಂ ಸತಾಂ ವರ್ತ್ಮ ಕೃತ್ಸ್ನಂ ಯದಿ ನ ಶಕ್ಯತೇ।ಸ್ವಲ್ಪಮಪ್ಯನುಗಂತವ್ಯಂ ಮಾರ್ಗಸ್ಥೋ ನಾವಸೀದತಿ।।


ಅನ್ವಯ ಅರ್ಥ:

ಸತಾಂ(ಸತ್ಪುರುಷರ)
 ವರ್ತ್ಮ(ಹಾದಿಯನ್ನು)
ಕೃತ್ಸ್ನಂ (ಸಂಪೂರ್ಣವಾಗಿ)
ಅನುಗಂತುಂ(ಅನುಸರಿಸಲು)
ಯದಿ ನ ಶಕ್ಯತೇ (ಸಾಧ್ಯವಾಗದಿದ್ದರೆ)
ಸ್ವಲ್ಪಂ ಅಪಿ(ಸ್ವಲ್ಪವಾದರೂ) ಅನುಗಂತವ್ಯಮ್(ಅನುಸರಿಸಬೇಕು)
ಮಾರ್ಗಸ್ಥಃ (ಧರ್ಮಮಾರ್ಗದಲ್ಲಿ ಇರುವವನು)
ನ ಅವಸೀದತಿ(ವಿಷಣ್ಣನಾಗುವುದಿಲ್ಲ)


ಭಾವಾರ್ಥ:

 ಮಹಾತ್ಮರಾದ ಹಿರಿಯರು ತೋರಿಸಿದ ಧರ್ಮದ ದಾರಿ ಸುಗಮವೂ ಅಲ್ಲ ರೋಚಕವೂ ಅಲ್ಲ. ಎಷ್ಟೋ ಬಾರಿ ಅಸಾಧ್ಯವೆಂದೇ ಎನಿಸುತ್ತದೆ. ಹಾಗೆಂದುಕೊಂಡು ಪ್ರಯತ್ನ ಮಾಡದೇ ಇರುವುದು ಲೇಸಲ್ಲ. ಗಂಧದ ಮರದ ದಿಮ್ಮಿಗೆ ಯಾವ ಸುಗಂಧವಿದೆಯೋ ಅದೇ ಸುಗಂಧ ಸಣ್ಣ ತುಂಡಿಗೂ ಇದೆ. ಪರಿಮಳ ಬೀರಲು ದಿಮ್ಮಿಯೇ ಆಗಬೇಕಾಗಿಲ್ಲ. ಸಂಪೂರ್ಣವಾಗಿ ಮಹಾತ್ಮರನ್ನು ಅನುಸರಿಸುವುದು ಸಾಧ್ಯವಿಲ್ಲದಿದ್ದರೂ ಅಲ್ಪವೋ ಸ್ವಲ್ಪವೋ ಅವರ ಹಾದಿಯಲ್ಲೇ ಸಾಗಿದರೆ ಕಷ್ಟವೆನಿಸಿದರೂ ಸೋಲೆಂದಿಗೂ ಇಲ್ಲ. ಗರುಡನಂತೆ ವೇಗವಾಗಿ ಸಾಗುವುದು ಇರುವೆಗೆ ಸಾಧ್ಯವಿಲ್ಲ ನಿಜ. ಸಾಮರ್ಥ್ಯವಿದ್ದರೂ ಹಾರುವ ಪ್ರಯತ್ನಮಾಡದಿದ್ದರೆ ಗರುಡನಾದರೂ ಇದ್ದಲ್ಲೇ ಇರಬೇಕಾಗುತ್ತದೆ. ಅತ್ಯಲ್ಪ ಸಾಮರ್ಥ್ಯದ ಇರುವೆಯೂ ಸಹ ನಿಧಾನವಾಗಿಯಾದರೂ ಸಾಗುತ್ತಲೇ ಇದ್ದರೆ ಯೋಜನಾಂತರವನ್ನೂ ಕ್ರಮಿಸಬಲ್ಲುದು. ಸಾಧಿಸಬೇಕೆಂಬ ಮನಸ್ಸು ಮತ್ತು ದೃಢವಾದ ನಿರ್ಧಾರದೊಂದಿಗೆ ಕಾರ್ಯಪ್ರವೃತ್ತರಾದರೆ ಒಂದಿಲ್ಲೊಂದು ದಿನ ಸಾಧಕರಾಗುವುದರಲ್ಲಿ ಸಂದೇಹವಿಲ್ಲ.
ಸುಭಾಷಿತ - ೧೯


ಉಭಯೋರ್ನಾಸ್ತಿ ಭೋಗೇಚ್ಛಾ ಪರಾರ್ಥಂ ಧನಸಂಚಯಃ। ಕೃಪಣೋದಾರಯೋಃ ಪಶ್ಯ ತಥಾಪಿ ಮಹದಂತರಮ್।।


ಅನ್ವಯ ಅರ್ಥ:

ಉಭಯೋಃ (ಇಬ್ಬರಿಗೂ)
 ಭೋಗೇಚ್ಛಾ ನ ಅಸ್ತಿ(ಭೋಗದ ಆಸೆಯಿಲ್ಲ)
 ಪಶ್ಯ (ನೋಡು)
ತಥಾ ಅಪಿ(ಹಾಗಾದರೂ)
 ಕೃಪಣೋದಾರಯೋಃ(ಜಿಪುಣ ಮತ್ತು ಉದಾರಿಯಲ್ಲಿ) ಮಹದಂತರಮ್ ಅಸ್ತಿ(ಬಹಳ ವ್ಯತ್ಯಾಸವಿದೆ)


ಭಾವಾರ್ಥ:

ಉದ್ದೇಶ ಏನು ಎಂಬುದರ ಮೇಲೆ ಕಾರ್ಯಕ್ಕೆ ಮಹತ್ವ ಬರುತ್ತದೆ. ಕಾರ್ಯ ಒಂದೇ ಆದರೂ ಉದ್ದೇಶ ಬೇರೆ ಬೇರೆ ಆದರೆ ಪರಾಣಾಮವೂ ಬೇರೆ ಬೇರೆಯೇ. ಉದಾರಿಯೂ ಧನಸಂಪಾದನೆ ಮಾಡುತ್ತಾನೆ, ಜಿಪುಣನೂ ಅದನ್ನೇ ಮಾಡುತ್ತಾನೆ. ಇಬ್ಬರಿಗೂ ಅದನ್ನು ಭೋಗಿಸುವ ಇಚ್ಛೆ ಇಲ್ಲ. ಆದರೆ ಅವರಿಬ್ಬರಲ್ಲಿ ಅಂತರವೆಷ್ಟು ನೋಡಿ! ಒಬ್ಬ ದಾನಕ್ಕಾಗಿ ಸಂಗ್ರಹಿಸುತ್ತಾನೆ, ಇನ್ನೊಬ್ಬ ಸಂಗ್ರಹಕ್ಕಾಗಿ ಸಂಗ್ರಹಿಸುತ್ತಾನೆ. ತನ್ನ ಸೌಖ್ಯವನ್ನು ಲೆಕ್ಕಿಸದೆ ದಾನಮಾಡುವವರು ಮಹಾತ್ಮರು. ದಧೀಚಿ ಶಿಬಿಯಂತೆ ಪರಾರ್ಥಕ್ಕಾಗಿ ಶರೀರವನ್ನೇ ದಾನಮಾಡಬಲ್ಲವರು. ತಾವೂ ಭೋಗಿಸುತ್ತಾ ಇತರರಿಗೂ ದಾನ ಮಾಡುತ್ತಾ ಅದರಿಂದ ಸುಖಪಡುವರು ಇನ್ನೊಂದು ವರ್ಗದವರು.
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ।ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ॥

ಯಾರು ತಾವೂ ಭೋಗಿಸದೆ ಇತರರಿಗೂ ನೀಡದೆ ಸಂಗ್ರಹಮಾಡಿಡುವರೋ ಅವರ ಸಂಪತ್ತು ನಾಶವಾಗುತ್ತದೆ ಅಥವಾ ರಾಜರ, ತಸ್ಕರರ ವಶವಾಗುತ್ತದೆ

Saturday 2 February 2019

ಸುಭಾಷಿತ - ೧೮


ಹಸ್ತೀ ಸ್ಥೂಲತನುಃ ಸ ಚಾಂಕುಶವಶಃ ಕಿಂ ಹಸ್ತಿಮಾತ್ರೋಂಽಕುಶಃ।

ದೀಪೇ ಪ್ರಜ್ವಲಿತೇ ಪ್ರಣಶ್ಯತಿ ತಮಃ ಕಿಂ ದೀಪಮಾತ್ರೋ ತಮಃ।।

ವಜ್ರೇಣೈವ ಹತಾಃ ಪತಂತಿ ಗಿರಯಃ ಕಿಂ ವಜ್ರಮಾತ್ರೋ ಗಿರಿಃ।

ತೇಜೋ ಯಸ್ಯ ವಿರಾಜತೇ ಸ  ಬಲವಾನ್ ಸ್ಥೂಲೇಷು ಕಃ ಪ್ರತ್ಯಯಃ।।


ಅನ್ವಯ ಅರ್ಥ:


 ಹಸ್ತೀ (ಆನೆಯು)
 ಸ್ಥೂಲತನುಃ(ಸ್ಥೂಲವಾದ್ದನ್ನು ಶರೀರವುಳ್ಳದ್ದು)
 ಸಃ ಚ(ಅದೂ ಕೂಡಾ)
 ಅಂಕುಶವಶಃ(ಅಂಕುಶದ ವಶದಲ್ಲಿದೆ)
 ಅಂಕುಶಃ(ಅಂಕುಶವು)
 ಹಸ್ತಿಮಾತ್ರಃ ಕಿಮ್?(ಆನೆಯ ಗಾತ್ರದ್ದೇನು?)
 ದೀಪೇ ಪ್ರಜ್ವಲಿತೇ(ದೀಪ ಬೆಳಗಿದಾಗ)
 ತಮಃ (ಕತ್ತಲೆಯು)
 ಪ್ರಣಶ್ಯತಿ(ನಾಶವಾಗುತ್ತದೆ)
 ತಮಃ(ಕತ್ತಲೆಯು)
 ದೀಪಮಾತ್ರಃ ಕಿಮ್?(ದೀಪದಷ್ಟೇ ಗಾತ್ರದ್ದೇನು?)
 ವಜ್ರೇಣ ಏವ(ವಜ್ರಾಯುಧದಿಂದಲೇ)
 ಹತಾಃ (ಹೊಡೆಯಲ್ಪಟ್ಟ)
 ಗಿರಯಃ (ಪರ್ವತಗಳು)
 ಪತಂತಿ(ಉರುಳುತ್ತವೆ)
 ಗಿರಿಃ(ಪರ್ವತವು)
 ವಜ್ರಮಾತ್ರಃ(ವಜ್ರಾಯುಧದ ಗಾತ್ರದ್ದೇನು?)
 ಯಸ್ಯ ತೇಜಃ(ಅಸ್ತಿ)(ಯಾರಲ್ಲಿ ತೇಜಸ್ಸು ಇದೆಯೋ) ಸಃ(ಅವನು)
 ಬಲವಾನ್(ಶಕ್ತಿಶಾಲಿಯು)
 ಸ್ಥೂಲೇಷು(ದಪ್ಪಗಿರುವವರಲ್ಲಿ)
 ಕಃ ಪ್ರತ್ಯಯಃ (ಗುಣವೇನಿದೆ?)


ಭಾವಾರ್ಥ:

 ಆತ್ಮಶಕ್ತಿ ಸಾಮರ್ಥ್ಯ ಇದ್ದರೆ ಗಾತ್ರದಿಂದ ಹೆಚ್ಚಿನ ಪ್ರಯೋಜನ ಏನೂ ಇಲ್ಲ. ಮಹಾನ್ ಗಾತ್ರದ ಆನೆಯನ್ನು ಹಿಡಿತಕ್ಕೆ ತರುವುದು ಪುಟ್ಟ ಅಂಕುಶ. ಆ ಅಂಕುಶವನ್ನು ಹಿಡಿದ ಮಾವುತನೂ ಆನೆಗೆ ಹೋಲಿಸಿದಾಗ ಪುಟ್ಟನೇ. ಕತ್ತಲು ಸುತ್ತಲೂ ಕವಿದಿದ್ದರೂ ಪುಟ್ಟ ದೀಪವು ಅದನ್ನು ಹೊಡೆದೋಡಿಸುತ್ತದೆ. ಅತ್ತಿತ್ತ ಹಾರಾಡುತ್ತಿದ್ದ ಮಹಾನ್ ಪರ್ವತಗಳು ಇಂದ್ರನ ಕೈಯ ವಜ್ರಾಯುಧದಿಂದ ಘಾತಿಗೊಂಡವು. ಹಾಗೆಂದು ವಜ್ರಾಯುಧವು ಗಾತ್ರದಲ್ಲಿ ಪರ್ವತಗಳಿಗೆ ಸಮನಿದ್ದವೇನು? ನಮ್ಮಲ್ಲಿ ಆತ್ಮಶಕ್ತಿ ತೇಜಸ್ಸು ಹೆಚ್ಚಿದಾಗ ತಾನಾಗಿಯೇ ಎದುರಾಳಿಯಲ್ಲಿ ತೇಜೋಭಿಭವ ಉಂಟಾಗುತ್ತದೆ. ಯಾರಲ್ಲಿ ತೇಜಸ್ಸು ವಿರಾಜಿಸುತ್ತದೋ ಅವನೇ ಬಲಶಾಲಿ. ದೊಡ್ಡ ಗಾತ್ರದಿಂದ ಪ್ರಯೋಜವೇನು?
ಸುಭಾಷಿತ - ೧೭


 ಸ್ವಭಾವಂ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ।   ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್॥


ಅನ್ವಯ ಅರ್ಥ:


 ಸ್ವಭಾವಂ(ಮೂಲಗುಣವನ್ನು)
 ಉಪದೇಶೇನ (ಉಪದೇಶದ ಮೂಲಕ)
 ಅನ್ಯಥಾ ಕರ್ತುಂ(ಬದಲಾಯಿಸಲು)
 ನ ಶಕ್ಯತೇ(ಸಾಧ್ಯವಾಗದು)
 ಸುತಪ್ತಂ ಅಪಿ(ಚೆನ್ನಾಗಿ ಕಾಯಿಸಿದರೂ)
 ಪಾನೀಯಂ(ನೀರು)
 ಪುನಃ(ಮತ್ತೆ)
 ಶೀತತಾಂ ಗಚ್ಛತಿ(ತಣ್ಣಗಾಗುತ್ತದೆ).


ಭಾವಾರ್ಥ:


 ನೀರನ್ನು ಕಾಯಿಸಿದಾಗ ಅದು ಬಿಸಿಯಾಗುವುದೇನೋ ಹೌದು ಆದರೆ ಶಾಶ್ವತವಾಗಿ ಬಿಸಿಯಾಗಿಯೇ ಉಳಿದೇತೆ? ಸಹಜವಾಗಿಯೇ ಸ್ವಲ್ಪವೇ ಸಮಯದಲ್ಲಿ ಅದು ತಣ್ಣಾಗಾಗುವುದಿಲ್ಲವೇ? ಮಳೆಗಾಲವಾಗಲೀ ಚಳಿಗಾಲವಾಗಲೀ ಬೇಸಿಗೆಯೇ ಆಗಿರಲಿ ತಣ್ಣಗಿರುವುದೇ ಆ ನೀರಿನ ಸಹಜ ಗುಣ. ಬಿಸಿ ಮಾಡಿದಾಗ ತಾತ್ಕಾಲಿಕವಾಗಿ ಮಾತ್ರ ಬದಲಾವಣೆಯಾಗುವುದು. ಎಷ್ಟು ಕಾಯಿಸಿದರೂ ಅಷ್ಟೇ! ಜೀವಿಗಳಲ್ಲಿಯೂ ಹಾಗೆಯೇ. ಮೂಲ ಸ್ವಭಾವ ಎಂದಿಗೂ ಬದಲಾಗದು. ಕರಿಕರಡಿಯನ್ನು ಎಂದಿಗೂ ಬಿಳಿ ಮಾಡಲಾಗದು, ಬಿಳಿಕರಡಿಯನ್ನು ಕಪ್ಪು ಮಾಡುವುದೂ ಅಸಾಧ್ಯವೇ. ಅಂತರಂಗ ಸುಸಂಸ್ಕೃತ ಆಗಿದ್ದರೆ ಬಾಹ್ಯ ಸಂಸ್ಕಾರಗಳಿಂದ ವ್ಯಕ್ತಿಯಲ್ಲಿ ಬದಲಾವಣೆ ತರಬಹುದು. ಸ್ವಭಾವವೇ ದುಷ್ಟವಾಗಿದ್ದರೆ ಆ ಮೂರ್ಖನಿಗೆ ನೂರ್ಕಾಲ ಬುದ್ಧಿ ಹೇಳಿದರೂ ಗೋರ್ಕಲ್ಲ ಮೇಲೆ ಮಳೆ ಬರೆದಂತೆಯೇ ಸರಿ. ಪಾತ್ರಾಪಾತ್ರ ವಿವೇಚನೆಯಿಲ್ಲದೆ ಬುದ್ಧಿ ಹೇಳಿದರೆ ಹೇಳುವವನ ಶ್ರಮ ವ್ಯರ್ಥವಾದೀತು, ಹೇಳುವವನೇ ಮೂರ್ಖನೆನಿಸಿಕೊಂಡಾನು.
ಸುಭಾಷಿತ - ೧೬


ವೀಣೇವ ಶ್ರೋತ್ರಹೀನಸ್ಯ ಲೋಲಾಕ್ಷೀವ ವಿಚಕ್ಷುಷಃ।
ವ್ಯಸೌ ಕುಸುಮಮಾಲೇವ ಶ್ರೀಃ ಕದರ್ಯಸ್ಯ ನಿಷ್ಫಲಾ॥

ಅನ್ವಯ ಅರ್ಥ:

ಶ್ರೋತ್ರಹೀನಸ್ಯ (ಕಿವುಡನಿಗೆ)
 ವೀಣಾ ಇವ (ವೀಣೆಯಂತೆ)
 ವಿಚಕ್ಷುಷಃ(ಕುರುಡನಿಗೆ)
 ಲೋಲಾಕ್ಷೀ ಇವ(ಸುಂದರಿಯಂತೆ)
 ವ್ಯಸೌ(ನಿರ್ಜೀವಿಗೆ)
 ಕುಸುಮಮಾಲಾ ಇವ(ಹೂವಿನ ಹಾರದಂತೆ)
 ಕದರ್ಯಸ್ಯ (ಜಿಪುಣನಿಗೆ)
 ಶ್ರೀಃ(ಐಶ್ವರ್ಯವು)
 ನಿಷ್ಫಲಾ(ಪ್ರಯೋಜನಕ್ಕಿಲ್ಲ)

 ಭಾವಾರ್ಥ:

 ವೀಣಾವಾದನ ಎಷ್ಟು ಮಧುರವಾಗಿದ್ದರೇನು? ಕಿವುಡನು ಅದನ್ನು ಆಸ್ವಾದಿಸಲಾರ. ಎಷ್ಟು ನುಡಿಸಿದರೂ ಅದನ್ನು ನೋಡುತ್ತಾ ಇರಬಹುದೇ ಹೊರತು ಅದರ ಸುಖ ಆತನಿಗಿಲ್ಲ. ಸಖಿಯು ತ್ರಿಲೋಕಸುಂದರಿಯೇ ಆಗಿದ್ದರೂ ಕುರುಡನಿಗೆ ಆ ಸೌಂದರ್ಯಾನುಭವದ ಯೋಗವೇ ಇಲ್ಲ ಇಲ್ಲ. ಸುಗಂಧಿತವಾದ ಸುಂದರ ಹೂಮಾಲೆ ಹಾಕಿ ಅಲಂಕರಿದರೂ ಶವಕ್ಕೆ ಅದರ ಅರಿವೇ ಇಲ್ಲ. ಹಾಗೆಯೇ ಜಿಪುಣನ ಸಂಪತ್ತೂ ಕೂಡಾ ತೀರಾ ನಿಷ್ಫಲ. ಸಂಪತ್ತು ಇದ್ದರೆ ಸಾಲದು ಅದನ್ನು ಅನುಭವಿಸುವ ಮನಸ್ಸು ಬೇಕು. ಇದ್ದಾಗ ಹಲವರೊಂದಿಗೆ ಹಂಚಿಕೊಂಡು ಸುಖ ಅನುಭವಿಸಿದರೆ ಆ ಸಂಪತ್ತಿಗೊಂದು ಬೆಲೆ. ಸಂಪತ್ತಿಗೆ ಮೂರೇ ದಾರಿ. ದಾನ, ಭೋಗ, ನಾಶ. ಇತರರಿಗೆ ದಾನ ಮಾಡಿ ಅವರ ಸುಖಸಂತೋಷ ಕಂಡು ಸುಖಿಸುವುದು ಶ್ರೇಷ್ಠ. ಅದು ಬಿಟ್ಟರೆ ತಾನಾದರೂ ಭೋಗಿಸಿ ಸುಖಪಡಬೇಕು. ಇವೆರಡೂ ಇಲ್ಲದಿದ್ದರೆ ವ್ಯರ್ಥವಾಗಿ ಅದು ನಾಶವನ್ನೇ ಹೊಂದುತ್ತದೆ
ಸುಭಾಷಿತ ೧೫

 ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇಃ ಪರಂ ಗತಾಃ।
  ತ ಏವ ಸುಖಮೇಧಂತೇ ಮಧ್ಯಮಃ ಕ್ಲಿಶ್ಯತೇ ಜನಃ॥

ಅನ್ವಯ ಅರ್ಥ:

ಯೇ (ಯಾರು)
 ಲೋಕೇ (ಲೋಕದಲ್ಲಿ)
 ಮೂಢತಮಾಃ(ಎನಗೂ ಅರಿಯದವರೋ)
 ಚ (ಮತ್ತು)
 ಯೇ (ಯಾರು)
 ಬುದ್ಧೇಃ (ಜ್ಞಾನದ)
 ಪರಂ ಗತಾಃ(ಪಾರಮ್ಯವನ್ನು ಹೊಂದಿರುವರೋ)
 ತೇ ಏವ (ಅವರೇ)
 ಸುಖಂ (ಸುಖವನ್ನು)
 ಏಧಂತೇ(ಹೊಂದುತ್ತಾರೆ).
 ಮಧ್ಯಮಃ ಜನಃ(ಉಳಿದ ಮಧ್ಯಮ ಜ್ಞಾನದ ಜನರು) ಕ್ಲಿಶ್ಯತೇ(ಕ್ಲೇಶವನ್ನು ಹೊಂದುತ್ತಾರೆ)
   

ಭಾವಾರ್ಥ:


      ಏನೂ ಅರಿಯದವನಿಗೆ ಸಂಶಯವಿಲ್ಲ, ಎಲ್ಲವನ್ನೂ ತಿಳಿದವನಿಗೂ ಸಂಶಯವಿಲ್ಲ, ಸಂಶಯವಿದ್ದಲ್ಲಿ ನಂಬಿಕೆಗೆ ಎಡೆ ಇಲ್ಲ, ಸಂಶಯ ಇಲ್ಲದಲ್ಲಿ ನಂಬಿಕೆ ಇದೆ. ನಂಬಿಕೆ ಇದ್ದಲ್ಲಿ ಸುಖವಿದೆ.
       
 ಅಲ್ಪ ಸ್ವಲ್ಪ ತಿಳಿದುಕೊಂಡವನು ಇತರರನ್ನು ನಂಬಲಾರ, ತಾನಾಗಿ ಮಾಡಬಲ್ಲೆನೆಂಬ ವಿಶ್ವಾಸವೂ ಇಲ್ಲ. ಎಲ್ಲಾ ಕಡೆಯೂ ಸಂಶಯವೇ. ಅಂಥವರು ಸದಾ ಕಷ್ಟಕ್ಕೆ ಒಳಗಾಗುತ್ತಾ ಇರುತ್ತಾರೆ.
     
ಕಗ್ಗದ ಕವಿ ಹೇಳುವಂತೆ ನಂಬದ ಹಿರಣ್ಯಕಶಿಪುವಿಗೂ ಮೋಕ್ಷ ಸಿಕ್ಕಿತು, ನಂಬಿದ ಪ್ರಹ್ಲಾದನಿಗೂ ಭಗವದ್ದರ್ಶನವಾಯಿತು. ಆದರೆ ಪೂರ್ಣವಾಗಿ ನಂಬಲಾರದೆ ನಂಬಿಕೆಯನ್ನೂ ಬಿಡಲಾರದೆ ಸಿಂಬಳದಲ್ಲಿ ಸಿಕ್ಕಿಕೊಂಡ ನೊಣದಂತೆ ಒದ್ದಾಡುವವರಿಗೆ ಎಂದಿಗೂ ಸುಖವಿಲ್ಲ.

Friday 1 February 2019

ಸುಭಾಷಿತ - ೧೪


ಸಂರೋಹತ್ಯಗ್ನಿನಾ ದಗ್ಧಂ ವನಂ ಪರಶುನಾ ಹತಮ್।
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್ಕ್ಷತಮ್॥


ಅನ್ವಯ ಅರ್ಥ:

ಅಗ್ನಿನಾ ದಗ್ಧಂ (ಬೆಂಕಿಯಿಂದಾಗಿ ಉರಿದುಹೋದ)
 ಪರಶುನಾ ಹತಂ(ಕೊಡಲಿಯಿಂದ ನಾಶವಾದ)
 ವನಂ (ಕಾಡು)
 ಸಂರೋಹತಿ (ಪುನಃ ಬೆಳೆಯುತ್ತದೆ )
 ಬೀಭತ್ಸಂ(ಕ್ರೂರವಾಗಿ)
 ವಾಚಾ (ಮಾತಿನ ಮೂಲಕ)
 ದುರುಕ್ತಂ(ಕೆಟ್ಟದಾಗಿ ಆಡಿ ಮಾಡಿದ)
 ವಾಕ್ಕ್ಷತಂ(ಮಾತಿನ ಗಾಯವು) ನ ಸಂರೋಹತಿ(ಮಾಯುವುದಿಲ್ಲ).


ಭಾವಾರ್ಥ:

    ಬೆಂಕಿಯಿಂದಾಗಿ ಕಾಡಿಗೆ ಕಾಡೇ ಉರಿದು ಹೋದರೂ ಕಾಲಕ್ರಮೇಣ ಪುನಃ ಬೆಳೆಯಬಹುದು. ಕೊಡಲಿಯಿಂದ ಕಡಿದ ಮರಗಳೂ ಕಾಲಾಂತರದಲ್ಲಿ ಮತ್ತೆ ಚಿಗುರೊಡೆಯಬಹದು. ಮಾತಿನಿಂದ ಮನ ನೊಂದರೆ ಅದು ಮನಃಪಟಲದಿಂದ ಅಳಿಸಿಹೋಗದು. ಮೈಗೆ ಆದ ಗಾಯ ಮಾಯುತ್ತದೆ ಮನಸ್ಸಿನ ಗಾಯ ಶಾಶ್ವತವಾಗಿ ಉಳಿಯುತ್ತದೆ. ಆದುದರಿಂದ ಮಾತನಾಡುವಾಗ ಎಚ್ಚರ ವಹಿಸಬೇಕು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು.
ಸುಭಾಷಿತ ೧೩


 ಯಸ್ಮಿನ್ ಜೀವತಿ ಜೀವಂತಿ ಬಹುಶಃ ಸ ತು ಜೀವತಿ।  ಕಾಕೋಽಪಿ ಕಿಂ ನ ಕುರುತೇ ಚಂಚ್ವಾ ಸ್ವೋದರಪೂರಣಮ್॥

ಅನ್ವಯ ಅರ್ಥ:

 ಯಸ್ಮಿನ್ ಜೀವತಿ (ಸತಿ) (ಯಾವನು ಜೀವಿಸುವದರಿಂದ) ಬಹವಃ(ಅನೇಕರು)
ಜೀವಂತಿ (ಬದುಕುತ್ತಾರೋ)
ಸಃ ತು ಜೀವತಿ (ಅವನು ಬದುಕುತ್ತಾನೆ)
 ಕಾಕಃ ಅಪಿ (ಕಾಗೆಯೂ)
ಚಂಚ್ವಾ(ಕೊಕ್ಕಿನಿಂದ)
ಸ್ವೋದರಪೂರಣಂ(ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸವನ್ನು)
ನ ಕುರುತೇ ಕಿಮ್?(ಮಾಡುವುದಿಲ್ಲವೇ)


 ಭಾವಾರ್ಥ:

ಬದುಕು ಎಂದರೆ ಕೇವಲ ತಿಂದುಂಡು ಬದುಕುವುದಲ್ಲ. ಒಂದು ಮರ ಬದುಕಿದ್ದರೆ ಹಲವು ಹಕ್ಕಿಗಳಿಗೆ ಆಶ್ರಯವಾಗುತ್ತದೆ. ತಾನು ಬಿಸಿಲಲ್ಲಿ ನಿಂತು ಬಂದವರಿಗೆ ನೆರಳನ್ನು ಕೊಡುತ್ತದೆ. ದುರ್ಗಂಧಿತವಾದ ಗೊಬ್ಬರವನ್ನು ತಿಂದು ಹೂವಿನ ಸುಗಂಧವನ್ನು ಬೀರುತ್ತದೆ. ಕಲ್ಲಿನಿಂದ ಹೊಡೆದರೂ ಸಿಹಿಯಾದ ಹಣ್ಣನ್ನು ಕೊಡುತ್ತದೆ. ಅದು ನಿಜವಾದ ಬದುಕು. ಯಾರ ಬದುಕು ಅನೇಕರಿಗೆ ಬದುಕಲು ಅನುವು ಮಾಡುತ್ತದೋ ಅದು ನಿಜವಾದ ಬದುಕು. ಆದು ಇತರರಿಗೆ ದಾರಿದೀಪವಾಗಬೇಕು ಆಶ್ರಯವಾಗಬೇಕು. ಸುಮ್ಮನೆ ತಿಂದುಂಡು ಕಾಗೆ ಗೂಬೆಗಳಂತೆ ಬದುಕಿದರೆ ಸಾರ್ಥಕ್ಯ ಏನಿದೆ?
ಸುಭಾಷಿತ - ೧೨


 ಜನ್ಮೈಶ್ವರ್ಯಶ್ರುತಶ್ರೀಭಿರೇಧಮಾನಮದಃ ಪುಮಾನ್।   ನೈವಾರ್ಹತ್ಯಭಿಧಾತುಂ ವೈ ತ್ವಾಮಕಿಂಚನಗೋಚರಮ್।।*                                           (ಶ್ರೀಮದ್ಭಾಗವತ)



    ಅನ್ವಯ ಅರ್ಥ:

 ಜನ್ಮೈಶ್ವರ್ಯಶ್ರುತಶ್ರೀಭಿಃ (ಜನ್ಮ, ಸಂಪತ್ತು,ಕೀರ್ತಿ ಮೊದಲಾದವುಗಳಿಂದ)
 ಏಧಮಾನಮದಃ(ಮದವನ್ನು ಹೊಂದಿದ)
 ಪುಮಾನ್(ನರನು)
 ಅಕಿಂಚನಗೋಚರಂ(ಶೂನ್ಯರಾದವರಿಗೆ ಗೋಚರಿಸುವ)
 ತ್ವಾಂ (ನಿನ್ನನ್ನು )
 ಅಭಿಧಾತುಂ ವೈ(ಹೆಸರು ಹೇಳಲೂ)
 ನ ಏವ ಅರ್ಹತಿ (ಅರ್ಹನಾಗುವುದೇ ಇಲ್ಲ)


 ಭಾವಾರ್ಥ:


 ತುಪ್ಪವಿರುವುದು ಹಾಲಿನಲ್ಲೇ ಆದರೂ ಆ ತುಪ್ಪ ಸಿಗಬೇಕಾದರೆ ಹಾಲು ಇಲ್ಲವಾಗಲೇ ಬೇಕು. ಅದರ ಮಧುರತ್ವ ಸ್ನಿಗ್ಧತ್ವವೇ ಮೊದಲಾದ ಎಲ್ಲಾ ಗುಣಗಳನ್ನು ಕಳೆದುಕೊಂಡ ಹೊರತು ತುಪ್ಪ ಕಾಣಿಸಲಾರದು. ಮನುಷ್ಯನೂ ಅಷ್ಟೇ. ತನ್ನಲ್ಲೇ ದೇವರಿದ್ದರೂ ಕಾಣಬೇಕಾದರೆ ನಾನು ಎಂಬ ಭಾವವನ್ನು ಕಳೆದುಕೊಳ್ಳಬೇಕು. ನಾನು ಇಲ್ಲ ನೀನೇ ಎಲ್ಲಾ ಎಂದಾಗಲೇ ಆತನ ದರ್ಶನ ಸಾಧ್ಯ. ನಾನು ಉತ್ತಮ ಕುಲಜ, ಐಶ್ವರ್ಯವಂತ, ಮಹಾಭಕ್ತನೆಂಬ ಕೀರ್ತಿ ಹೊಂದಿದವನು ಎಂಬ ಮದವಿದ್ದರೆ ಆ ಭಗವಂತನ ಹೆಸರು ಹೆಸರು ಹೇಳುವ ಅರ್ಹತೆಯೂ ಇಲ್ಲವಾಗುತ್ತದೆ. ಚತುರ್ವೇದ ಷಟ್ಶಾಶಾಸ್ತ್ರ ಅಷ್ಟಾದಶ ಪುರಾಣಗಳನ್ನು ಅರೆದು ಕುಡಿದಿದ್ದರೂ ಮದವಿದ್ದರೆ ಎಲ್ಲವೂ ವ್ಯರ್ಥ. ಭಗವಂತ ಕಾಣಿಸಬೇಕಾದರೆ ಹೃದಯ ನಿರ್ಮಲವಾಗಿರಬೇಕು. ಇಲ್ಲವಾದರೆ ಯಾವ ವೇದವೂ ಭಗವಂತನನ್ನು ತೋರಿಸಲಾರದು. ಆದ್ದರಿಂದಲೇ ಕುಂತಿ ಕೃಷ್ಣನನ್ನು ಅಕಿಂಚನಗೋಚರ(ಏನೂ ಇಲ್ಲದವನಿಗೆ ಕಾಣಿಸುವವನು) ಎಂದು ಸ್ತುತಿಸಿದ್ದಾಳೆ

Thursday 31 January 2019


ಸುಭಾಷಿತ ೧೧


ಈರ್ಷ್ಯೀ ಘೃಣೀ ತ್ವಸಂತೃಪ್ತಃ ಕ್ರೋಧನೋ ನಿತ್ಯ ಶಂಕಿತಃ।ಪರಭಾಗ್ಯೋಪಜೀವೀ ಚ ಷಡೇತೇ ದುಃಖಭಾಗಿನಃ॥

 ಅನ್ವಯ ಅರ್ಥ:

ಈರ್ಷ್ಯೀ(ಅಸೂಯೆಯಿಂದ ಕೂಡಿದವನು)
ಘೃಣೀ(ಜುಗುಪ್ಸೆ ಹೊಂದಿದವನು) ಅಸಂತೃಪ್ತಃ(ತೃಪ್ತಿಯಿಲ್ಲದವನು)
 ಕ್ರೋಧನಃ(ಕೋಪಿಷ್ಠನು)
ನಿತ್ಯಶಂಕಿತಃ(ಸದಾ ಸಂಶಯದಿಂದ ಕೂಡಿದವನು)
ಚ(ಮತ್ತು)
ಪರಭಾಗ್ಯೋಪಜೀವೀ(ಬೇರೆಯವರ ಸಂಪತ್ತಿನಲ್ಲಿ ಬದುಕುವವನು)
ಏತೇ ಷಟ್(ಈ ಆರು ಮಂದಿ)
ದುಃಖಭಾಗಿನಃ(ದುಃಖ ಹೊಂದುವವರು).


 ಭಾವಾರ್ಥ:

ಇತರರ ಬಗ್ಗೆ ಅಸೂಯೆ ಇದ್ದರೆ ತನ್ನಲ್ಲಿ ಎಷ್ಟು ಸಂಪತ್ತಿದ್ದರೂ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಇತರರ ಸುಖವನ್ನು ಕಂಡು ಕರುಬುವುದರಲ್ಲೇ ಜೀವನ ಕಳೆದು ಹೋಗುತ್ತದೆ. ಜುಗುಪ್ಸೆ ಹೊಂದಿದವನಿಗೆ ಮುಂದೆಲ್ಲ ಕತ್ತಲಾಗಿಯೇ ಕಾಣಿಸುವುದು. ಮುಂದೊಂದು ದಿನ ನನಗೂ ಸುಖವಿದೆ ಎಂಬ ಆಶಾಭಾವನೆಯಿಲ್ಲದೆ ಅವಿವೇಕದಿಂದ ಇರುವ ಸುಖವನ್ನೂ ಕಳೆದುಕೊಳ್ಳುವನು. ತೃಪ್ತಿ ಇದ್ದರೆ ಅದಕ್ಕಿಂತ ಮಿಗಿಲಾದ ಸುಖವಿಲ್ಲ. ಕಷ್ಟ ಸುಖಗಳು ಜೀವನದಲ್ಲಿ ಇರುವುದೇ. ಅದನ್ನು ಅರಿಯದೆ ಪುರಂದರದಾಸರು ಹೇಳಿದಂತೆ ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಇದ್ದರೆ ಇರುವ ಸುಖವನ್ನು ಅನುಭವಿಸುವುದು ಹೇಗೆ ಸಾಧ್ಯ? ಕೋಪವಿದ್ದವನಿಗೆ ವಿವೇಕವಿಲ್ಲ. ಹಿಂದು ಮುಂದು ಯೋಚಿಸದೆ ಮುನ್ನುಗ್ಗಿ ಕಷ್ಟಕ್ಕೊಳಗಾಗುತ್ತಾನೆ. ಕ್ಷಣಕಾಲ ತಾಳ್ಮೆವಹಿಸಿದರೆ ಮುಂದಿರುವ ಅನಾಹುತವನ್ನು ಖಂಡಿತಾ ತಪ್ಪಿಸಬಹುದು. ಸಂಶಯಾತ್ಮಾ ವಿನಶ್ಯತಿ. ಸಂಶಯವಿರುವುದು ಮನಸ್ಸಿನಲ್ಲಿ. ನಂಬಿಕೆಯಿರುವುದು ಅಂತರಾತ್ಮದಲ್ಲಿ. ಅಂತರಾತ್ಮದ ಬೆಳಕಿನಲ್ಲಿ ವಿವೇಚಿಸಿದರೆ ಸಂಶಯ ತಾನಾಗಿಯೇ ನಿವಾರಣೆಯಾಗುತ್ತದೆ. ಭಗವಂತನ ಅನುಗ್ರಹ ದೊರೆಯುತ್ತದೆ. ಅದು ಬಿಟ್ಟು ಎಲ್ಲವನ್ನೂ ಸಂಶಯದಿಂದಲೇ ಕಂಡರೆ ಸುಖವೆಲ್ಲಿಂದ ಸಿಗಬೇಕು? ತಾನು ಸಾಯಬೇಕು, ಸ್ವರ್ಗ ಪಡೆಯಬೇಕು. ಕಷ್ಟ ಪಟ್ಟು ಸಂಪಾದಿಸಿದರೆ ಅದರಿಂದಷ್ಟೇ ಸುಖ. ಇನ್ನೊಬ್ಬರ ಸೊತ್ತಿನಲ್ಲಿ ನಾವೆಷ್ಟು ದಿನ ಸುಖಪಡಬಹುದು? ಆದ್ದರಿಂದ ಈರ್ಷ್ಯೆ ಜುಗುಪ್ಸೆ ಉಳ್ಳವರು, ತೃಪ್ತಿಯಿಲ್ಲದವರು, ಕೋಪಿಗಳು, ಸಂಶಯಾತ್ಮರು,ಪರೋಪಜೀವಿಗಳು ಈ ಆರು ಮಂದಿ ನಿಶ್ಚಯವಾಗಿಯೂ ದುಃಖಭಾಜನರು.

Tuesday 29 January 2019

ಸುಭಾಷಿತ ೧೦

  ತೃಷ್ಣಾಂ ಛಿಂಧಿ ಭಜ ಕ್ಷಮಾಂ ತ್ಯಜ ಮದಂ ಪಾಪೇ ರತಿಂ ಮಾ ಕೃಥಾಃ। ಸತ್ಯಂ ಬ್ರೂಹ್ಯನುಯಾಹಿ ಸಾಧುಪದವೀಂ ಸೇವಸ್ವ ವಿದ್ವಜ್ಜನಮ್॥
ಮಾನ್ಯಾನ್ ಮಾನಯ ವಿದ್ವಿಷೋऽ– ಪ್ಯನುನಯಂ ಪ್ರಚ್ಛಾದಯ ಸ್ವಾನ್ ಗುಣಾನ್।
ಕೀರ್ತಿಂ ಪಾಲಯ ದುಃಖಿತೇ ಕುರುದಯಾಮೇತತ್ಸತಾಂ
ಚೇಷ್ಟಿತಮ್॥

ಅನ್ವಯ ಅರ್ಥ:

ತೃಷ್ಣಾಂ (ಆಸೆಯನ್ನು)
 ಛಿಂಧಿ (ತೊಡೆದುಹಾಕು)
 ಕ್ಷಮಾಂ ಭಜ (ಕ್ಷಮಾಗುಣವನ್ನು ಹೊಂದು)
ಮದಂ ತ್ಯಜ(ಮದವನ್ನು ಬಿಡು)
 ಪಾಪೇ (ಪಾಪದಲ್ಲಿ)
ರತಿಂ (ಪ್ರೀತಿಯನ್ನು)
ಮಾ ಕೃಥಾಃ(ಮಾಡಬೇಡ)
ಸತ್ಯಂ ಬ್ರೂಹಿ(ಸತ್ಯವನ್ನು ನುಡಿ)
 ಸಾಧುಪದವೀಂ(ಸಜ್ಜನರ ಹಾದಿಯನ್ನು) ಅನುಯಾಹಿ(ಅನುಸರಿಸು)
 ವಿದ್ವಜ್ಜನಂ(ವಿದ್ವಾಂಸರನ್ನು)
 ಸೇವಸ್ವ(ಸೇವೆಮಾಡು)
ಮಾನ್ಯಾನ್ (ಹಿರಿಯರನ್ನು/ ಗೌರವಿಸಬೇಕಾದವರನ್ನು) ಮಾನಯ(ಗೌರವಿಸು)

 ವಿದ್ವಿಷಃ ಅಪಿ(ದ್ವೇಷಿಸುವವರನ್ನೂ) ಅನುನಯ(ಅನುನಯಿಸು)
 ಸ್ವಾನ್ ಗುಣಾನ್(ತನ್ನಲ್ಲಿರುವ ಗುಣಗಳನ್ನು) ಪ್ರಚ್ಚಾದಯ(ಮುಚ್ಚಿಡು)
 ಕೀರ್ತಿಂ(ಕೀರ್ತಿಯನ್ನು)
 ಪಾಲಯ(ಉಳಿಸಿಕೊ)
 ದುಃಖಿತೇ(ದುಃಖಿಗಳಲ್ಲಿ)
ದಯಾಂ ಕುರು(ದಯೆತೋರು)
 ಏತತ್(ಇದು)
ಸತಾಂ(ಸಜ್ಜನರ)
ಚೇಷ್ಟಿತಮ್(ನಡತೆಯು).


ಭಾವಾರ್ಥ:

 ದೊಡ್ಡವರೆನಿಸಿಕೊಳ್ಳುವುದು ತೋರಿಕೆಯ ದೊಡ್ಡತನದಿಂದಲ್ಲ, ನಯವಿನಯದಿಂದ. ದೊಡ್ಡವರೆನಿಸಿಕೊಳ್ಳುವುದು ಭೋಗದಿಂದಲ್ಲ, ತ್ಯಾಗದಿಂದ. ತಾನು ತನಗೆ ತನ್ನದು ಎಂಬ ಲೋಭವನ್ನು ಬಿಟ್ಟು ನಾವು ನಮಗೆ ನಮ್ಮದು ಎಂದಾಗ ದೊಡ್ಡವರಾಗುತ್ತೇವೆ. ದಂಡಿಸುವ ಶಕ್ತಿಯಿದ್ದೂ ಮದದಿಂದ ಪ್ರತೀಕಾರ ಮಾಡದೆ ಕ್ಷಮಿಸುವುದು ದೊಡ್ಡವರ ಲಕ್ಷಣ. ಸಜ್ಜನರು ಎಷ್ಟೇ ಕಷ್ಟ ಬಂದರೂ ಸತ್ಯವನ್ನು ಬಿಡಲಾರರು ಪಾಪದಲ್ಲಿ ತೊಡಗಲಾರರು. ವಿನಯದಿಂದ ಸಾಧುಜನರನ್ನು ಅನುಸರಿಸುವರು. ತಾವು ಸ್ವತಃ ವಿದ್ವಾಂಸರಾದರೂ ಇತರ ಗರ್ವಪಡದೆ ವಿದ್ವಜ್ಜನರನ್ನೂ ಹಿರಿಯರನ್ನೂ ಗೌರವಿಸುವರು. ದ್ವೇಷಿಸುವವರನ್ನೂ ಪ್ರೀತಿಯಿಂದ ಗೆಲ್ಲುವರು. ತಮ್ಮ ಗುಣಸಾಮರ್ಥ್ಯಗಳನ್ನು ಹೊಗಳಿಕೊಳ್ಳದೆ ವಿನೀತರಾಗಿರುವರು. ದುಃಖಿಗಳ ದುಃಖದಲ್ಲಿಭಾಗಿಗಳಾಗಿ ಕಣ್ಣೊರಸುವರು. ಇದೇ ಸಜ್ಜನರ ದಾರಿ. ಫಲಗಳಿಂದ ಕೂಡಿದ ತರುಗಳು ಗರ್ವದಿಂದ ಬೀಗುವುದಿಲ್ಲ, ನಮ್ರತೆಯಿಂದ ಬಾಗುತ್ತವೆ. ಎತ್ತರದಲ್ಲಿರುವ ಮೋಡಗಳು ಹೊಸ ನೀರಿನಿಂದ ತುಂಬಿದಾಗ ವಿನಯವಾಗಿ ಭೂಮಿಗಿಳಿಯುತ್ತವೆ. ಹಾಗಿರುವಾಗ ಬುದ್ಧಿಯುಳ್ಳವರಾದ ನಾವು ಮಹಾಮನೀಷಿಗಳೆಂದು ಏಕೆ ಬೀಗಬೇಕು? ಸಜ್ಜನರ ದಾರಿಯಲ್ಲಿ ಸಾಗಿ ದೊಡ್ಡವರಾಗಲು ಪ್ರಯತ್ನಿಸೋಣ.
ಸುಭಾಷಿತ  ೯

ಗುಣಾನಾಮಂತರಂ ಪ್ರಾಯಃ ತಜ್ಞೋ ವೇತ್ತಿ ನ ಚಾಪರಃ।ಮಾಲತೀಮಲ್ಲಿಕಾಮೋದಂ ಘ್ರಾಣಂ ವೇತ್ತಿ ನ ಲೋಚನಮ್।।

ಅನ್ವಯ ಅರ್ಥ:

 ಗುಣಾನಾಂ ಅಂತರಂ (ಗುಣಗಳಲ್ಲಿನ ಭೇದವನ್ನು) ತಜ್ಞಃ(ನಿಪುಣನು)
ವೇತ್ತಿ (ಅರಿಯುತ್ತಾನೆ)
 ನ ಅಪರಃ(ವೇತ್ತಿ)(ಬೇರೆಯವ ಅರಿಯಲಾರ) ಮಾಲತೀಮಲ್ಲಿಕಾಮೋದಂ(ಜಾಜಿ ಮಲ್ಲಿಗೆಗಳ ಪರಿಮಳವನ್ನು) ಘ್ರಾಣಂ (ಮೂಗು)
 ವೇತ್ತಿ (ಅರಿಯುತ್ತದೆ)
 ಲೋಚನಮ್ (ಕಣ್ಣು) (ನ ವೇತ್ತಿ)(ಅರಿಯಲಾರದು).

ಭಾವಾರ್ಥ:

ಒಂದು ವಿಷಯದ ಗುಣಾವಗುಣಗಳನ್ನು ವಿಮರ್ಶಿಸಬೇಕಾದರೆ ಆ ವಿಷಯದ ಬಗ್ಗೆ ತಿಳಿವಳಿಕೆ ಇರಬೇಕು. ವಿಷಯ ಅರಿಯದೆ ಟೀಕಿಸುವುದು ಕೇವಲ ಮೂರ್ಖತನ. ಮಲ್ಲಿಗೆಯ ಜಾಜಿಯ ಸೌಂದರ್ಯವನ್ನು ಕಣ್ಣು ನೋಡಬಹುದೇ ಹೊರತು ಅದರ ಗಂಧದ ಆಸ್ವಾದನೆ ಆ ಕಣ್ಣಿಗೆ ಸಾಧ್ಯವಿಲ್ಲ. ಒಳ್ಳೆಯ ಸಂಗೀತವನ್ನು ಎಲ್ಲರೂ ಕೇಳಬಹುದು. ಆದರೆ ಅದನ್ನು ಸಂಪೂರ್ಣವಾಗಿ ಅರಿತು ಆನಂದಿಸಬೇಕಾದರೆ ಸಂಗೀತದ ಜ್ಞಾನ ಬೇಕೇ ಬೇಕು. ಕಾವ್ಯದ ಜ್ಞಾನವಿಲ್ಲವನಿಗೆ ಕಾಳಿದಾಸನ ಕಾವ್ಯವೂ ರಸಹೀನವಾಗಿ ಕಾಣಿಸುತ್ತದೆ. ಭಗವಂತನ ಕಲ್ಪನೆಯೇ ಇಲ್ಲದ ಮೂರ್ಖನಿಗೆ ಭಗವದ್ಗೀತೆಯಲ್ಲೂ ಹುಳುಕೇ ಕಾಣಿಸುವುದಲ್ಲದೆ ಅದರ ಗುರುತ್ವದ ಅರಿವೇ ಆಗಲಾರದು.

Saturday 19 January 2019



ಸುಭಾಷಿತ - ೮

ಸಹಜೋಽಪಿ ಗುಣಃ ಪುಂಸಾಂ
ಸಾಧುವಾದೇನ ವರ್ಧತೇ।
ಕಾಮಂ ಸುರಸಲೇಪೇನ
ಕಾಂತಿಂ ವಹತಿ ಕಾಂಚನಮ್॥

ಅನ್ವಯ ಅರ್ಥ:

ಪುಂಸಾಂ (ಜನರ)
ಸಹಜಃ ಅಪಿ ಗುಣಃ(ಸಹಜ ಗುಣಗಳೂ)
ಸಾಧುವಾದೇನ(ಪ್ರಶಂಸೆಯಿಂದ)
ವರ್ಧತೇ(ಹೆಚ್ಚುತ್ತದೆ)
ಕಾಮಂ(ಯಥೇಷ್ಟವಾಗಿ)
ಸುರಸಲೇಪೇನ(ಸುರಸಲೇಪದಿಂದ)
ಕಾಂಚನಂ (ಚಿನ್ನವು)
ಕಾಂತಿಂ ವಹತಿ(ಕಾಂತಿಹೊಂದುತ್ತದೆ)

ಭಾವಾರ್ಥ:

ಸುಪ್ತವಾಗಿದ್ದರೂ ಪ್ರತಿಭೆಯು ತಾನಾಗಿಯೇ ಬೆಳಗಬಲ್ಲುದಾದರೂ      ಸಾಕಷ್ಟು  ಪ್ರೋತ್ಸಾಹ ಸಿಕ್ಕಿದರೆ ಇನ್ನಷ್ಟೂ ಬೆಳಗುತ್ತದೆ.
ಚಿನ್ನಕ್ಕೆ ತನ್ನದೇ ಕಾಂತಿಯಿದ್ದರೂ ಪುಟವಿಟ್ಟು ಸಂಸ್ಕರಿಸುವುದರಿಂದ ಇನ್ನಷ್ಟೂ ಹೊಳಪು ಬರುತ್ತದೆ. ಹಾಗೆಯೇ ಬಿಟ್ಟರೆ ಅದೇ ಹೊಳಪು ತಾತ್ಕಾಲಿಕವಾಗಿಯಾದರೂ ಕುಂದಿಹೋಗುವುದು.
  ಸಹಜವಾಗಿಯೇ ಹಾಡುಗಾರನಾಗಿದ್ದರೂ ಆತನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ತರಬೇತಿ ನೀಡಿದರೆ ಆಗ ಸುಪ್ರಸಿದ್ಧ ಗಾಯಕನಾಗಬಹುದು.
   ನುರಿತ ಕಲಾವಿದನೇ ಆದರೂ ಹೆಚ್ಚು ಹೆಚ್ಚು  ಪ್ರೋತ್ಸಾಹದಿಂದ ಇನ್ನಷ್ಟೂ ಹೆಚ್ಚು  ಶ್ರೇಷ್ಠ ಕಲಾಕೃತಿಗಳು ಆತನಿಂದ ಹೊಮ್ಮಬಹುದು.

Friday 18 January 2019

 ಸುಭಾಷಿತ  ೭

ಯಥಾ ಖರಶ್ಚಂದನಭಾರವಾಹೀ ಭಾರಸ್ಯ ವೇತ್ತಾ ನ ತು ಚಂದನಸ್ಯ।
ಏವಂ ಹಿ ಶಾಸ್ತ್ರಾಣಿ ಬಹೂನ್ಯಧೀತ್ಯ ಚಾರ್ಥೇಷು ಮೂಢಾಃ ಖರವದ್ವಹಂತಿ॥


ಅನ್ವಯ ಅರ್ಥ:

 ಚಂದನಭಾರವಾಹೀ (ಚಂದನದ ಕಟ್ಟಿಗೆಗಳನ್ನು ಹೊತ್ತು ಸಾಗುವ)
ಖರಃ(ಕತ್ತೆಯು)
 ಯಥಾ(ಹೇಗೆ)
 ಭಾರಸ್ಯ ವೇತ್ತಾ(ಭಾರವನ್ನು ಮಾತ್ರ ತಿಳಿಯುವುದೋ)
 ನ ತು ಚಂದನಸುಗಂಧಸ್ಯ ವೇತ್ತಾ(ಚಂದನದ ಸುಗಂಧವನ್ನು ತಿಳಿಯಲಾರದೋ)
ಏವಂ ಹಿ (ಹಾಗೆಯೇ)
ಬಹೂನಿ ಶಾಸ್ತ್ರಾಣಿ( ಬಹಳ ಶಾಸ್ತ್ರಗಳನ್ನು)
 ಅಧೀತ್ಯ (ಓದಿಯೂ)
ಅರ್ಥೇಷು(ಅವುಗಳ ವಿಷಯದಲ್ಲಿ)
ಮೂಢಾಃ(ಮೂಢರಾಗಿ)
ಖರವತ್(ಕತ್ತೆಯಂತೆಯೇ)
 ಶಾಸ್ತ್ರಾಣಿ ವಹಂತಿ (ಶಾಸ್ತ್ರಗಳನ್ನು ಹೊರುತ್ತಾರೆ)

ಭಾವಾರ್ಥ:

 ಭಾರವನ್ನು ಹೊರುವ ಕತ್ತೆಗೆ ತಾನು ಹೊರುತ್ತಿರುವುದು ಕಟ್ಟಿಗೆಯಾದರೂ ಅಷ್ಟೇ ಚಂದನವಾದರೂ ಅಷ್ಟೇ. ಹೊರುವ ಭಾರವಷ್ಟೇ ಅದರ ಅರಿವಿಗೆ ಬಂದೀತು. ಕಸ್ತೂರಿಯನ್ನೇ ಹೊರುತ್ತಿದ್ದರೂ ಅದರ ಸುಗಂಧವಾಗಲೀ ಬೆಲೆಯಾಗಲೀ ಅದರ ಅರಿವಿಗೆ ಬರದು. ವೇದಶಾಸ್ತ್ರಗಳನ್ನು ಓದಿದರೆ ಸಾಲದು. ಅಧ್ಯಯನ ಮಾಡಿ ಅರ್ಥವರಿತು ಮಹತ್ವವನ್ನರಿತು ಆಚರಿಸಿದರೆ ಮಾತ್ರ ಓದಿದುದಕ್ಕೊಂದು ಬೆಲೆ. ಬಹಳ ಶಾಸ್ತ್ರಗಳನ್ನು ಓದಿ ಅವುಗಳ ಒಳಗನ್ನು ತಿಳಿಯದೆ, ಆಚರಣೆಗೆ ತಾರದೆ *ವಿದ್ಯಾ ವಿವಾದಾಯ* ಎಂಬಂತೆ ಕೇವಲ ವಾದಕ್ಕಾಗಿ, ಆಡುವುದಕ್ಕಾಗಿ ಮಾತ್ರ ಶಾಸ್ತ್ರಗಳನ್ನು ಉಪಯೋಗಿಸಿದರೆ ಆ ಪಂಡಿತರು ಕೇವಲ ತಲೆಯಲ್ಲಿ ಶಾಸ್ತ್ರಗಳ ಭಾರವನ್ನು ಹೊತ್ತ ಕತ್ತೆಯಂತೆಯೇ ಸರಿ.

Thursday 17 January 2019

ಸುಭಾಷಿತ  - ೬


ನಮಂತಿ ಫಲಿತಾ ವೃಕ್ಷಾಃ ನಮಂತಿ ಚ ಬುಧಾ ಜನಾಃ|
ಶುಷ್ಕಕಾಷ್ಟಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಹಿ॥

*ಅನ್ವಯ ಅರ್ಥ:*

ಫಲಿತಾಃ ವೃಕ್ಷಾಃ(ಹಣ್ಣುಗಳಿರುವ ಮರಗಳು)
 ನಮಂತಿ(ಬಾಗುತ್ತವೆ)
ಚ(ಮತ್ತು)
ಬುಧಾಃ ಜನಾಃ(ಜ್ಞಾನಿಗಳಾದ ಜನರು)
ನಮಂತಿ(ಬಾಗುತ್ತಾರೆ)
ಶುಷ್ಕಕಾಷ್ಠಾನಿ (ಒಣಗಿದ ಮರದ ಕೋಲುಗಳು)
ಚ (ಮತ್ತು)
ಮೂರ್ಖಾಃ(ಮೂರ್ಖರು)
ಭಿದ್ಯಂತೇ (ಮುರಿಯುತ್ತವೆ)
ನ ನಮಂತಿ(ಬಾಗುವುದಿಲ್ಲ).

*ಭಾವಾರ್ಥ:*

ನಯ ವಿನಯ ಸಜ್ಜನರ ಲಕ್ಷಣ. ಹಣ್ಣುಗಳು ಹೆಚ್ಚಿದ್ದಷ್ಟೂ ಮರಗಳು ಹೆಚ್ಚು ಹೆಚ್ಚು ಬಾಗುತ್ತವೆ. ಹಣ್ಣುಗಳಿವೆ ಎಂದು ಗರ್ವದಿಂದ ಅವು ಸೆಟೆಯುವುದಿಲ್ಲ.  ಜ್ಞಾನ ಹೆಚ್ಚಿದಂತೆ ಸಜ್ಜನರು ಹೆಚ್ಚು ಹೆಚ್ಚು ವಿನಯವಂತರಾಗುತ್ತಾರೆ.
ಉಪಯೋಗಲ್ಲದ, ಹೂ ಹಣ್ಣುಗಳಿಲ್ಲದ ಮರ ಮುರಿದೀತೇ ಹೊರತು ಎಂದೂ ಬಾಗುವುದಿಲ್ಲ.
ಮೂರ್ಖರು ಹಾಗೆಯೇ,
ನಯವಿನಯ ಅವರಲ್ಲಿಲ್ಲ. ಏನೂ ಅರಿಯದಿದ್ದರೂ ಜಂಭದಿಂದ ಬೀಗುತ್ತಾರೆ. ಎಂದಿಗೂ ಜ್ಞಾನಿಗಳ ಮುಂದೆ ಗುರುಹಿರಿಯರ ಮುಂದೆ ವಿನಯದಿಂದ ವರ್ತಿಸಲಾರರು.
ಸುಭಾಷಿತ -  ೫

ಕ್ಷಿಪ್ರಂ ವಿಜಾನಾತಿ ಚಿರಂ ಶೃಣೋತಿ।
ವಿಜ್ಞಾಯ ಚಾರ್ಥಂ ಭಜತೇ ನ ಕಾಮಾತ್॥
ನಾಸಂಪೃಷ್ಟೋ  ಹ್ಯುಪಯುಂಕ್ತೇ ಪರಾರ್ಥೇ।
ತತ್ಪ್ರಜ್ಞಾನಂ ಪ್ರಥಮಂ ಪಂಡಿತಸ್ಯ॥

ಅನ್ವಯ ಅರ್ಥ:

ಕ್ಷಿಪ್ರಂ (ಶೀಘ್ರವಾಗಿ)
ವಿಜಾನಾತಿ (ತಿಳಿದುಕೊಳ್ಳುತ್ತಾನೆ)
ಚಿರಂ(ದೀರ್ಘ ಕಾಲ)
ಶೃಣೋತಿ (ಕೇಳುತ್ತಾನೆ)
ವಿಜ್ಞಾಯ ಚ(ತಿಳಿದಿದ್ದರೂ)
ಕಾಮಾತ್(ಆಸೆಗೊಳಗಾಗಿ)
ಅರ್ಥಂ(ಲಾಭವನ್ನು)
ನ ಲಭತೇ (ಹೊಂದಬಯಸುವುದಿಲ್ಲ)
ಅಸಂಪೃಷ್ಟಃ(ಕೇಳದೆಯೇ)
ಪರಾರ್ಥೇ(ಅನ್ಯರ ವಿಷಯದಲ್ಲಿ)
ನ ಹಿ ಉಪಯುಂಕ್ತೇ (ತೊಡಗಿಸಿಕೊಳ್ಳುವುದಿಲ್ಲ)
ತತ್(ಅದು)
ಪಂಡಿತಸ್ಯ(ಜ್ಞಾನಿಯ)
ಪ್ರಜ್ಞಾನಮ್(ಬುದ್ಧಿಯು)

ಭಾವಾರ್ಥ:

ಜ್ಞಾನಿಯಾದವನು  ಯಾವುದೇ ವಿಷಯಗಳನ್ನು ಬಹಳ ಬೇಗನೆ ತಿಳಿದುಕೊಳ್ಳುತ್ತಾನೆ. ತಿಳಿದಿದ್ದರೂ ತಾನು ತಿಳಿದಿರುವುದೇ ಸರಿ ಎಂದುಕೊಳ್ಳುವುದಿಲ್ಲ.ಒಮ್ಮೆಲೇ ಕಾರ್ಯಪ್ರವೃತ್ತನಾಗುವುದಿಲ್ಲ.
 ಇತರರ ಸಲಹೆ ಸೂಚನೆಗಳನ್ನು ಗೌರವಿಸಿ  ಅವರ ಮಾತುಗಳನ್ನು ಸಹನೆಯಿಂದ ಸಂಪೂರ್ಣವಾಗಿ ಕೇಳುತ್ತಾನೆ. ಸಾಧಕ ಬಾಧಕಗಳನ್ನು ಚೆನ್ನಾಗಿ ವಿಮರ್ಶಿಸಿಕೊಳ್ಳುತ್ತಾನೆ.
 ಲಾಭವಿದೆಯೆಂದು ಅರಿತಿದ್ದರೂ ಪುರುಷಾರ್ಥಕ್ಕಾಗಿ ತೊಡಗುತ್ತಾನೆಯೇ ಹೊರತು ಸ್ವಾರ್ಥಕ್ಕಾಗಿ ಎಂದೂ ಕಾರ್ಯಪ್ರವೃತ್ತನಾಗುವದಿಲ್ಲ.
ಹಾಗೆಂದು ಇತರರು ಅಪೇಕ್ಷೆ ಪಡದೆ ಅವರ ವಿಷಯದಲ್ಲಿ ಎಂದಿಗೂ  ತಲೆಹಾಕುವದಿಲ್ಲ.
ತಿಳಿದಿದೆಯೆಂದು ವೃಥಾ ಕಾರ್ಯವೆಸಗಲಾರ.
 ಅಗತ್ಯವಿದ್ದಲ್ಲಿ ಉಪಕರಿಸಲು ಹಿಂಜರಿಯಲಾರ.
ಇದು ಪಂಡಿತರ ಲಕ್ಷಣ.
ಸುಭಾಷಿತ  - ೪

ಉಚಿತಂ ವ್ಯಯಶೀಲಸ್ಯ ಕೃಶತ್ವಮಪಿ ಶೋಭತೇ।
ದ್ವಿತೀಯಶ್ಚಂದ್ರಮಾ ವಂದ್ಯೋ ನ ವಂದ್ಯಃ ಪೂರ್ಣಚಂದ್ರಮಾ।।

ಪದಚ್ಛೇದ:
ಉಚಿತಂ ವ್ಯಯಶೀಲಸ್ಯ ಕೃಶತ್ವಂ ಅಪಿ ಶೋಭತೇ।
ದ್ವಿತೀಯಃ ಚಂದ್ರಮಾ ವಂದ್ಯಃ ನ ವಂದ್ಯಃ ಪೂರ್ಣಚಂದ್ರಮಾ॥

ಅನ್ವಯ ಅರ್ಥ:
ಉಚಿತಂ(ಯುಕ್ತವಾಗಿ) ವ್ಯಯಶೀಲಸ್ಯ(ಖರ್ಚು ಮಾಡುವವನಿಗೆ)
 ಕೃಶತ್ವಂ ಅಪಿ(ಕ್ಷೀಣತ್ವವೂ)
ಶೋಭತೇ(ಶೋಭಿಸುತ್ತದೆ)
ದ್ವಿತೀಯಃ(ಬಿದಿಗೆಯ)
ಚಂದ್ರಮಾ(ಚಂದ್ರನು)
ವಂದ್ಯಃ(ಪೂಜಿಸಲ್ಪಡುತ್ತಾನೆ) ।
ಪೂರ್ಣಚಂದ್ರಮಾ(ಪೂರ್ಣಚಂದ್ರನು) ನ ವಂದ್ಯಃ(ಪೂಜಿಸಲ್ಪಡುವುದಿಲ್ಲ) ।।


ಭಾವಾರ್ಥ:

 ಸತ್ಪಾತ್ರರಿಗೆ ಧಾರಾಳವಾಗಿ ದಾನ ಮಾಡಿ ಒಬ್ಬನು ಆರ್ಥಿಕವಾಗಿ ಸೋತರೂ ಸಮಾಜದಲ್ಲಿ ಅವನಿಗೆ ಮನ್ನಣೆ ಇದೆ.
ಯಾರಿಗೂ ಕೊಡದೆ ಸದಾ ಸಂಗ್ರಹ ಮಾಡಿ ಶ್ರೀಮಂತನಾಗಿದ್ದರೆ ಎದುರಲ್ಲಿ ಎಲ್ಲರೂ ಅವನನ್ನು ಹೊಗಳುವರು ಆದರೆ ಅಂತರಂಗಲ್ಲಿ ಅವನನ್ನು  ಪೂಜಿಸಲಾರರು.
 ಬೆಳಕು ಚೆಲ್ಲಿ ಚೆಲ್ಲಿ ದಿನಕ್ಕೊಂದು ಕಲೆಯಷ್ಟು  ಕ್ಷೀಣಿಸಿ  ಕೇವಲ ಗೆರೆಯ ಹಾಗಿರುವ ಬಿದಿಗೆ ಚಂದ್ರನನ್ನು  ಎಲ್ಲರೂ ದೇವರ ಹಣೆಲ್ಲಿಯೋ ಶಿಖೆಯಲ್ಲಿಯೋ  ಇಟ್ಟು ಪೂಜಿಸುವರು.

ಅದೇ ಪೂರ್ಣಚಂದ್ರನ ಸೌಂದರ್ಯವನ್ನು ನೋಡಿ ಹೊಗಳಬಹುದೇ ಹೊರತು ಯಾರೂ  ಪೂಜಿಸಲಾರರು.

Wednesday 16 January 2019

ಸುಭಾಷಿತ  -೩


ಯಥಾ ಹ್ಯೇಕೇನ ಚಕ್ರೇಣ  ನ ರಥಸ್ಯ ಗತಿರ್ಭವತಿ।
ತಥೈವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ।।

ಪದಚ್ಛೇದ:
ಯಥಾ ಹಿ ಏಕೇನ ಚಕ್ರೇಣ ನ ರಥಸ್ಯ ಗತಿಃ ಭವತಿ।
ತಥಾ ಏವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ ।।

ಅನ್ವಯ ಅರ್ಥ:

ಯಥಾ(ಹೇಗೆ)
 ಏಕೇನ ಚಕ್ರೇಣ(ಒಂದೇ ಚಕ್ರದಿಂದ)
 ರಥಸ್ಯ ಗತಿಃ(ರಥದ ಚಲನೆಯು)
ನ ಹಿ ಭವತಿ(ಆಗಗುವುದಿಲ್ಲವೋ)
ತಥಾ ಏವ(ಹಾಗೆಯೇ)
 ದೈವಂ ವಿನಾ(ದೈವವಿಲ್ಲದೆ)
 (ಕೇವಲಂ) ಪುರುಷಯತ್ನೇನ (ಕೇವಲ ಪುರುಷಪ್ರಯತ್ನದಿಂದ)
 (ಕಾರ್ಯಂ)  ನ ಸಿಧ್ಯತಿ(ಕಾರ್ಯಸಿದ್ಧಿ ಆಗಲಾರದು) ।।

ಭಾವಾರ್ಥ:

ರಥ ನಡೆಯಬೇಕಾದರೆ ಎರಡು ಚಕ್ರಗಳು ಬೇಕೇ ಬೇಕು. ಎರಡೂ ಚಕ್ರಗಳೂ ಅನುನಯಿಸಿ ಹೋಗಬೇಕು.
ಸಂಕಲ್ಪಿತ ಕಾರ್ಯಸಿದ್ಧಿಗೆ ಒಂದು ಚಕ್ರ ಪುರುಷಪ್ರಯತ್ನವಾದರೆ ಇನ್ನೊಂದು ಚಕ್ರ ದೈವಸಹಾಯ. ಯಾವ ನಾಸ್ತಿಕನಾದರೂ ಅವನು ಕೇಳಿದರೂ ಕೇಳದ್ದರೂ ದೈವಸಹಾಯ ಇಲ್ಲದಿದ್ದರೆ ಕಾರ್ಯಪೂರ್ತಿ ಆಗಲಾರದು.
ಹಾಗೇ
ಎಷ್ಟೇ ದೊಡ್ಡ ಭಕ್ತನಾದರೂ ಏನೂ ಪ್ರಯತ್ನ ಮಾಡದೇ ದೈವದಿಂದಲೇ ಎಲ್ಲಾ ಕೆಲಸ ಆಗಬೇಕು ಎಂದರೆ ಅದು ಮೂರ್ಖತನ.
ಮಾ ತೇ ಸಂಗೋಽಸ್ತ್ವಕರ್ಮಣಿ
ಕರ್ಮ ಮಾಡದೆ ಫಲ ಸಿಗಲುಲ  ಸಾಧ್ಯವಿಲ್ಲ  ಎನ್ನುತ್ತಾನೆ ಶ್ರೀಕೃಷ್ಣ.

ಕಾಡಿನ ರಾಜನೇ ಆದರೂ ಸಿಂಹ ಆಹಾರಕ್ಕಾಗಿ ಬೇಟೆಯಾಡಲೇ ಬೇಕು. ಸುಮ್ಮನೆ ಬಾಯಗಲಿಸಿ ಕುಳಿತರೆ ಅದರ ಬಾಯಿಗೆ ಪ್ರಾಣಿಗಳು ತಾವಾಗಿಯೇ ಬಂದು ಬೀಳಲಾರವು.
ಪುರುಷಪ್ರಯತ್ನ ಬೇಕೇ  ಬೇಕು.
ಅದಕ್ಕೆ ದೈವಸಹಾಯವೂ ಬೇಕು ಆಗಲೇ ಕಾರ್ಯಕ್ಕೆ ಜಯ.
ಸುಭಾಷಿತ - ೨

ಏಕ ಏವ ಪದಾರ್ಥಸ್ತು ತ್ರಿಧಾ ಭವತಿ ವೀಕ್ಷಿತಃ।
ಕುಣಪಃ ಕಾಮಿನೀ ಮಾಂಸಂ ಯೋಗಿಭಿಃ ಕಾಮಿಭಿ  ಶ್ವಭಿಃ।।

ಅನ್ವಯಾರ್ಥ:

ಏಕಃ ಏವ ಪದಾರ್ಥಃ ತು(ಒಂದೇ ವಸ್ತುವು)
(ತ್ರಿಭಿಃ) ವೀಕ್ಷಿತಃ(ಮೂವರಿಂದ ನೋಡಲ್ಪಟ್ಟಾಗ)
 ತ್ರಿಧಾ ಭವತಿ ।(ಮೂರು ವಿಧವಾಗುತ್ತದೆ)
(ಯಥಾ ಏಕಂ ಏವ ಶರೀರಂ)
(ಒಂದೇ ಶರೀರವು)
ಯೋಗಿಭಿಃ ಕುಣಪಃ (ಇತಿ)(ಯೋಗಿಗಳಿಂದ ಶವವೆಂದೂ)
ಕಾಮಿಭಿಃ ಕಾಮಿನೀ(ಇತಿ)(ಕಾಮುಕನಿಂದ ಕಾಮಿನಿಯೆಂದೂ)  ಶ್ವಭಿಃ(ನಾಯಿಗಳಿಂದ)
 ಮಾಂಸಂ(ಇತಿ)
( ಜ್ಞಾಯತೇ ತಿಳಿಯಲ್ಪಡುತ್ತದೆ)


ಭಾವಾರ್ಥ:


ಒಂದೇ ವಸ್ತುವನ್ನು  ಕಂಡಾಗ  ಹಲವು ಜನರ ಮನಸ್ಸಿನಲ್ಲಿ ಹಲವು ಭಾವಗಳು ಉದಿಸಬಹುದು

ಒಂದು ಸ್ತ್ರೀ ಶರೀರ ಕಂಡ ಯೋಗಿ
ಏತನ್ಮಾಂಸವಸಾದಿ ವಿಕಾರಮ್ ಅಯ್ಯೋ ಇದು ಕೇವಲ  ಚರ್ಮಲ್ಲಿ ಸುತ್ತಿದ ಮಾಂಸ ಮೂಳೆಗಳ ತಡಿಕೆ ಎಂದೂಕೊಳ್ಳುತ್ತಾನೆ

ಅದೇ ಶರೀರ ಒಬ್ಬ ಸಾಮಾನ್ಯ ಕಾಮಿಗೆ ಕಾಮೋದ್ರೇಕ ಮಾಡುವುದು

ಒಂದು ಮಾಂಸಾಹಾರಿ ಕಾಡುನಾಯಿಯಂಥ ಪ್ರಾಣಿಗೆ ರುಚಿಯಾದ ಆಹಾರ ಕಂಡು ಬಾಯಲ್ಲಿ ನೀರೂರಬಹುದು

ಒಬ್ಬ ಸೌಂದರ್ಯೋಪಕ ಕಲಾವಿದನಿಗೆ ಒಂದು ಕಲಾಕೃತಿಯ ಪ್ರೇರಣೆಯಾದೀತು.
 ಅವರವರ ಭಾವ, ಸಂಸ್ಕಾರಕ್ಕೆ ಅನುಗುಣವಾಗಿ ಬೇರೆ ಬೇರೆ ಅನುಭವ ಉಂಟಾಗುವುದು.

ರತ್ನಾಕರ ವರ್ಣಿ ಹೇಳುವಂತೆ  ಶಿಲೆಯ ಮೇಲಿರ್ಪ ಭೋಗಿಗಳುಂಟು ಮೊಲೆಯ ಮೇಲಿರ್ಪ ಯೋಗಿಗಳುಂಟು